ಬೆಂಗಳೂರು:ಕೋವಿಡ್ ನಡುವೆಯೂ ನ್ಯಾಯಾಲಯಗಳನ್ನು ಸಮರ್ಥವಾಗಿ ಮುನ್ನಡೆಸುವ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್ ಹೈಬ್ರಿಡ್ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ದೇಶದ ಎಲ್ಲ ಹೈಕೋರ್ಟ್ಗಳಿಗೆ ಮಾದರಿಯಾಗಿದೆ.
ಕೊರೊನಾ ಸೋಂಕು ವ್ಯಾಪಿಸಿದ ಬಳಿಕ ಇದ್ದ ಸೌಲಭ್ಯಗಳನ್ನೇ ಬಳಸಿಕೊಂಡು ಹೈಕೋರ್ಟ್ನಲ್ಲಿ ವಿಸಿ ಮೂಲಕ ಕಲಾಪ ನಡೆಸಲಾಗುತ್ತಿತ್ತು. ಕೋವಿಡ್ ತಣ್ಣಗಾದ ಬಳಿಕ ಫಿಸಿಕಲ್ ವಿಚಾರಣೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿತ್ತಾದರೂ, ವಿಸಿ ಸೌಲಭ್ಯವನ್ನು ಮುಂದುವರೆಸಿಕೊಂಡು ಬರಲಾಗಿತ್ತು. ಆದರೆ, ಕೋವಿಡ್ ಎರಡನೇ ಅಲೆ ಎದುರಾದ ನಂತರ ಹೈಕೋರ್ಟ್ ಸುಗಮ ಕಲಾಪಕ್ಕಾಗಿ ಹೈಬ್ರಿಡ್ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.
38 ಸಾವಿರದಲ್ಲಿ ಹೈಬ್ರಿಡ್ ವಿಸಿ:
ಈಗಾಗಲೇ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಪೀಠ ಸೇರಿದಂತೆ 13 ಪೀಠಗಳಲ್ಲಿ ಈ ಹೈಬ್ರಿಡ್ ವಿಸಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಮುಂದಿನ ವಾರದಲ್ಲಿ ಈ ಸೌಲಭ್ಯವನ್ನು ಒಟ್ಟು 26 ಪೀಠಗಳಿಗೆ ವಿಸ್ತರಿಸಲಾಗುತ್ತದೆ. ನಂತರದಲ್ಲಿ ಕಲಬುರಗಿ ಹಾಗೂ ಧಾರವಾಡ ಪೀಠಗಳಲ್ಲಿಯೂ ಇದೇ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಹೈಬ್ರಿಡ್ ವಿಸಿ ವ್ಯವಸ್ಥೆ ಕಲ್ಪಿಸಲು ದೇಶದ ಹಲವು ನ್ಯಾಯಾಲಯಗಳು ಪ್ರಯತ್ನಿಸಿದ್ದರೂ ಲಕ್ಷಾಂತರ ರೂಪಾಯಿ ವ್ಯಯಿಸಿದ್ದರೂ ಪೂರ್ಣ ಪ್ರಮಾಣದಲ್ಲಿ ಸಫಲವಾಗಿಲ್ಲ ಎಂಬ ಮಾತಿದೆ.
ಪ್ರಕರಣಗಳ ವಿಚಾರಣೆ ಬಗ್ಗೆ ಮಾಹಿತಿ ಬಾಂಬೆ ಹೈಕೋರ್ಟ್ ಇದೇ ವ್ಯವಸ್ಥೆಗೆ 2.5 ಲಕ್ಷ ರೂಪಾಯಿ ಖರ್ಚು ಮಾಡಿದ್ದರೂ ಅಂತಿಮ ಫಲಿತಾಂಶ ಹೇಳಿಕೊಳ್ಳುವಂತಿಲ್ಲ ಎನ್ನಲಾಗಿದೆ. ಆದರೆ, ಇದೇ ಹೈಬ್ರಿಡ್ ವಿಸಿಗೆ ರಾಜ್ಯ ಹೈಕೋರ್ಟ್ ಖರ್ಚು ಮಾಡಿರುವುದು 38 ಸಾವಿರ ಅಷ್ಟೇ. ಕಡಿಮೆ ಖರ್ಚಿನಲ್ಲಿ ಉತ್ಕೃಷ್ಠ ಹೈಬ್ರಿಡ್ ವಿಸಿ ವ್ಯವಸ್ಥೆ ಕಲ್ಪಿಸಿರುವುದರ ಹಿಂದೆ ಹೈಕೋರರ್ಟ್ನ ಪ್ರಭಾರ ರಿಜಿಸ್ಟ್ರಾರ್ ಜನರಲ್ ಹಾಗೂ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಟಿ.ಜಿ.ಶಿವಶಂಕರೇಗೌಡ ಅವರ ಶ್ರಮ ಸಾಕಷ್ಟಿದೆ.
