ಕರ್ನಾಟಕ

karnataka

ETV Bharat / state

ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೇ ತನಿಖೆ ನಡೆಸುವಂತಿಲ್ಲ: ಹೈಕೋರ್ಟ್

ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೇ ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ಭ್ರಷ್ಟಾಚಾರ ಆರೋಪದ ಖಾಸಗಿ ದೂರುಗಳ ತನಿಖೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ.

karnataka-high-court-order-on-corruption-allegations-case-inquiry
ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ತನಿಖೆ ನಡೆಸುವಂತಿಲ್ಲ : ಹೈಕೋರ್ಟ್

By

Published : Jul 27, 2023, 5:40 PM IST

ಬೆಂಗಳೂರು:ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ಭ್ರಷ್ಟಾಚಾರ ಆರೋಪದ ಖಾಸಗಿ ದೂರುಗಳ ಸಂಬಂಧ ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17(ಎ) ಪ್ರಕಾರ ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೆ ತನಿಖೆ ನಡೆಸುವಂತಿಲ್ಲ ಎಂದು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಖಾಸಗಿ ದೂರು ಪರಿಗಣಿಸಿ ತನ್ನ ವಿರುದ್ಧ ತನಿಖೆಗೆ ಆದೇಶಿಸಿರುವ ಸೆಷನ್ಸ್ ನ್ಯಾಯಾಲಯದ ಆದೇಶದ ಕಾನೂನುಬದ್ಧತೆ ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಯಾಗಿದ್ದ ವಿ. ಆಶೋಕ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಕೆಲವು ಸಂದರ್ಭಗಳನ್ನು ಹೊರತುಪಡಿಸಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಸರ್ಕಾರಿ ಅಧಿಕಾರಿಯ ವಿರುದ್ಧ ಪೊಲೀಸ್ ಅಧಿಕಾರಿಗಳು ವಿಚಾರಣೆ ಅಥವಾ ತನಿಖೆಯನ್ನು ನಡೆಸುವಂತಿಲ್ಲ ಎಂಬ ಷರತ್ತನ್ನು ಭ್ರಷ್ಟಾಚಾರ ನಿಯಂತ್ರಣಾ ಕಾಯಿದೆ ಸೆಕ್ಷನ್ 17(ಎ)ಕ್ಕೆ 2018ರಲ್ಲಿ ಸೇರಿಸಲಾಗಿದೆ. ಖಾಸಗಿ ದೂರುಗಳ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ ಸರ್ಕಾರಿ ನೌಕರರ ವಿರುದ್ದ ವಿನಾಃಕಾರಣ ಕಾನುನು ಕ್ರಮಕ್ಕೆ ಮುಂದಾಗಿ ಕಿರಿಕಿರಿ ಉಂಟು ಮಾಡುವುದನ್ನು ತಪ್ಪಿಸುವುದಕ್ಕಾಗಿ ಸೆಕ್ಷನ್ 17ಎ ಅಡಿ ರಕ್ಷಣೆ ನೀಡಲಾಗಿದೆ. ಆದರೆ, ಈ ಪ್ರಕರಣದಲ್ಲಿ ಪೂರ್ವಾನುಮತಿ ಇಲ್ಲದೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿರುವ ನ್ಯಾಯಪೀಠ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.

ಸೆಕ್ಷನ್ 17ಎ ಅಡಿ ಸಕಾರಿ ನೌಕರರಿಗೆ ನೀಡಿರುವ ರಕ್ಷಣೆ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿಫಲವಾದಲ್ಲಿ ಕಾನೂನು ದುರ್ಬಳಕೆ ಮಾಡಿದಂತಾಗುತ್ತದೆ. ಆದರೂ ಈ ಅವಕಾಶವನ್ನು ತಪ್ಪಿತಸ್ಥರು ರಕ್ಷಣೆಗೆಗಾಗಿ ಬಳಕೆ ಮಾಡುತ್ತಾರೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಆದರೆ, ಮುಗ್ದರಿಗೆ ನೀಡುವ ರಕ್ಷಣೆಯಾಗಿದೆ. ಹೀಗಾಗಿ ಅದನ್ನು ಪಾಲಿಸುವುದು ಕಡ್ಡಾಯವಾಗಿರಲಿದೆ ಎಂದು ತಿಳಿಸಿದೆ.

