ಬೆಂಗಳೂರು:ಬೆಂಗಳೂರಿನಲ್ಲಿ ಶ್ರೀ ಭುವನೇಶ್ವರಿ ತಾಯಿ ಬೃಹತ್ ಮೂರ್ತಿ ಮತ್ತು ಥೀಮ್ ಪಾರ್ಕ್ ನಿರ್ಮಾಣಕ್ಕೆ ಈ ಬಾರಿ ಬಜೆಟ್ನಲ್ಲಿ ಅನುಮೋದನೆ ನೀಡಲಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣಾ ವಲಯಕ್ಕೆ ಪ್ರಸಕ್ತ ಸಾಲಿನಲ್ಲಿ 3,458 ಕೋಟಿ ಅನುದಾನ ಒದಗಿಸಿದ್ದು, ಹಲವು ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.
ಗಡಿ ಪ್ರದೇಶ ರಸ್ತೆ ಹಾಗೂ ಸಮಗ್ರ ಅಭಿವೃದ್ಧಿಗೆ 150 ಕೋಟಿ ಅನುದಾನ ಮೀಸಲಿಡಲಾಗಿದೆ. ದಾವಣೆಗೆರೆಯಲ್ಲಿ ಮೂರನೇ ವಿಶ್ವ ಸಮ್ಮೇಳನ ಆಯೋಜನೆಗೆ ಅನುಮೋದನೆ ನೀಡಿದ್ದು, ಪ್ರತಿ ಜಿಲ್ಲೆಯಲ್ಲಿ ನಮ್ಮ ಜಿಲ್ಲೆ, ನಮ್ಮ ಸಂಸ್ಕೃತಿ ಕಾರ್ಯಕ್ರಮ ಯೋಜನೆ ಅಡಿ ಜನಪದ ಹಬ್ಬ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಕರಗ ಉತ್ಸವ ಆಚರಣೆಗೆ ಈ ಬಾರಿ ಸರ್ಕಾರದಿಂದ ವಿಶೇಷ ಅನುದಾನ ಸಹ ಒದಗಿಸಲಾಗಿದೆ.
ಕನ್ನಡ ಅಭಿವೃದ್ಧಿಗೆ ಒತ್ತು:ಕೈಗಾರಿಕೋದ್ಯಮ ಆಡಳಿತ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ರಕ್ಷಣೆಗಾಗಿ ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಅಧಿನಿಯಮ ಜಾರಿಗೆ ಒತ್ತು ನೀಡಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಚಟುವಟಿಕೆಗಳಿಗೆ ಎರಡು ಕೋಟಿ ನೆರವು ನೀಡಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಸಾಧಕರ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವರ ಯಶೋಗಾಥೆಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಕೆ ನಿರ್ಧರಿಸಲಾಗಿದೆ.
ಕ್ರೀಡೆಗೆ ಒತ್ತು: ಸಂಪ್ರದಾಯಿಕ ಕ್ರೀಡೆಗಳಾದ ಖೋಖೋ, ಕಬ್ಬಡಿ, ಕಂಬಳ, ಕುಸ್ತಿ, ಎತ್ತಿನಗಾಡಿ ಓಟ, ಉತ್ತೇಜಿಸಲು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರಿಗೆ ಗ್ರಾಮೀಣ ಮಟ್ಟದ ಕ್ರೀಡಾಕೂಟ ಆಯೋಜನೆ ನಡೆಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಕ್ರೀಡಾಂಗಣವನ್ನು ನರೇಗಾ ಯೋಜನೆಯಲ್ಲಿ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
