ಬೆಂಗಳೂರು:ಸಿಎಂ ಬೊಮ್ಮಾಯಿ ಬಜೆಟ್ ಮಂಡನೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಸಂಪನ್ಮೂಲ ಕೊರತೆಯ ಮಧ್ಯೆ ಬಜೆಟ್ ಮಂಡನೆ ಮಾಡಬೇಕಾಗಿದೆ. ಹೀಗಾಗಿ ಈ ಬಾರಿಯೂ ಬಜೆಟ್ ನಿರ್ವಹಣೆಗಾಗಿ ಇನ್ನಷ್ಟು ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಸದ್ಯ ರಾಜ್ಯದ ಸಾಲದ ಸುಳಿ ಹೇಗಿದೆ ಎಂಬ ವರದಿ ಇಲ್ಲಿದೆ.
ಮಾರ್ಚ್ 4ಕ್ಕೆ ಸಿಎಂ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ಆರ್ಥಿಕ ಸಂಕಷ್ಟದ ಮಧ್ಯೆ ಬಜೆಟ್ ಮಂಡನೆ ಮಾಡಲಿರುವ ಸಿಎಂ, ಈ ಬಾರಿಯೂ ಬಂಡವಾಳ ವೆಚ್ಚವನ್ನು ಭರಿಸಲು ಸಾಲವನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಕಳೆದ ಎರಡು ವರ್ಷದಿಂದ ಕೋವಿಡ್ ಲಾಕ್‌ಡೌನ್ ಹೇರಿದ ಆರ್ಥಿಕ ಸಂಕಷ್ಟಕ್ಕೆ ಆದಾಯ ಮೂಲ ಬರಿದಾಗಿದೆ. ಹೀಗಾಗಿ ರಾಜ್ಯದ ಬಜೆಟ್ಗಾಗಿ ಸಾಲದ ಮೊರೆ ಹೋಗಲಾಗುತ್ತಿದೆ. ಕೇಂದ್ರ ಸರ್ಕಾರವೂ ರಾಜ್ಯಗಳಿಗೆ ಕಳೆದ ವರ್ಷದಿಂದ ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಿದೆ.
ಇತ್ತ ರಾಜ್ಯದ ಬದ್ಧ ವೆಚ್ಚ 102% ಗೆ ಏರಿಕೆಯಾಗಿದ್ದು, ಆದಾಯ ಮೂಲಕ್ಕಿಂತ ಬದ್ಧ ವೆಚ್ಚವೇ ಹೆಚ್ಚಾಗಿದ್ದು, ಅಭಿವೃದ್ಧಿ ಕೆಲಸಗಳಿಗೆ ಸಾಲ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಈ ಬಾರಿಯೂ ಸಿಎಂ ಬೊಮ್ಮಾಯಿ ಬಜೆಟ್ ಗಾಗಿ ಹಣ ಹೊಂದಿಸಲು ಸಾಲದತ್ತನೇ ಮುಖ ಮಾಡಿದ್ದು, ಹೆಚ್ಚಿನ ಸಾಲ ಪಡೆಯಲು ಮುಂದಾಗಿದ್ದಾರೆ.
ರಾಜ್ಯದ ಸದ್ಯದ ಸಾಲದ ಸ್ಥಿತಿಗತಿ..ಕಳೆದ ಎರಡು ಮೂರು ವರ್ಷಗಳಿಂದ ರಾಜ್ಯದ ಆದಾಯ ಮೂಲಗಳು ಸೊರಗುತ್ತಿರುವುದರಿಂದ ಸರ್ಕಾರ ಹೆಚ್ಚಾಗಿ ಸಾಲದ ಮೊರೆ ಹೋಗುತ್ತಿದೆ. ಹೀಗಾಗಿ ಪ್ರತಿವರ್ಷ ರಾಜ್ಯದ ಸಾಲದ ಪ್ರಮಾಣ ಹೆಚ್ಚುತ್ತಲೇ ಇದೆ. ರಾಜ್ಯದ ಆಸ್ತಿ ಸೃಷ್ಟಿಸುವಂಥ ಬಂಡವಾಳ ವೆಚ್ಚಕ್ಕೆ ಮಾಡುತ್ತಿರುವ ಖರ್ಚು ಕುಗ್ಗುತ್ತಲೇ ಇದೆ. ಬಹುತೇಕ ಎಲ್ಲಾ ಸಂಗ್ರಹಿತ ಆದಾಯ ಸರ್ಕಾರಿ ನೌಕರರ ವೇತನ, ಪಿಂಚಣಿ, ಆಡಳಿತ ವೆಚ್ಚಗಳ ಬದ್ಧ ವೆಚ್ಚಕ್ಕೆ ವ್ಯಯಿಸಲಾಗುತ್ತಿದೆ. ಹೀಗಾಗಿ ಅಭಿವೃದ್ಧಿ ಕಾಮಗಾರಿಗಳಿಗಾಗಿನ ಬಂಡವಾಳ ವೆಚ್ಚಕ್ಕೆ ಸಾಲವೇ ಗತಿ.
