ಬೆಂಗಳೂರು: ಸಹಕಾರ ಇಲಾಖೆ ಅಧಿಕಾರಿಯೊಬ್ಬರು ಶಾಸಕರಿಗೆ ಧಮ್ಕಿ ಹಾಕಿದ್ದು, ಅವರನ್ನು ಅಮಾನತು ಮಾಡುವಂತೆ ಹೆಚ್.ಡಿ.ರೇವಣ್ಣ ಸದನದಲ್ಲಿ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ವಿಷಯ ಪ್ರಸ್ತಾಪಿಸಿದ ಅವರು, ನಮ್ಮ ಶಾಸಕ ಶಿವಲಿಂಗೇಗೌಡರಿಗೆ ಅಧಿಕಾರಿಯೊಬ್ಬರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆ ಸಂಭಾಷಣೆಯ ಸಿಡಿಯನ್ನು ನಿಮಗೆ ಬೇಕಾದರೆ ಕೊಡುತ್ತೇನೆ. ಆತನ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಹೆಚ್.ಡಿ ರೇವಣ್ಣ ಸಹಕಾರ ಇಲಾಖೆಯ ಅಧಿಕಾರಿಯೊಬ್ಬರು ಕುಡಿದು ಏನೇನೋ ಬೈತಾರೆ. ದಲಿತ ಸಮುದಾಯದ ಯುವಕನೊಬ್ಬನಿಗೆ ಆ ಅಧಿಕಾರಿ ಗನ್ನಿಂದ ಗುಂಡು ಹೊಡೀತಿನಿ ಎಂದು ಬೆದರಿಸಿದ್ದಾರೆ. ಒಂದು ಗುಂಡು ನಿನಗೆ ಹೊಡೀತೀನಿ, ಇನ್ನೊಂದು ಗುಂಡು ಯಾರಿಗೆ ಹೊಡೀಲಿ ಎಂದು ಆ ಅಧಿಕಾರಿ ಬೆದರಿಕೆ ಹಾಕಿದ್ದಾರೆ. ಜನಪ್ರತಿನಿಧಿ ವಿರುದ್ಧ ಕೆಟ್ಟದಾಗಿ ಬಯ್ದಿದ್ದಾರೆ. ಆತ ಮಾತನಾಡಿರುವ ಕಾಲ್ ರೆಕಾರ್ಡ್ ಈ ಸಿಡಿಯಲ್ಲಿ ಎಂದು ಸಿಡಿ ತೋರಿಸಿದರು. ಆತ ನಮಗೂ ಗೌರವ ಕೊಡಲ್ಲ ಎಂದ ರೇವಣ್ಣ, ಆ ಅಧಿಕಾರಿಗೆ ಶಾಸಕರೊಬ್ಬರ ಬೆಂಬಲ ಇದೆ. ಆ ಶಾಸಕರ ಹೆಸರು ಹೇಳಲ್ಲ ಎಂದು ಶಾಸಕ ಪ್ರೀತಂಗೌಡ ಹೆಸರು ಹೇಳದೇ ಪರೋಕ್ಷವಾಗಿ ಆರೋಪ ಮಾಡಿದರು.
ಇದನ್ನೂ ಓದಿ : ರೈತರಿಗೆ ನೀಡುತ್ತಿರುವ ತ್ರಿಫೇಸ್ ವಿದ್ಯುತ್ ಸಮಯ ಹೆಚ್ಚಿಸಬೇಕು: ಬಂಡೆಪ್ಪ ಕಾಶೆಂಪೂರ್
ರೇವಣ್ಣ ಆರೋಪಕ್ಕೆ ದನಿಗೂಡಿಸಿದ ಶಾಸಕ ಶಿವಲಿಂಗೇಗೌಡ, ಒಬ್ಬ ಶಾಸಕರಿಗೆ ಬೆದರಿಕೆ ಹಾಕಿದ್ದಾರೆ. ಆ ಅಧಿಕಾರಿ ವಿರುದ್ಧ ಎರಡು ಎಫ್ಐಆರ್ ಆಗಿದೆ. ಪ್ರೀತಂಗೌಡಗೆ ಆ ಅಧಿಕಾರಿ ಆಪ್ತ ಎಂದು ಆರೋಪಿಸಿದರು. ಶಿವಲಿಂಗೇಗೌಡ ಮಾತಿಗೆ ಸಿಟ್ಟಾದ ಶಾಸಕ ಪ್ರೀತಂ ಗೌಡ, ನನ್ನನ್ನು ಯಾಕೆ ಎಳೆದು ತರುತ್ತೀರಿ?. ಆ ಸಿಡಿಯ ಅಸಲಿಯತ್ತು ಬಗ್ಗೆಯೂ ಗೊತ್ತಾಗಲಿ. ಅದರ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.
ತನಿಖೆ ಆಧಾರದಲ್ಲಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಿ. ಶಿವಲಿಂಗೇಗೌಡ ಹೇಳಿದ್ರು ಎಂದು ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದರು. ಈ ವೇಳೆ ಶಿವಲಿಂಗೇಗೌಡ, ರೇವಣ್ಣ ಮತ್ತು ಪ್ರೀತಂಗೌಡ ನಡುವೆ ವಾಕ್ಸಮರ ನಡೆಯಿತು.
ಬಳಿಕ ಉತ್ತರಿಸಿದ ಸಚಿವ ಎಸ್.ಟಿ. ಸೋಮಶೇಖರ್, ಯಾವುದೇ ಅಧಿಕಾರಿ ಜನಪ್ರತಿನಿಧಿಗಳ ವಿರುದ್ಧ ಮಾತನಾಡುವುದನ್ನು ಸಹಿಸಲ್ಲ. ಈಗಾಗಲೇ ಆತನಿಗೆ ನೋಟಿಸ್ ಕೊಟ್ಟಿದ್ದೆವು, ಆತ ಉತ್ತರ ಕೊಟ್ಟಿದ್ದಾನೆ. ನನಗೆ ಉತ್ತರ ಸಮಾಧಾನ ಆಗಿಲ್ಲ, ಇಲಾಖೆಯಿಂದ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ನಾರಾಯಣ ಹಾಗೂ ಸುನೀಲ್ ಎಂಬ ಇಬ್ಬರು ಅಧಿಕಾರಿಗಳು ಇದ್ದಾರೆ. ಅವರು ಜನಪ್ರತಿನಿಧಿಗಳಿಗೆ ಅವಹೇಳನ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ನನ್ನ ಕರ್ತವ್ಯ. ಸಹಕಾರ ಇಲಾಖೆಯಲ್ಲಿ ಇರುವುದು ನಾಲಾಯಕ್ ಎಂದು ಆತನಿಗೆ ನೋಟಿಸ್ ಕೊಡುವ ಕ್ರಮ ಆಗಿದೆ. ಕಾನೂನಿನಲ್ಲಿ ಏನಿದೆ, ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.