ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿರುವಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಮಂಡಿಸುತ್ತಿರುವ 2023 -24ನೇ ಸಾಲಿನ ಮುಂಗಡಪತ್ರ ಸಾಕಷ್ಟು ಕುತೂಹಲ ಕೆರಳಿಸಿದೆ. ಜನಪ್ರಿಯ ಘೋಷಣೆಗಳಿಂದ ಕೂಡಿದ ಬಜೆಟ್ ಮಂಡಿಸಿ ಆ ಮೂಲಕ ರಾಜ್ಯದ ಜನತೆಯ ಮನಸ್ಸು ಗೆದ್ದು ಅವುಗಳನ್ನು ಪಕ್ಷಕ್ಕೆ ಮತಗಳನ್ನಾಗಿ ಪರಿವರ್ತಿಸುವ ಒತ್ತಡ ಮುಖ್ಯಮಂತ್ರಿಗಳ ಮೇಲಿದೆ.
ಚುನಾವಣೆ ಪೂರ್ವ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈಗಾಗಲೇ ಮತದಾರರನ್ನು ಆಕರ್ಷಿಸುವಂತಹ ಹಲವಾರು ಚುನಾವಣೆ ಘೋಷಣೆಗಳನ್ನು ಮಾಡಿದ್ದರಿಂದ ಇದಕ್ಕೆ ಪ್ರತಿಯಾಗಿ ಉತ್ತಮವಾದ ಯೋಜನೆಗಳನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಿ ಮತದಾರರನ್ನು ಸೆಳೆಯುವ ಸವಾಲು ಸಿಎಂ ಮುಂದಿದೆ.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ, ಕುಟುಂಬದ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವ ಮಹಿಳೆಗೆ ಪ್ರತಿ ತಿಂಗಳು 2000 ರೂ. ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆ, ಅರ್ಹ ರೈತರ ಕೃಷಿ ಸಾಲ ಮನ್ನಾ, ಬಡ್ಡಿ ರಹಿತ ಸಾಲದ ಪ್ರಮಾಣ ಹೆಚ್ಚಳ, ಪ್ರತಿ ಬಿಪಿಎಲ್ ಕಾರ್ಡ್ದಾರರಿಗೆ ತಿಂಗಳಿಗೆ 10 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆ ಸೇರಿದಂತೆ ಹತ್ತಾರು ಆಕರ್ಷಕ ಚುನಾವಣೆ ಆಶ್ವಾಸನೆಗಳನ್ನ ಪ್ರಚಾರದ ವೇಳೆ ಘೋಷಣೆ ಮಾಡಿದೆ.
ಜಾತ್ಯತೀತ ಜನತಾದಳವು ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಸಾಕಷ್ಟು ಚುನಾವಣೆ ಘೋಷಣೆಗಳನ್ನು ಮಾಡಿದೆ. ಜೆಡಿಎಸ್ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದರೆ ರೈತರ ಕೃಷಿ ಸಾಲವನ್ನು ಮತ್ತೆ ಮನ್ನಾ ಮಾಡಲಾಗುತ್ತದೆ. ರಾಜ್ಯದಲ್ಲಿ ದ್ವಿತೀಯ ಪಿಯುಸಿ ತನಕ ಉಚಿತ ಶಿಕ್ಷಣ ನೀಡುವುದು, ಸ್ತ್ರೀಶಕ್ತಿ ಸಂಘಗಳು ಪಡೆದಿರುವ ಸಾಲವನ್ನು ಮನ್ನಾ ಮಾಡುವುದು, ರೈತರನ್ನ ಸ್ವಾವಲಂಬಿಗಳನ್ನಾಗಿ ಮಾಡುವುದು. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿಕೊಡುವುದು ಸೇರಿದಂತೆ ಹಲವು ಚುನಾವಣಾ ಭರವಸೆಗಳನ್ನು ನೀಡಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಗಿಂತ ಮೊದಲೇ ಉತ್ತಮ ಚುನಾವಣಾ ಘೋಷಣೆಗಳನ್ನು ಮಾಡಿದ್ದರಿಂದ ಇದಕ್ಕೆ ಪ್ರತಿಯಾಗಿ ಮತ್ತಷ್ಟು ಒಳ್ಳೆಯ ಆಕರ್ಷಕವಾದ, ಮತದಾರರನ್ನು ಆಯಸ್ಕಾಂತದಂತೆ ಸೆಳೆಯಬಲ್ಲ ಚುನಾವಣೆ ಘೋಷಣೆಗಳನ್ನು ಮುಂಗಡ ಪತ್ರದಲ್ಲಿ ಪ್ರಕಟಿಸಿ ಬಿಜೆಪಿ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುವ ಅನಿವಾರ್ಯತೆ ಬಿಜೆಪಿ ಸರ್ಕಾರಕ್ಕೆ ಈಗ ಎದುರಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ 10.15ಕ್ಕೆ ವಿಧಾನಸಭೆಯಲ್ಲಿ ಮಂಡಿಸುತ್ತಿರುವ ಮುಂಗಡಪತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಚಾರದ ವೇಳೆ ಘೋಷಣೆ ಮಾಡಿರುವ ಚುನಾವಣಾ ಆಶ್ವಾಸನೆಗಳಿಗೆ ಕೌಂಟರ್ ನೀಡುವ ಯೋಜನೆಗಳನ್ನ ಪ್ರಕಟಿಸುವ ಸಾಧ್ಯತೆ ಹೆಚ್ಚಾಗಿದೆ.
