ಬೆಂಗಳೂರು: ಸಂವಿಧಾನಬದ್ದವಾಗಿ ದೇಶಕ್ಕೆ ಒಂದೇ ಧ್ವಜವಿದೆ. ಸಾಂಸ್ಕೃತಿಕ ಧ್ವಜವಾಗಿ ಕನ್ನಡ ಧ್ವಜ ಬಳಸಬಹುದು ಎನ್ನುವ ಹೇಳಿಕೆಯನ್ನು ಸಚಿವ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದು ಸಿದ್ದರಾಮಯ್ಯ ಅವರ ಹೇಳಿಕೆಯೇ ಸಂವಿಧಾನ ವಿರೋಧಿ ನಿಲುವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಪ್ರತ್ಯೇಕ ನಾಡ ಧ್ವಜಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ, ಸಾಂಸ್ಕೃತಿಕ ಧ್ವಜವಾಗಿ ಬಳಸಲು ಅಡ್ಡಿಯಿಲ್ಲ: ಸಿ.ಟಿ ರವಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಾಡಧ್ವಜದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ಕನ್ನಡ ಧ್ವಜವನ್ನು ಸಾಂಸ್ಕೃತಿಕ ಧ್ವಜವಾಗಿ ಬಳಸಬಹುದು. ಆದರೆ ಪ್ರತ್ಯೇಕ ನಾಡ ಧ್ವಜವಾಗಿ ಬಳಸುವುದು ಸಂವಿಧಾನ ವಿರೋಧಿಯಾಗುತ್ತದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡ ಒಂದೇ ಧ್ವಜ ಎಂದು ಸ್ಪಷ್ಟಪಡಿಸಿದ್ದರು. ಅದನ್ನೇ ನಾನು ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ನನ್ನ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ನೀಡಿ ಸಂವಿಧಾನ ವಿರೋಧಿ, ಅಂಬೇಡ್ಕರ್ ವಿರೋಧಿಯಾಗಿದ್ದಾರೆ. ನನ್ನ ಕನ್ನಡ ಪ್ರೀತಿಯ ಬಗ್ಗೆ ಯಾರಿಂದಲೂ ಹೇಳಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಾನೂ ಕೂಡ ಕನ್ನಡ ಧ್ವಜ ಹಿಡಿದು ಹೋರಾಟ ಮಾಡಿದ್ದೇನೆ. ಅದನ್ನು ಸಾಂಸ್ಕೃತಿಕ ಧ್ವಜವಾಗಿ ಬಳಕೆ ಮಾಡುವುದಕ್ಕೆ ಯಾವುದೇ ವಿರೋಧವಿಲ್ಲ ಎಂದರು.
ರಾಮನಗರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರ ಸಂಬಂಧ ಡಿಕೆ ಶಿವಕುಮಾರ್ ಹೋರಾಟ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ರಾಮನಗರಕ್ಕೆ ಈಗಾಗಲೇ ವೈದ್ಯಕೀಯ ವಿವಿ ಹಾಗೂ ಕಾಲೇಜು ಮಂಜೂರಾಗಿದೆ. ಇನ್ನೂ ಆ ಕಾಮಗಾರಿಯೆ ಮುಕ್ತಾಯ ಆಗಿಲ್ಲ. ಕಾಲೇಜುಗಳು ರಾಜಕೀಯದಾಟದ ದಾಳಗಳಾಗಿ ಬಳಕೆಯಾಗಬಾರದು. ಹಾಗಾಗಿ ಡಿ.ಕೆ.ಶಿವಕುಮಾರ್ ನಮ್ಮ ನಿಲುವನ್ಮು ಸೇಡಿನ ರಾಜಕೀಯ ಎಂದು ಆರೋಪಿಸಿದರೆ ಸರಿಯಲ್ಲ. ಮೆಡಿಕಲ್ ಕಾಲೇಜು ಈಗ ಇಲ್ಲದೆ ಇರುವ ಕಡೆ ಕೊಡೋಣ ಎಲ್ಲಾ ಜಿಲ್ಲೆಗೆ ಸಿಕ್ಕ ಬಳಿಕ ಹೋಬಳಿಗೆ ಒಂದ್ ಮಾಡೋಣ. ಬೇಕಾದ್ರೆ ಡಿಕೆಶಿಯ ದೊಡ್ಡಾಲಳ್ಳಿಗೂ ಮಾಡಿಕೊಡೋಣ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರಿಗೆ ಎಚ್ಚರಿಸುವಷ್ಟು ದೊಡ್ಡವನು ನಾನಲ್ಲ. ಇಷ್ಟೊತ್ತಿಗೆ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿ ಘೋಷಿತರಾಗಬೇಕಿತ್ತು. ಆದರೆ, ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಅವರು ಪ್ರಶ್ನಾತೀತ ನಾಯಕರಾಗಿ ಉಳಿದಿಲ್ಲ. ಅವರ ಸಲಹೆಯನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಸಿದ್ದು ಟ್ವೀಟ್ ಗೆ ಟಾಂಗ್ ನೀಡಿದರು.