ಪ್ರಮುಖ ದೇಗುಲಗಳ ಅಭಿವೃದ್ಧಿಗೆ ಒತ್ತು: ರಾಮನಗರದ ರಾಮದೇವರ ಬೆಟ್ಟದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಘೋಷಿಸಿದ ಮುಖ್ಯಮಂತ್ರಿ, ವಿವಿಧ ದೇಗುಲಗಳ ಅಭಿವೃದ್ಧಿ ನಿರ್ಮಾಣ ಸೇರಿದಂತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿ:ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗಳಿಗೆ ಮೂಲ ಸೌಕರ್ಯ ಒದಗಿಸಲು 100 ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಒಳಗೊಂಡ ವಿಸ್ತೃತವಾದ ಯೋಜನೆ ತಯಾರಿಸಿ, ಟೆಂಡರ್ ಕರೆಯಲಾಗುವುದು. ಸಂತ ಸೇವಾಲಾಲ್ ಜನ್ಮ ಸ್ಥಳ ದಾವಣೆಗೆರೆಯ ಸುರಗೊಂಡ ಕೊಪ್ಪವನ್ನು ಅಭಿವೃದ್ಧಿಗಾಗಿ 5 ಕೋಟಿ ಅನುದಾನ ನೀಡಲಾಗಿದೆ. ಜೊತೆಗೆ ದಾವಣಗೆರೆಯ ಚನ್ನಗಿರಿಯ ಹೊದಿಗೆರೆಯಲ್ಲಿರುವ ಷಹಾದಿ ಮಹಾರಾಜ್ ಸಮಾಧಿ ಅಭಿವೃದ್ಧಿಗೆ 5 ಕೋಟಿ ಮೀಸಲು ನೀಡಲಾಗಿದೆ. ಜಾವೇರಿಯ ಬಂಕಾಪೂರದಲ್ಲಿ ಐತಿಹಾಸಿಕ 101 ಕಂಬಗಳ ನಗರೇಶ್ವರ ದೇವಸ್ಥಾನ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಅನುಮೋದನೆ ನೀಡಲಾಗಿದೆ.
60 ಕೋಟಿ ಅನುದಾನ:ಹಂಪಿಯ ವಿಜಯ ವಿಠ್ಠಲ ದೇವಾಲಯ, ಪುರಂದರ ಮಂಟಪ, ವಿಜಯಪುರದ ಗೋಲ್ಗುಂಬಜ್, ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಾಲಯ, ಬಾದಾಮಿ ಗುಹೆಗಳು, ಕಿತ್ತೂರು ಹಾಗೂ ಬೀದರ್ ಕೋಟೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆಯ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್, ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ 60 ಕೋಟಿ ಅನುದಾನ ಮೀಸಲು ಇಡಲಾಗಿದೆ. ಮೈಸೂರಿನ ಚಾಮುಂಡಿ ವಿಹಾರದ ಕ್ರೀಡಾಂಗಣದಲ್ಲಿ ಎರಡೂವರೆ ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಜ್ಯ ವಸ್ತು ಸಂಗ್ರಹಾಲಯ, ಕಲಾ ಗ್ಯಾಲರಿ ನಿರ್ಮಾಣಕ್ಕೆ 10 ಕೋಟಿ ವ್ಯಯ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಈ ವರ್ಷದಲ್ಲಿ ರೋಪ್ವೇ ನಿರ್ಮಾಣ: ರಾಣಿ ಚೆನ್ನಭೈರದೇವಿ ಅವರ ಹೆಸರನ್ನು ಶಾಶ್ವತಗೊಳಿಸಲು ಹೊನ್ನಾವರದಲ್ಲಿ ಚೆನ್ನಭೈರ ದೇವಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಒತ್ತು ನೀಡಿದ್ದು, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮನದಿಂದ ರೋರಿಚ್ ಹಾಗೂ ದೇವಿಕ ರಾಣಿ ಎಸ್ಟೇಟ್ನಲ್ಲಿ ವಿವಿಧ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ರೋಪ್ ವೇ ನಿರ್ಮಾಣ ಕಾಮಗಾರಿ ಈ ವರ್ಷ ಪೂರ್ಣಗೊಳಿಸಲಾಗುವುದು.