ಹೈಬ್ರಿಡ್ ವಿಡಿಯೋ ಕಾನ್ಫರೆನ್ಸ್:
ಕೊರೊನಾ ಉಲ್ಭಣಿಸಿದ 2020ರ ಮಾರ್ಚ್ನಲ್ಲಿ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಿಸಿದ ಬಳಿಕ ನ್ಯಾಯಾಲಯಗಳು ಕಾರ್ಯನಿರ್ಹಹಿಸುವುದು ಕೂಡ ಕಷ್ಟಕರವಾಗಿತ್ತು. ಈ ವೇಳೆ ಜೂಮ್ ಆ್ಯಪ್ ಮೂಲಕ ವಿಸಿ ಆರಂಭಿಸಲಾಗಿತ್ತು. ಆದರೆ, ಈ ವ್ಯವಸ್ಥೆಯಲ್ಲಿ ಹಲವು ಲೋಪಗಳಿದ್ದವು. ಕೆಲವು ಬಾರಿ ಧ್ವನಿ ಕೇಳಿಸದಿರುವುದು, ವಿಡಿಯೋ ಕಾಣಿಸದಂತಾಗುವುದು, ನೆಟ್ವರ್ಕ್ ಸಮಸ್ಯೆಗಳಿದ್ದವು. ಜೊತೆಗೆ ಕೋರ್ಟ್ ಹಾಲ್ನಲ್ಲಿ ವಾದ ಮಂಡಿಸುವ ವಕೀಲರು ಏನು ಹೇಳಿದರು ಎಂಬುದೇ ತಿಳಿಯುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್ ರಿಜಿಸ್ಟ್ರಾರ್ ಶಿವಶಂಕರೇಗೌಡ ಅವರು ಕಡಿಮೆ ಖರ್ಚಿನಲ್ಲೇ ಅತ್ಯುತ್ತಮ ದರ್ಜೆಯ ಮೈಕ್, ಕ್ಯಾಮರಾ, ಸ್ಪೀಕರ್, ಟಿವಿ ಸ್ಕ್ರೀನ್ ಹಾಗೂ ಡೆಸ್ಕ್ ಟಾಪ್ಗಳನ್ನು ಬಳಸಿ ಹೈಬ್ರಿಡ್ ವಿಸಿ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದನ್ನೂ ಓದಿ:ಡೀಸೆಲ್ ಹಾಕಿಸಲು ಬಂದಾಗ ಹೊತ್ತಿ ಉರಿದ ಕಾರು... ತಪ್ಪಿದ ಭಾರೀ ಅನಾಹುತ
ಹೈಬ್ರಿಡ್ ವಿಸಿ ಈಗಾಗಲೇ ಯಶಸ್ವಿಯಾಗಿದ್ದು, ಒಂದೇ ವಿಂಡೋದಲ್ಲಿ ಅರ್ಜಿದಾರರ ಪರ ವಕೀಲ, ಪ್ರತಿವಾದಿ ಪರ ವಕೀಲ ಹಾಗೂ ನ್ಯಾಯಮೂರ್ತಿಗಳು ಕಾಣಿಸಿಕೊಳ್ಳುತ್ತಾರೆ. ಜೊತೆಗೆ, ಯಾರು ಏನು ಹೇಳಿದರು ಎಂಬುದು ಸ್ಪಷ್ಟವಾಗಿ ಕೇಳುತ್ತದೆ. ಇದರಿಂದಾಗಿ ಈ ಹಿಂದೆ ಇದ್ದ ಅಸ್ಪಷ್ಟ ಅಥವಾ ಗೊಂದಲಮಯ ಸಂವಹನ ದೂರವಾಗಿ, ಸ್ಪಷ್ಟ ಸಂವಹನದಿಂದಾಗಿ, ಕಲಾಪವೂ ಸುಗಮವಾಗಿ ಸಾಗುತ್ತಿದೆ. ಕೋರ್ಟ್ ಹೊರಗಿದ್ದು ವಿಸಿ ಮೂಲಕ ಹಾಜರಾಗುವ ವಕೀಲರಿಗೂ ಕೋರ್ಟ್ ನಲ್ಲಿದ್ದುಕೊಂಡೇ ವಾದ ಮಂಡಿಸುವಂತಹ, ವಾದ ಆಲಿಸುವ ಭಾವ ಸಿಗುತ್ತಿದೆ. ಇನ್ನು ಕೋರ್ಟ್ ಹಾಲ್ನಲ್ಲಿ 32 ಇಂಚಿನ ಟಿವಿ ಪರದೆ ಮೂಲಕ ವಾದ ಪ್ರತಿವಾದ ಹಾಗೂ ನ್ಯಾಯಮೂರ್ತಿಗಳ ಅಭಿಪ್ರಾಯ ಆಲಿಸಲು ವ್ಯವಸ್ಥೆ ಮಾಡಿರುವುದರಿಂದ ಕೋರ್ಟ್ ಕಲಾಪದ ಪ್ರತಿ ವಿವರವೂ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯಗಳಲ್ಲಿ ಕೂಡ ಇದೇ ವ್ಯವಸ್ಥೆ ವಿಸ್ತರಿಸಲು ಹೈಕೋರ್ಟ್ ಚಿಂತಿಸುತ್ತಿದೆ. ಒಟ್ಟು 9.5 ಲಕ್ಷ ವೆಚ್ಚದಲ್ಲಿ ಇಡೀ ಹೈಕೋರ್ಟ್ಗೆ ಹೈಬ್ರಿಡ್ ವಿಸಿ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಸುಪ್ರೀಂ ಕೋರ್ಟ್ನಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು, ಗುಜರಾತ್, ಮುಂಬೈ, ಕೇರಳ ಹೈಕೋರ್ಟ್ಗಳು ಕೂಡ ಇಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿವೆ ಎನ್ನುತ್ತಾರೆ ಹಂಗಾಮಿ ರಿಜಿಸ್ಟ್ರಾರ್ ಟಿ.ಜಿ.ಶಿವಶಂಕರೇಗೌಡ.
ಇದನ್ನೂ ಓದಿ:ಬಿಸಿಲಿನಿಂದ ಪಾರಾಗುವ ಜೊತೆಗೆ ಕೊಠಡಿ ಕೊರತೆ ನೀಗಿಸುವ ಪ್ರಯತ್ನ: ಕಾಲೇಜಿನಲ್ಲಿ ನಿರ್ಮಾಣವಾಯ್ತು ಪರಿಸರ ಸ್ನೇಹಿ ಕುಟೀರ