ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಪತ್ತೆಯಾದ ಕೊರೊನಾ ಪಾಸಿಟಿವ್ ಪ್ರಕರಣಗಳ ವಿವರ ಈ ಕೆಳಗಿನಂತಿದೆ:
ಕಲಬುರಗಿ:
ಕೊರೊನಾದಿಂದ ವೃದ್ಧೆಯೋರ್ವಳು ಸಾವನ್ನಪ್ಪಿದ್ದು, 175 ಜನರಿಗೆ ಸೋಂಕು ದೃಢಪಟ್ಟಿದೆ. ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 3,141 ತಲುಪಿದೆ. ಇಂದು 47 ರೋಗಿಗಳು ಗುಣಮುಖರಾಗಿದ್ದು, ಇಲ್ಲಿಯವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 1881. ಇನ್ನೂ 1.211 ಸಕ್ರಿಯ ಪ್ರಕರಣಗಳಿವೆ.
ಬೆಳಗಾವಿ:
ದಾಖಲೆಯ 219 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1,315ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಇಂದು ಸೋಂಕು ಪತ್ತೆಯಾಗಿವೆ. ಇಲ್ಲಿಯವರೆಗೆ 30 ಜನರು ಮೃತಪಟ್ಟಿದ್ದು, ಈವರೆಗೆ 426 ಜನ ಡಿಸ್ಚಾರ್ಜ್ ಆಗಿದ್ದಾರೆ. 859 ಸಕ್ರಿಯ ಪ್ರಕರಣಗಳಿವೆ.
ಧಾರವಾಡ:
158 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಸೋಂಕಿತರ ಸಂಖ್ಯೆ 2,485 ಕ್ಕೇರಿದೆ. ಕೊರೊನಾಕ್ಕೆ ಐವರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 78 ಆಗಿದೆ. ನಗರ ಠಾಣೆ ಪೊಲೀಸ್ ಕಾನ್ಸ್ಟೇಬಲ್ಗೂ ಸೋಂಕು ಕಾಣಿಸಿಕೊಂಡಿದ್ದು, ಠಾಣೆಯಲ್ಲಿ ಸೋಂಕಿತರ ಸಂಖ್ಯೆ 4ಕ್ಕೇರಿದೆ. 135 ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿದ್ದು, ಒಟ್ಟು 845 ಮಂದಿ ಗುಣಮುಖರಾಗಿದ್ದಾರೆ. 1,562 ಸಕ್ರಿಯ ಪ್ರಕರಣಗಳಿವೆ.
ಮೈಸೂರು:
28 ವರ್ಷದ ಮಹಿಳೆ ಸೇರಿದಂತೆ ಐವರು ಕೊರೊನಾಗೆ ಬಲಿಯಾದರೆ, 145 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ 2,053ಕ್ಕೇರಿದೆ. ಸೋಂಕಿನಿಂದ ಗುಣಮುಖರಾದ 19 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 85 ಮಂದಿ ಕೊರೊನಾಗೆ ಪ್ರಾಣ ಕಳೆದುಕೊಂಡಿದ್ದಾರೆ.
ಹಾಸನ:
78 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1,127ಕ್ಕೆ ಏರಿಕೆಯಾಗಿದೆ. ಇಬ್ಬರು ಸಾವಿಗೀಡಾಗಿದ್ದು, ಮೃತರ ಸಂಖ್ಯೆ 35ಕ್ಕೆ ತಲುಪಿದೆ. ಕೋವಿಡ್ -19 ಆಸ್ಪತ್ರೆಯಲ್ಲಿ 481 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 611 ಮಂದಿ ಗುಣಮುಖರಾಗಿದ್ದಾರೆ. 42 ವರ್ಷದ ಮಹಿಳೆ ಜು.20ರಂದು ಬೆಂಗಳೂರಿನಿಂದ ಬಂದಿದ್ದು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮತ್ತೊಬ್ಬರು ಅರಸೀಕೆರೆಯ 48 ವರ್ಷದ ವ್ಯಕ್ತಿಯೂ ಸಹ ಉಸಿರಾಟದ ತೊಂದರೆಯಿಂದ ಹಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.
ಬಳ್ಳಾರಿ:
135 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,945ಕ್ಕೇರಿದೆ. ಜಿಂದಾಲ್ ಒಂದರಲ್ಲೇ ಈವರೆಗೆ 643 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನಿಂದ 1436 ಮಂದಿ ಗುಣಮುಖರಾಗಿದ್ದು, 62 ಮಂದಿ ಸಾವನ್ನಪ್ಪಿದ್ದಾರೆ. 1,447 ಸಕ್ರಿಯ ಪ್ರಕರಣಗಳಿವೆ.