ಅಲ್ಲದೇ, ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸಿಆರ್‌ಪಿಸಿ ಸೆಕ್ಷನ್ 154(1)ರ ಪ್ರಕಾರ ಸರ್ಕಾರಿ ನೌಕರರ ವಿರುದ್ಧ ಮೊದಲು ಸ್ಥಳೀಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಬೇಕು. ದೂರು ದಾಖಲಾಗದಿದ್ದಲ್ಲಿ ಲೋಕಾಯುಕ್ತ ವರಿಷ್ಠಾಧಿಕಾರಿಗಳಿಗೆ ದೂರು ದಾಖಲಿಸಬೇಕು ಎಂಬುದಾಗಿದೆ. ಅಲ್ಲದೇ, ಸುಪ್ರೀಂಕೋರ್ಟ್ ತೀರ್ಪುಗಳ ಪ್ರಕಾರ ದೂರು ನೀಡುವವರು ತಮ್ಮ ದೂರಿಗೆ ಸಂಬಂಧಿಸಿದಂತೆ ಪ್ರಾಮಾಣಿಕೃತ ಹೇಳಿಕೆಗಳನ್ನು ದಾಖಲಿಸಬೇಕು. ಈ ಕಾರ್ಯ ಮಾಡದಿದ್ದಲ್ಲಿ ಪ್ರಕರಣ ನ್ಯಾಯಾಲಯಗಳು ಪುರಸ್ಕರಿಸಲಾಗುವುದಿಲ್ಲ ಎಂಬುದಾಗಿ ಹೇಳಿದೆ.

ಆದರೆ, ಈ ಪ್ರಕರಣ ಸಂಬಂಧ ದಾಖಲಿಸಿರುವ ದೂರಿನಲ್ಲಿ ಎಲ್ಲಿಯೂ ಲೊಕಾಯುಕ್ತ ಪೊಲೀಸರಿಗೆ ದೂರು ನೀಡಲು ಪ್ರಯತ್ನ ಮಾಡಲಾಗಿದೆ ಎಂಬ ಅಂಶ ಇಲ್ಲ. ಅಲ್ಲದೇ, ದೂರುದಾರರ ತಮ್ಮ ಹಾಗೂ ತಮ್ಮ ಪರ ವಕೀಲರ ಕುರಿತಂತೆ ಯಾವುದೇ ಪ್ರಮಾಣ ಪತ್ರವನ್ನೂ ಸಲ್ಲಿಸಿಲ್ಲ. ಹೀಗಾಗಿ ಪೊಲೀಸರಿಗೆ ದೂರು ಸಲ್ಲಿಸಲು ಮುಂದಾಗದೇ ನೇರವಾಗಿ ಖಾಸಗೀ ದೂರು ದಾಖಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್​ ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಚಿಂತಾಮಣಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಚಿಕ್ಕಬಳ್ಳಾಪುರ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಈ ಅಂಶಗಳ ಆಧಾರದಲ್ಲಿ ಕೆಲವು ಅಧಿಕಾರಿಗಳ ಭ್ರಷ್ಟಾಚಾರ ಆರೋಪದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕ್ಕೆ ದೂರು ನೀಡುವ ಬದಲು ಸೆಷನ್ಸ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಅರ್ಜಿದಾರರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗೆ ಕಿರುಕುಳ: ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸಲು ಹೈಕೋರ್ಟ್ ಸೂಚನೆ

ABOUT THE AUTHOR

...view details