ಬಿಜೆಪಿ ಸರ್ಕಾರ ಈ ಮೊದಲೇ ಸುಳಿವು ನೀಡಿದಂತೆ ಮುಂಗಡಪತ್ರದಲ್ಲಿ ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಭರಪೂರ ಕೊಡುಗೆಗಳನ್ನು ಮುಖ್ಯಮಂತ್ರಿಗಳು ಪ್ರಕಟಿಸುವ ಸಾಧ್ಯತೆ ಇದೆ. ಕೆಲವು ಷರತ್ತಿಗೊಳಪಟ್ಟು ಕೃಷಿ ಸಾಲ ಮನ್ನಾ, ಬಡ್ಡಿರಹಿತ ಸಾಲದ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಹೆಚ್ಚಳ, ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುದಾನ ನೀಡಿಕೆ, ಮಹಿಳೆಯರಿಗೆ, ಮಕ್ಕಳಿಗೆ ಅತ್ಯಾಕರ್ಷಕ ಯೋಜನೆಗಳನ್ನ ನೀಡುವ ಸಂಭವವಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು ಸಹಾಯಧನವನ್ನು ಘೋಷಣೆ ಮಾಡುವ ಸಂಭವವಿದೆ.
ಕೃಷಿ ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ಮುಂಗಡಪತ್ರದಲ್ಲಿ ಪ್ರಕಟಿಸುವ ನಿರೀಕ್ಷೆಗಳು ಇವೆ. ಶಿಕ್ಷಣ, ವಸತಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ನಗರಾಭಿವೃದ್ಧಿ, ಇಂಧನ, ಆರೋಗ್ಯ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಉತ್ತಮ ಯೋಜನೆಗಳನ್ನ ಮುಖ್ಯಮಂತ್ರಿ ಬೊಮ್ಮಾಯಿ ಪ್ರಕಟ ಮಾಡಲಿದ್ದಾರೆ. ಬಜೆಟ್ ಗಾತ್ರವು ಈ ಬಾರಿ ಸುಮಾರು ಮೂರು ಲಕ್ಷ ಕೋಟಿಗೆ ತಲುಪುವ ಅಂದಾಜು ಇದೆ.
ಇದನ್ನೂ ಓದಿ:Karnataka Budget 2023: ಬಜೆಟ್ ಮಂಡನೆಗೆ ಕ್ಷಣಗಣನೆ: ರಾಜ್ಯದ ಜನತೆ ಮನಗೆಲ್ಲೋಕೆ ಸಿಎಂ ಕೊಡ್ತಾರಾ ಉತ್ತಮ ಆಯವ್ಯಯ?
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗಕ್ಕೆ ಹಾಗೂ ಬೆಂಗಳೂರು ನಗರಕ್ಕೆ ವಿಶೇಷ ಕೊಡುಗೆಯನ್ನು ಬಜೆಟ್ನಲ್ಲಿ ಬೊಮ್ಮಾಯಿ ನೀಡಲಿದ್ದಾರೆಂದು ಅಂದಾಜಿಸಲಾಗಿದೆ. ಬೆಲೆ ಏರಿಕೆ ಹೆಚ್ಚಾಗಿದ್ದರಿಂದ ಪೆಟ್ರೋಲ್ ಮತ್ರು ಡೀಸೆಲ್ ಮೇಲಿನ ಸೆಸ್ ಅನ್ನು ಸಿಎಂ ಕಡಿಮೆ ಮಾಡುವ ನಿರೀಕ್ಷೆಯೂ ಇದೆ. ಬೊಕ್ಕಸಕ್ಕೆ ಹೊರೆಯಾಗದಂತೆ ಇಂಧನ ದರ ಇಳಿಸಿ ಸಾರ್ವಜನಿಕರ ಮೆಚ್ಚುಗೆ ಪಡೆಯಲು ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಕಸರತ್ತು ನಡೆಸುವ ಸಂಭವವನ್ನು ಇದೆಯೆಂದೂ ಹೇಳಲಾಗುತ್ತದೆ.
ಬೆಲೆಯೇರಿಕೆ, ಆಡಳಿತ ಪಕ್ಷದ ವಿರೋಧಿ ಅಲೆ, ಮೀಸಲಾತಿ ಹೆಚ್ಚಳದ ಹೋರಾಟಗಳು, ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪಗಳು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಆಡಳಿತಕ್ಕೆ ತಂದು ತಮ್ಮ ನಾಯಕತ್ವ ಸಾಬೀತುಪಡಿಸಿಕೊಳ್ಳುವ ಸವಾಲುಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ಬಜೆಟ್ ಬಗ್ಗೆ ರಾಜಕೀಯ ಪಕ್ಷಗಳು ಮತ್ತು ಮತದಾರರಲ್ಲಿ ಕುತೂಹಲ ಹೆಚ್ಚಿಸಿದೆ.