ಹಾವೇರಿ:
50 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಸೋಂಕಿತರ ಸಂಖ್ಯೆ 584 ಕ್ಕೇರಿದೆ. ಹಾವೇರಿ 17, ಹಾನಗಲ್ 10, ಶಿಗ್ಗಾವಿ 7, ರಾಣೆಬೆನ್ನೂರು 9, ಹಿರೇಕೆರೂರು 4, ಸವಣೂರು 2 ಮತ್ತು ಬ್ಯಾಡಗಿ ತಾಲೂಕಿನಲ್ಲಿ ಓರ್ವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ 347 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬುಧವಾರ ಜಿಲ್ಲೆಯಲ್ಲಿ ಕೊರೊನಾ ಕಾರಣಕ್ಕೆ ನಾಲ್ವರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮೃತರ ಸಂಖ್ಯೆ 19ಕ್ಕೇರಿದೆ. 218 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಏಳು ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕಮಗಳೂರು:
ಈ ದಿನ 82 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 484ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ ಇಂದು 51 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 216 ಜನ ಸೋಂಕಿತರು ಗುಣಮುಖರಾದಂತಾಗಿದೆ. ಚಿಕ್ಕಮಗಳೂರು 29, ತರೀಕೆರೆ 03, ಕಡೂರು 21, ಎನ್ಆರ್ ಪುರ 08, ಕೊಪ್ಪ 05, ಶೃಂಗೇರಿಯಲ್ಲಿ 02, ಅಜ್ಜಂಪುರದಲ್ಲಿ 01 ಹಾಗೂ ಮೂಡಿಗೆರೆ ತಾಲೂಕಿನ 13 ಜನರಲ್ಲಿ ಈ ಸೋಂಕು ಪತ್ತೆಯಾಗಿದೆ. ಇಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೂ ಸಾವಿನ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 256 ಸಕ್ರಿಯ ಪ್ರಕರಣಗಳಿವೆ.
ರಾಯಚೂರು:
135 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 1,138ಕ್ಕೆ ತಲುಪಿದೆ. ರಾಯಚೂರು 100, ಮಾನ್ವಿ 25, ಸಿಂಧನೂರು 5, ಲಿಂಗಸೂಗೂರು 4, ದೇವದುರ್ಗ ತಾಲೂಕಿನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. 431 ಪ್ರಕರಣಗಳು ಸಕ್ರಿಯವಾಗಿದ್ದು, ಇಂದು ಇಬ್ಬರು ಮೃತರಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಕೊಪ್ಪಳ:
ಇಂದು 13 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 599ಕ್ಕೆ ಏರಿದೆ. ಗಂಗಾವತಿ 7, ಕೊಪ್ಪಳ 3, ಕುಷ್ಟಗಿ 1 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 2 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೆ ಸೋಂಕಿನಿಂದ 12 ಜನರು ಸಾವನ್ನಪ್ಪಿದ್ದಾರೆ. ಇಂದು 10 ಜನರು ಸೇರಿ ಈವರೆಗೆ ಒಟ್ಟು 347 ಜನರು ಗುಣಮುಖರಾಗಿದ್ದಾರೆ.
ರಾಮನಗರ:
20 ಪಾಸಿಟಿವ್ ಕೇಸ್ ದೃಢಪಟ್ಟಿದ್ದು ಇಬ್ಬರು ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಚನ್ನಪಟ್ಟಣ 3, ಕನಕಪುರ 4, ಮಾಗಡಿ 8, ರಾಮನಗರ ತಾಲೂಕಿನಲ್ಲಿ 5 ಪಾಸಿಟಿವ್ ಪತ್ತೆಯಾಗಿವೆ. ಇಂದು ಕೋವಿಡ್ ಆಸ್ಪತ್ರೆಯಿಂದ 7 ಮಂದಿ ಡಿಸ್ಚಾರ್ಜ್ ಆಗಿದ್ದು, ಕನಕಪುರ ತಾಲೂಕಿನ 71 ವರ್ಷದ ವೃದ್ಧ, ರಾಮನಗರದ 55 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವ್ ಪ್ರಕರಣಗಳು 581ಕ್ಕೆ ಏರಿಕೆಯಾಗಿದೆ.
