ಬೆಂಗಳೂರು :ಶಾಲಾ-ಕಾಲೇಜುಗಳ ತರಗತಿಯೊಳಗೆ ಹಿಜಾಬ್ ಧರಿಸದಂತೆ ಹೈಕೋರ್ಟ್ ನಿನ್ನೆ (ಮಂಗಳವಾರ) ತೀರ್ಪು ಪ್ರಕಟಿಸಿದ ಹಿನ್ನೆಲೆ ಇದನ್ನು ಧರಿಸುವುದಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳು ನಾಳೆ (ಗುರುವಾರ) ಕರ್ನಾಟಕ ಬಂದ್ಗೆ ಕರೆ ನೀಡಿವೆ.
ಹಿಜಾಬ್ ನಿರ್ಬಂಧ ಮಾಡಿರುವುದು ನೋವು ತಂದಿದ್ದು, ಈ ಕಾರಣಕ್ಕೆ ಅಮೀರೆ ಇ ಶರೀಯತ್ ಸಗೀರ್ ಅಹಮ್ಮದ್ ರಶಾದಿ ಸಾಹಬ್ ಬಂದ್ಗೆ ಕರೆ ಕೊಟ್ಟಿದೆ. ರಾಜಧಾನಿಯ 50 ಸಂಘಟನೆಗಳು ಸೇರಿ ರಾಜ್ಯದ್ಯಂತ ಒಟ್ಟು 100ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ಘೋಷಿಸಿವೆ.
ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಯಲಿದೆ. ಬಂದ್ಗೆ ಎಲ್ಲರೂ ಸಹಕಾರ ನೀಡಿ ಎಂದು ಹಿಮಾಮ್ ಜಾಮಿಯಾ ಮಸೀದಿಯ ಮುಖ್ಯಸ್ಥ ಮೌಲಾನಾ ಮಸೂದ್ ಮನವಿ ಮಾಡಿದ್ದಾರೆ.
ನಾಳೆಯ ಬಂದ್ ಕುರಿತಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಮಾತನಾಡಿರುವುದು.. ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ಗೆ ಕ್ಯಾಂಪಸ್ ಫ್ರಂಟ್, ಎಸ್‌ಡಿಪಿಐ ಸಂಘಟನೆಗಳು ಬೆಂಬಲ ನೀಡಿವೆ. ಹಿಜಾಬ್ ವಿಚಾರದಲ್ಲಿ ಸಂವಿಧಾನದ ಹಕ್ಕುಗಳನ್ನು ನಿರ್ಲಕ್ಷಿಸಿ ನೀಡಿದ ಹೈಕೋರ್ಟ್ ತೀರ್ಪು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಹಿಜಾಬ್ ಕುರಿತು ತೀರ್ಪು ಹಿನ್ನೆಲೆ : ಧಾರವಾಡದಲ್ಲಿ ಸಿಆರ್ಪಿಎಫ್ ಪಡೆಯಿಂದ ಪಥಸಂಚಲನ
ಪ್ರಶ್ನಿಸದೇ ಇರಲು ಸಾಧ್ಯವಿಲ್ಲ ಎಂದ ಕ್ಯಾಂಪಸ್ ಫ್ರಂಟ್ :ಅಮೀರೆ ಇ ಶರೀಯತ್ ಸಗೀರ್ ಅಹಮ್ಮದ್ ರಶಾದಿ ಸಾಹಬ್ ಕರೆ ನೀಡಿರುವ ನಾಳಿನ ಬಂದ್ಗೆ ಬೆಂಬಲ ನೀಡುತ್ತೇವೆ. ಸಂವಿಧಾನ ನೀಡಿರುವ ವೈಯಕ್ತಿಕ ಹಕ್ಕು, ಧಾರ್ಮಿಕ ಹಕ್ಕನ್ನು ಸಂಪೂರ್ಣ ನಿರ್ಲಕ್ಷಿಸಿ ಹೈಕೋರ್ಟ್ ತೀರ್ಪು ನೀಡಿದೆ.
ಇದನ್ನು ಪ್ರಶ್ನಿಸದೆ ಇರಲು ಸಾಧ್ಯವಿಲ್ಲ. ಹೀಗಾಗಿ, ನಾಳೆ ಎಲ್ಲಾ ವಿದ್ಯಾರ್ಥಿ ಸಂಘಟನೆಗಳು, ವಿದ್ಯಾರ್ಥಿಗಳು ಈ ಬಂದ್ಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಪದಾಧಿಕಾರಿಗಳು ಕೋರಿಕೊಂಡಿದ್ದಾರೆ.