ಜಂಗಲ್ ಲಾಡ್ಜ್ ನಿರ್ಮಾಣ: ರಾಣಿ ಚೆನ್ನಭೈರದೇವಿ ಅವರ ಹೆಸರನ್ನು ಶಾಶ್ವತಗೊಳಿಸಲು ಹೊನ್ನಾವರದಲ್ಲಿ ಚೆನ್ನಭೈರ ದೇವಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಒತ್ತು ನೀಡಿದ್ದು, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮನದಿಂದ ರೋರಿಚ್ ಹಾಗೂ ದೇವಿಕ ರಾಣಿ ಎಸ್ಟೇಟ್ನಲ್ಲಿ ವಿವಿಧ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಮಂಚನಬೆಲೆ ಜಲಾಶಯದ ಹಿನ್ನೀರಿನ ಸ್ಥಳದಲ್ಲಿ 10 ಕೋಟಿ ವೆಚ್ಚದಲ್ಲಿ ಜಂಗಲ್ ಲಾಡ್ಜ್ಸ್ ಆ್ಯಂಡ್ ರೆಸಾರ್ಟ್ ಲಿ ಮೂಲಕ ರೆಸಾರ್ಟ್ ನಿರ್ಮಾಣ ಮಾಡಲಾಗುವುದು ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.
3,458 ಕೋಟಿ ಅನುದಾನ: ಕಲಬುರಗಿಯ ಸನ್ನತಿ ಚಂದ್ರಲಾಂಬಾ ಹಾಗೂ ಗಾಣಗಾಪುರ ದತ್ತಾತ್ರೇಯ ದೇವಾಲಯ, ಬನವಾಸಿಯ ಮಧುಕೇಶ್ವರ ದೇವಾಲಯಗಳ ಸಂಕೀರ್ಣ ಸಮಗ್ರ ಅಭಿವೃದ್ಧಿಗೆ ಅನುದಾನ ಮೀಸಲಿಸಲಾಗಿದೆ. ಅಲ್ಲದೇ ಮಾನವ ಮತ್ತು ಆನೆ ಸಂಘರ್ಷ ತಡೆಯುವ ಸಲುವಾಗಿ ವಿವಿಧ ಕಾಮಗಾರಿಗಳಿಗೆ 155 ಕೋಟಿ ಅನುದಾನ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಒತ್ತು ಸೇರಿದಂತೆ ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲ ರಕ್ಷಣಾ ವಲಯಕ್ಕೆ ಪ್ರಸಕ್ತ ಸಾಲಿನಲ್ಲಿ 3,458 ಕೋಟಿ ಅನುದಾನ ಮೀಸಲಿಸಲಾಗಿದೆ. 5 hpವರೆಗಿನ ವಿದ್ಯುತ್ ಸಂಪರ್ಕ ಹೊಂದಿದ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ಉಚಿತ ವಿದ್ಯುತ್, Fixed charge ನಲ್ಲಿ 50% ರಿಯಾಯಿತಿ ನೀಡುವುದಾಗಿ ಸಿಎಂ ತಮ್ಮ ಬಜೆಟ್ನಲ್ಲಿ ತಿಳಿಸಿದ್ದಾರೆ.
ಆರ್ಥಿಕ ಅಭಿವೃದ್ಧಿಗೆ ಉತ್ತೇಜನ: ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ ಹಾಗೂ AVGC ನೀತಿ ಪರಿಷ್ಕರಣೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಟಾರ್ಟ್ ಅಪ್ ಪಾರ್ಕ್ ಅನ್ನು 30 ಕೋಟಿ ವೆಚ್ಚದಲ್ಲಿ ಸ್ಥಾಪನೆ, ಸಾಂಕ್ರಾಮಿಕ ಸನ್ನದ್ದತೆ ಕೇಂದ್ರ ಸ್ಥಪಾನೆಗೆ ಮೊದಲ ಹಂತದಲ್ಲಿ 10 ಕೋಟಿ ರೂ. ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ 2023-24 ಸಾಲಿನಲ್ಲಿ ಒಟ್ಟು 61,488 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.
ಇದನ್ನೂ ಓದಿ: ಬೊಂಬಾಟ್ ಬಜೆಟ್ ಮಂಡಿಸಿದ ಬಸವರಾಜ ಬೊಮ್ಮಾಯಿ: ಸಚಿತ್ರ ಮಾಹಿತಿ