ರಾಜ್ಯ ಸರ್ಕಾರ 2019-20ರಲ್ಲಿ 48,601 ಕೋಟಿ ರೂ. ಸಾಲ ಎತ್ತುವಳಿ ಮಾಡಿತ್ತು. ಆವಾಗ ರಾಜ್ಯದ ಒಟ್ಟು ಸಾಲ (ಹೊಣೆಗಾರಿಕೆ) 3,37,520 ಕೋಟಿ ರೂ. 2020-21ರಲ್ಲಿ ರಾಜ್ಯ ಸರ್ಕಾರ 61,900 ಕೋಟಿ ರೂ. ಸಾಲ ಮಾಡಿತ್ತು. ಆ ಮೂಲಕ ಆ ಸಾಲಿನಲ್ಲಿ ರಾಜ್ಯ ಒಟ್ಟು ಋಣ ಭಾರ 3,98,219 ಕೋಟಿ ರೂ. ತಲುಪಿತ್ತು. ಪ್ರಸಕ್ತ 2021-22 ಸಾಲಿನಲ್ಲಿ ರಾಜ್ಯ ಸರ್ಕಾರ 71,332 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಆ ಮೂಲಕ ರಾಜ್ಯದ ಒಟ್ಟು ಸಾಲ ಹಾಗೂ ಋಣಭಾರ ಮಾರ್ಚ್ ಅಂತ್ಯಕ್ಕೆ 4,57,899 ಕೋಟಿ ರೂ.ಗೆ ಏರಿಕೆಯಾಗಲಿದೆ.
ಮಧ್ಯಮಾವಧಿ ವಿತ್ತೀಯ ಯೋಜನೆಯ ಪ್ರಕಾರ 2022-23 ಸಾಲಿನಲ್ಲಿ ರಾಜ್ಯದ ಒಟ್ಟು ಸಾಲ 5,12,585 ಕೋಟಿ ರೂ. ತಲುಪುವ ಅಂದಾಜಿಸಲಾಗಿದೆ. ಅದೇ 2023-24ಕ್ಕೆ ರಾಜ್ಯದ ಒಟ್ಟು ಸಾಲ ಅಂದಾಜು 5,73,790 ಕೋಟಿ ರೂ. ತಲುಪಲಿದೆ.
ಅದೇ 2024-25ರಲ್ಲಿ ರಾಜ್ಯದ ಒಟ್ಟು ಸಾಲದ ಹೊರೆ 6,42,578 ಕೋಟಿ ರೂ.ಗೆ ತಲುಪುವ ಅಂದಾಜು ಮಾಡಲಾಗಿದೆ. 2022-23ರಲ್ಲಿ ರಾಜ್ಯ ಸರ್ಕಾರ ಸುಮಾರು 75,000-80,000 ಕೋಟಿ ರೂ. ಸಾಲ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. 2020-21 ಸಾಲಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಸಾಲದ ಪ್ರಮಾಣ ಸುಮಾರು 34% ಹೆಚ್ಚಳವಾಗಿದೆ. ಈ ಬಾರಿ ಸಾಲದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸಕ್ತ ಸಾಲಿನಲ್ಲಿ ಮಾಡಿದ ಸಾಲ ಏನಿದೆ?..ರಾಜ್ಯ ಸರ್ಕಾರ ಈ ಆರ್ಥಿಕ ವರ್ಷದಲ್ಲಿ 71,332 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಅದರಂತೆ ಮೂರನೇ ಹಾಗೂ ನಾಲ್ಕನೇ ತ್ರೈಮಾಸಿಕಗಳಲ್ಲಿ ರಾಜ್ಯ ಸರ್ಕಾರ ಆರ್ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ನಿರಂತರವಾಗಿ ಸಾಲ ಎತ್ತುವಳಿ ಮಾಡುತ್ತಿದೆ. ಫೆಬ್ರವರಿ ಅಂತ್ಯದವರೆಗೆ ರಾಜ್ಯ ಸರ್ಕಾರ ಆರ್ಬಿಐ ಮೂಲಕ 49,000 ಕೋಟಿ ರೂ. ಸಾಲ ಮಾಡಿದೆ. ಆರ್ಥಿಕ ವರ್ಷದ ಕೊನೆ ತಿಂಗಳಾದ ಮಾರ್ಚ್ ತಿಂಗಳಲ್ಲಿ ಆರ್ಬಿಐ ಮೂಲಕ ಸುಮಾರು 20,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಿದೆ.
ಇದರ ಜೊತೆಗೆ ರಾಜ್ಯ ಸರ್ಕಾರ ವಿಶ್ವ ಬ್ಯಾಂಕ್, ಏಷ್ಯಾ ಅಭಿವೃದ್ಧಿ ಬ್ಯಾಂಕ್ ಹಾಗೂ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಗಳಿಂದ (ಜೈಕಾ) ವಿವಿಧ ಬೃಹತ್ ಯೋಜನೆಗಳಿಗೆ ಸಾಲ ಪಡೆದಿದೆ. 2021-22ರಲ್ಲಿ ಡಿಸೆಂಬರ್ ವರೆಗೆ 1,283.56 ಕೋಟಿ ರೂ. ಸಾಲ ಪಡೆದಿದೆ. ಅದೇ 2020-21ನೇ ಸಾಲಿನಲ್ಲಿ 1,402.55 ಕೋಟಿ ರೂ. ಸಾಲ ಮಾಡಿತ್ತು.