ಬೆಂಗಳೂರು:ಮಾಜಿ ಸಿಎಂ ಧರ್ಮಸಿಂಗ್ ಮಕ್ಕಳಾದ ಅಜಯ್ ಸಿಂಗ್ ಹಾಗೂ ವಿಜಯ್ ಸಿಂಗ್ ಇಬ್ಬರಿಗೂ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಜೇವರ್ಗಿಯಲ್ಲಿ ಅಜಯ್ ಸಿಂಗ್ ಎರಡು ಬಾರಿ ಗೆದ್ದಿದ್ದು, ಈ ಬಾರಿಯೂ 10,000 ಮತಗಳ ಅಂತರದಿಂದ ಜೆಡಿಎಸ್ನ ದೊಡ್ಡಪ್ಪ ಗೌಡ ವಿರುದ್ಧ ಗೆಲುವು ಸಾಧಿಸಿದರು. ಧರ್ಮಸಿಂಗ್ ಅವರ ಇನ್ನೊಬ್ಬ ಪುತ್ರ ವಿಜಯ್ ಸಿಂಗ್ ಮೊದಲ ಬಾರಿಗೆ ಬಸವ ಕಲ್ಯಾಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಶರಣು ಪಾಟೀಲ್ ಸಲಗಾರ್ ವಿರುದ್ಧ 14,415 ಅಂತರದ ಮತಗಳಿಂದ ಸೋಲು ಕಂಡಿದ್ದಾರೆ.
ಬಂಗಾರಪ್ಪ ಸಹೋದರರು: ಮಾಜಿ ಸಿಎಂ ಸಾರೆಕೊಪ್ಪ ಬಂಗಾರಪ್ಪ ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು. ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಮಧು ಬಂಗಾರಪ್ಪ 44,262 ಮತಗಳ ಅಂತರದಿಂದ ಬಿಜೆಪಿಯ ಸ್ಪರ್ಧಿ, ಸಹೋದರ ಕುಮಾರ ಬಂಗಾರಪ್ಪ ವಿರುದ್ಧ ಗೆಲುವು ದಾಖಲಿಸಿದ್ದಾರೆ.
ಹೆಚ್ಡಿಕೆ ಸಹೋದರರು: ಚನ್ನಪಟ್ಟಣದಿಂದ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಯ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ 13,601 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಹೆಚ್ಡಿಕೆ ಸಹೋದರ ಹೆಚ್.ಡಿ.ರೇವಣ್ಣ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ.ಪಾಟೀಲ್ ವಿರುದ್ಧ 2,758 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈಗಾಗಲೇ 6 ಸಲ ಗೆದ್ದಿರುವ ರೇವಣ್ಣ ಈ ಗೆಲುವಿನಿಂದ 7ನೇ ಬಾರಿಗೆ ಅದೃಷ್ಟ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.
ಜಾರಕಿಹೋಳಿ ಸಹೋದರರು:ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಹಿಡಿತ ಹೊಂದಿರುವ ಜಾರಕಿಹೊಳಿ ಕುಟುಂಬದ ಸಹೋದರರು ಚುನಾವಣಾ ಅಖಾಡದಲ್ಲಿ ಗಮನ ಸೆಳೆದಿದ್ದಾರೆ. ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಬಸವರಾಜ ಹೂಂಡ್ರಿ ವಿರುದ್ಧ57,046 ಮತಗಳ ಅಂತರದಿಂದ ಜಯ ಸಾಧಿಸಿದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯಿಂದ ಗೋಕಾಕ್ನಲ್ಲಿ ಸ್ಪರ್ಧಿಸಿ, ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ವಿರುದ್ಧ 24,637 ಮತಗಳ ಅಂತರದಿಂದ ಗೆದ್ದರು. ಬಾಲಚಂದ್ರ ಜಾರಕಿಹೊಳಿ ಕೂಡ ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ನ ಅರವಿಂದ್ ಮಹಾದೇವ್ ರಾವ್ ದಳವಾಯಿ ವಿರುದ್ದ 22,761 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಚುನಾವಣಾ ಕಣದಲ್ಲಿ ರೆಡ್ಡಿ ಬ್ರದರ್ಸ್:ಬಳ್ಳಾರಿ ಜಿಲ್ಲೆಯಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ರೆಡ್ಡಿ ಕುಟುಂಬಸ್ಥರು ಚುನಾವಣಾ ಅಖಾಡದಲ್ಲೂ ಸ್ಪರ್ಧಿಗಳಾಗಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಈ ಬಾರಿಯ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಪಕ್ಷ ಕಟ್ಟಿ ಕಣಕ್ಕಿಳಿದಿದ್ದಾರೆ. ಗಂಗಾವತಿಯಲ್ಲಿ ಸ್ಪರ್ಧಿಸಿರುವ ಅವರು ಕಾಂಗ್ರೆಸ್ನ ಇಕ್ಬಾಲ್ ಅನ್ಸಾರಿ ವಿರುದ್ಧ 8,117 ಮತಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ. ಮತ್ತೊಂದಡೆ, ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಶಾಸಕ ಹಾಗು ಜನಾರ್ದನ ರೆಡ್ಡಿ ಸಹೋದರ ಗಾಲಿ ಸೋಮಶೇಖರ್ ರೆಡ್ಡಿ ಅವರು ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ವಿರುದ್ಧ 49,049 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಇವರ ಸೊಸೆ ಲಕ್ಷ್ಮಿ ಅರುಣಾ ಕೆಆರ್‌ಪಿಪಿಯಿಂದ ಎದುರಾಳಿಯಾಗಿದ್ದರು. 48118 ಮತಗಳು ಪಡೆದುಕೊಂಡು ಸೋಲನುಭವಿಸಿದರು.
ಇದನ್ನೂ ಓದಿ:ಮತ ಪ್ರಭುವಿನ ಮಹಾತೀರ್ಪು! 'ಕೈ' ವಶವಾದ ಕರ್ನಾಟಕ - ಬಿಜೆಪಿಗೆ ಭಾರಿ ಮುಖಭಂಗ