ಬೆಂಗಳೂರು: ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪುಟ್ಟರಂಗಶೆಟ್ಟಿ ಅವರು ಸಚಿವ ನಾರಾಯಣಗೌಡ ಅವರಿಗೆ ಪ್ರಶ್ನೆ ಕೇಳುವುದು ಅನೈತಿಕ. ಅವರಿಗೆ ಪ್ರಶ್ನೆ ಕೇಳುವುದಿಲ್ಲ ಎಂದು ಹೇಳಿದಾಗ, ಆಡಳಿತ ಪಕ್ಷ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಬಳಿಕ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ಪ್ರಶ್ನೋತ್ತರ ವೇಳೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪುಟ್ಟರಂಗಶೆಟ್ಟಿ ಅವರ ಹೆಸರನ್ನು ಕರೆದು ಪ್ರಶ್ನೆ ಕೇಳುವಂತೆ ಸೂಚಿಸಿದರು. ಆಗ ಎದ್ದುನಿಂತ ಪುಟ್ಟರಂಗಶೆಟ್ಟಿ ಅವರು, ಸಚಿವ ನಾರಾಯಣಗೌಡ ಸೇರಿದಂತೆ 6 ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇವರ ವರ್ತನೆ ಅನೈತಿಕ. ಹಾಗಾಗಿ ಸಚಿವರಿಗೆ ಪ್ರಶ್ನೆ ಕೇಳುವುದಿಲ್ಲ ಎಂದರು.
ಆಗ ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ ಗೋವಿಂದ ಕಾರಜೋಳ ಅವರು, ಈ ರೀತಿಯ ಹೇಳುವುದು ಸರಿಯಲ್ಲ. ಸದನದಲ್ಲಿ ಪ್ರಶ್ನೆ ಕೇಳುವುದಿಲ್ಲ ಎಂಬುದು ಪದ್ಧತಿ ಅಲ್ಲ. ಈ ರೀತಿ ನಡೆದುಕೊಳ್ಳಬೇಡಿ ಎಂದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ನಾರಾಯಣಗೌಡ, ನನ್ನ ಅನೈತಿಕತೆ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ. ಸಚಿವರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರು ಸಹ ನಾರಾಯಣಗೌಡ ಬೆಂಬಲಕ್ಕೆ ನಿಂತರು.
ಇದನ್ನೂಓದಿ:ಹಾಸನದ ಅಧಿಕಾರಿಯೊಬ್ಬ ಗುಂಡು ಹೊಡೆಯುವ ಧಮ್ಕಿ ಹಾಕ್ತಿದ್ದಾನೆ: ಹೆಚ್.ಡಿ ರೇವಣ್ಣ
ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಸದನದಲ್ಲಿ ಪ್ರಶ್ನೆ ಕೇಳದೆ ಈ ರೀತಿ ಮಾತನಾಡುವುದು ಸರಿಯಾದ ಕ್ರಮ ಅಲ್ಲ. ಇಂತಹ ಮಾತನಾಡಬೇಡಿ ಎಂದು ಸೂಚಿಸಿದರು. ಪುಟ್ಟರಂಗಶೆಟ್ಟಿ ಅವರು ಆಡಿದ ಮಾತನ್ನು ಕಡತದಿಂದ ತೆಗೆಸಬೇಕು. ಜೊತೆಗೆ ಅವರು ಕ್ಷಮೆ ಕೇಳಬೇಕು ಎಂದು ನಾರಾಯಣಗೌಡ ಒತ್ತಾಯಿಸಿದರು. ಆಗ ಸಭಾಧ್ಯಕ್ಷರು ಈ ಬಗ್ಗೆ ಪರಿಶೀಲಿಸಿ ಕೂಲಿಂಗ್ ನೀಡುವುದಾಗಿ ತಿಳಿಸಿ ಈ ಚರ್ಚೆಗೆ ತೆರೆ ಎಳೆದರು.