ಕಾರವಾರ:
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 63 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 96 ಮಂದಿ ಗುಣಮುಖರಾಗಿದ್ದಾರೆ. ಸೋಂಕು ಪತ್ತೆಯಾದ ಪೈಕಿ ಜಿಲ್ಲಾ ಕೇಂದ್ರ ಕಾರವಾರದಲ್ಲಿಯೇ ಅತಿ ಹೆಚ್ಚಿನ ಜನರಿದ್ದು, 21 ಮಂದಿಯಲ್ಲಿ ದೃಢಪಟ್ಟಿದೆ. ಉಳಿದಂತೆ ಹಳಿಯಾಳ 16, ಕುಮಟಾ 11, ಭಟ್ಕಳ 10, ಅಂಕೋಲಾ, ಮುಂಡಗೋಡದಲ್ಲಿ ತಲಾ 2 ಹಾಗೂ ಸಿದ್ದಾಪುರದಲ್ಲಿ ಓರ್ವನಿಗೆ ಸೋಂಕು ಪತ್ತೆಯಾಗಿದೆ.
ವಿಜಯಪುರ:
ಜಿಲ್ಲೆಯಲ್ಲಿ ಇಂದು 52 ಜನರಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ 1,810ಕ್ಕೆ ಏರಿಕೆಯಾಗಿದೆ. ಗುಣಮುಖರಾಗಿ 52 ಜನ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 1,245ಕ್ಕೆ ಏರಿಕೆಯಾಗಿದೆ. ಸೋಂಕಿತ 542 ಜನರಿಗೆ ವಿಜಯಪುರ ಜಿಲ್ಲಾಸ್ತತ್ರೆ, ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.
ಚಿಕ್ಕಬಳ್ಳಾಪುರ:
ಜಿಲ್ಲೆಯಲ್ಲಿಂದು 108 ಜನರಿಗೆ ಕೊರೊನಾ ಧೃಡಪಟ್ಟಿದೆ. ಚಿಕ್ಕಬಳ್ಳಾಪುರ 38, ಚಿಂತಾಮಣಿ 23, ಬಾಗೇಪಲ್ಲಿ 8, ಶಿಡ್ಲಘಟ್ಟ 14, ಗೌರಿಬಿದನೂರು 21 ಮತ್ತು ಗುಡಿಬಂಡೆ ತಾಲೂಕಿನಲ್ಲಿ 4 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರಲ್ಲಿ 494 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 584 ಪ್ರಕರಣಗಳು ಸಕ್ರಿಯವಾಗಿವೆ.
ಚಾಮರಾಜನಗರ:
ಜಿಲ್ಲೆಯಲ್ಲಿ 24 ಹೊಸ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 406 ಕ್ಕೆ ಏರಿಕೆಯಾಗಿದೆ. ಕೊಳ್ಳೇಗಾಲದಲ್ಲಿ ಇಂದು 12 ಪ್ರಕರಣ ಪತ್ತೆಯಾಗುವ ಮೂಲಕ 108 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಉಳಿದಂತೆ, ಚಾಮರಾಜನಗರ 5, ಗುಂಡ್ಲುಪೇಟೆ 6 ಹಾಗೂ ಹನೂರಿನಲ್ಲಿ 1 ಪ್ರಕರಣ ಪತ್ತೆಯಾಗಿದೆ. ಇಂದು 22 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬಾಗಲಕೋಟೆ:
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಸಾಗಿದೆ. ಇಂದು ಹೊಸದಾಗಿ 70 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 878ಕ್ಕೆ ಏರಿಕೆಯಾಗಿದೆ. 457 ಮಂದಿ ಗುಣಮುಖರಾಗಿದ್ದು, 385 ಪ್ರಕರಣಗಳು ಸಕ್ರಿಯವಾಗಿದೆ. ಬಾಗಲಕೋಟೆ 25, ಜಮಖಂಡಿ 20, ಬೀಳಗಿ, 5, ಮುಧೋಳ 8, ಇಲಕಲ್ಲ 2, ಗುಳೇದಗುಡ್ಡ 1, ಹುನಗುಂದ 2, ಬಾದಾಮಿ 6, ವಿಜಯಪುರ 1 ಸೇರಿದಂತೆ ಒಟ್ಟು 70 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಶಿವಮೊಗ್ಗ:
ಇಂದು 84 ಸೊಂಕಿತರ ಪ್ರಕರಣ ಪತ್ತೆಯಾಗಿವೆ. ಇದರಿಂದ ಸೊಂಕಿತರ ಸಂಖ್ಯೆ ಒಂದು ಸಾವಿರದ ಗಡಿದಾಟಿ 1017ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ 28 ಜನ ಬಿಡುಗಡೆಯಾಗಿದ್ದಾರೆ. ಇದುವರೆಗೊ ಜಿಲ್ಲೆಯಲ್ಲಿ 550 ಜನ ಗುಣಮುಖರಾಗಿದ್ದಾರೆ. ನಾಲ್ವರು ಸಾವನ್ನಪ್ಪಿದ್ದು, ಸದ್ಯ ಆಸ್ಪತ್ರೆಯಲ್ಲಿ 448 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಮಕೂರು:
ಕೋವಿಡ್-19 ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 48 ಮಂದಿ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 349 ಮಂದಿಗೆ ಚಿಕಿತ್ಸೆ ಮುಂದುವರೆದಿದ್ದು, ಇದುವರೆಗೂ 485 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಟ್ಟು 51 ಮಂದಿ ಸೋಂಕಿತರು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಮಹಿಳೆಯರು ಸೋಂಕಿನಿಂದ ಮೃತಪಟ್ಟಿದ್ದು, ಮೃತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ:
ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂದು ಐವರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ನಾಲ್ವರು ಹಾಗೂ ದಾವಣಗೆರೆ ಜಿಲ್ಲೆಯ ಓರ್ವ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 162 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇವರಲ್ಲಿ 13 ಮಂದಿ ಪ್ರಾಥಮಿಕ ಸಂಪರ್ಕ, 70 ಐಎಲ್ಐ ಪ್ರಕರಣ, 18 ಸಾರಿ ಪ್ರಕರಣ, 1 ಮಂದಿ ವಿದೇಶದಿಂದ ಬಂದವರಿಗೆ ಬಂದಿದೆ. 60 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಕೊರೊನಾ ದೃಢಪಟ್ಟವರ ಸಂಖ್ಯೆ 3,996ಕ್ಕೆ ಏರಿಕೆಯಾಗಿದೆ. ಇಂದು 69 ಮಂದಿ ಗುಣಮುಖರಾಗಿದ್ದು, ಈವರೆಗೆ 1,744 ಮಂದಿ ಗುಣಮುಖರಾಗಿದ್ದಾರೆ. 2,160 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ರದುರ್ಗ:
ಜಿಲ್ಲೆಯಲ್ಲಿಂದು 40 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 310ಕ್ಕೆ ಏರಿಕೆಯಾಗುದೆ. ಚಿತ್ರದುರ್ಗ 02, ಹಿರಿಯೂರು 08, ಚಳ್ಳಕೆರೆ 19, ಹೊಳಲ್ಕೆರೆ 06, ಹೊಸದುರ್ಗ 03, ಮೊಳಕಾಲ್ಮೂರು ತಾಲೂಕಿನ ಓರ್ವನಿಗೆ ಸೋಂಕು ತಗುಲಿದೆ. ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಜಿಲ್ಲೆಯಲ್ಲಿ ಪರೀಕ್ಷಿಸಿದ ಸಂದರ್ಭದಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಒಟ್ಟು 40 ಪಾಸಿಟಿವ್ ಪ್ರಕರಣ ಇಂದು ವರದಿಯಾಗಿವೆ.
ಬೀದರ್:
ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 74 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಮೂವರು ಬಲಿಯಾಗಿದ್ದಾರೆ. ಬೀದರ್ ತಾಲೂಕಿನ 67, 58 ವಯಸ್ಸಿನ ಪುರುಷರು ಹಾಗೂ 57 ವರ್ಷದ ಮಹಿಳೆ ಸಾವನಪ್ಪಿದ್ದಾರೆ. ಸೋಂಕಿತರ ಸಂಖ್ಯೆ 1542ಕ್ಕೆ ಏರಿಕೆಯಾಗಿದ್ದು, 68 ಜನರು ಮೃತಪಟ್ಟಿದ್ದಾರೆ. ಇಂದು 186 ಜನರು ಸೋಂಕಿನಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಇಲ್ಲಿಯವರೆಗೆ 1,029 ಜನರು ಗುಣಮುಖರಾಗಿದ್ದಾರೆ.
ದಾವಣಗೆರೆ:
ಜಿಲ್ಲೆಯಲ್ಲಿ ಇಂದು 96 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ದಾವಣಗೆರೆ 68, ಹರಿಹರ 12, ಜಗಳೂರು 2, ಚನ್ನಗಿರಿ 2 ಹಾಗೂ ಹೊನ್ನಾಳಿಯಲ್ಲಿ 12 ಕೋವಿಡ್-19 ಪ್ರಕರಣಗಳು ಇಂದು ವರದಿಯಾಗಿದೆ. ಇದುವರೆಗೆ ಒಟ್ಟು 1,071 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 641 ಮಂದಿ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 30 ಸಾವು ಸಂಭವಿಸಿದ್ದು, ಪ್ರಸ್ತುತ 400 ಸಕ್ರಿಯ ಪ್ರಕರಣಗಳಿವೆ.