ETV Bharat Karnataka

ಕರ್ನಾಟಕ

karnataka

ETV Bharat / state

ವಲಸಿಗ ಬಿಜೆಪಿಗರಿಗೆ ಸಿಹಿ-ಕಹಿ: ಬಿ.ಸಿ.ಪಾಟೀಲ್, ಸುಧಾಕರ್, ಎಂಟಿಬಿ ಸೇರಿ ಪ್ರಮುಖರಿಗೆ ಸೋಲು - ವಲಸಿಗ ಶಾಸಕರು

2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ 12 ಕಡೆ ವಲಸಿಗ ಶಾಸಕರು ಬಿಜೆಪಿಯಿಂದ ಗೆದ್ದು ಅಧಿಕಾರ ಭದ್ರಪಡಿಸಿಕೊಂಡಿದ್ದರು. ಈ ಬಾರಿ ಚುನಾವಣೆಯಲ್ಲಿ ಬಿ.ಸಿ.ಪಾಟೀಲ್, ಸುಧಾಕರ್, ಎಂಟಿಬಿ ಸೇರಿ ಪ್ರಮುಖ ಆರು ನಾಯಕರು ಸೋತಿದ್ದಾರೆ.

karnataka-assembly-elections: Migrants Mlas results
ವಲಸಿಗ ಶಾಸಕರ ಕ್ಷೇತ್ರಗಳ ಸ್ಥಿತಿ
author img

By

Published : May 13, 2023, 8:20 AM IST

Updated : May 14, 2023, 9:46 AM IST

ಬೆಂಗಳೂರು: ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶವನ್ನು ರಾಜ್ಯದ ಮತದಾರರು ನೀಡಿದ್ದರು. ಹೀಗಾಗಿ ಹೆಚ್.​​ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​ ಮೈತ್ರಿ ಸರ್ಕಾರ ರಚನೆಯಾಗಿತ್ತು. ಆದರೆ, ಸುಮಾರು 13 ತಿಂಗಳು ಕಳೆದ ನಂತರ ಬಿಜೆಪಿ ಆಡಳಿತಾರೂಢ ಪಕ್ಷಗಳ 17 ಶಾಸಕರನ್ನು ತನ್ನತ್ತ ಸೆಳೆದಿತ್ತು. 2019ರಲ್ಲಿ ಎದುರಾದ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ 12 ಕಡೆ ಬಿಜೆಪಿ ಗೆದ್ದು ಅಧಿಕಾರ ಭದ್ರಪಡಿಸಿಕೊಂಡಿತ್ತು. ಇದೀಗ 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ವಲಸಿಗ ಶಾಸಕರು ಚುನಾವಣೆ ಎದುರಿಸಿದ್ದು, ಆ ಕ್ಷೇತ್ರಗಳ ಫಲಿತಾಂಶದ ಚಿತ್ರಣ ಹೀಗಿದೆ.

ಪ್ರತಾಪ್ ಗೌಡ ಪಾಟೀಲ್ (ಮಸ್ಕಿ): ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಗೌಡ ಪಾಟೀಲ್ ಮತ್ತೆ ಸೋಲು ಕಂಡಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಕಾಂಗ್ರೆಸ್​ನ ಬಸನಗೌಡ ತುರ್ವಿಹಾಳ್ ಜಯ ದಾಖಲಿಸಿದ್ದಾರೆ.2018ರಲ್ಲಿ ಪ್ರತಾಪ್​ ಗೌಡ ಪಾಟೀಲ್​ ಕಾಂಗ್ರೆಸ್​ನಿಂದ ಗೆದ್ದಿದ್ದರು. ನಂತರ ಬಿಜೆಪಿ ಸೇರಿದ್ದರು. ಆದರೆ, ಅಂದು ಬಿಜೆಪಿಗೆ ಸೇರಿದ ಎಲ್ಲ ಶಾಸಕರೊಂದಿಗೆ ಇವರು ರಾಜೀನಾಮೆ ನೀಡಿರಲಿಲ್ಲ. ಹೀಗಾಗಿ ಇಲ್ಲಿ ತಡವಾಗಿ ಉಪ ಚುನಾವಣೆ ಎದುರಾಗಿತ್ತು. ಉಪ ಚುನಾವಣೆಯಲ್ಲಿ ಬಿಜೆಪಿ ಚಿಹ್ನೆ ಮೇಲೆ ಸ್ಪರ್ಧಿಸಿದ್ದ ಪ್ರತಾಪ್​ ಗೌಡ ಪಾಟೀಲ್​, ಕಾಂಗ್ರೆಸ್​ನ ಬಸನಗೌಡ ತುರ್ವಿಹಾಳ್ ವಿರುದ್ಧ ಸೋಲುಡಿದ್ದರು. ಬಸನಗೌಡ 2018ರ ಚುನಾವಣೆಯಿಂದ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 123 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಸೇರಿ ಗೆಲುವು ದಾಖಲಿಸಿದ್ದರು. ಚುನಾವಣೆಯಲ್ಲಿ ಬಿಜೆಪಿ ಪ್ರತಾಪ್​ ಗೌಡ ಅವರನ್ನು ಕಣಕ್ಕೆ ಇಳಿಸಿತ್ತು. ಕಾಂಗ್ರೆಸ್​ನಿಂದ ಬಸನಗೌಡ ಸ್ಪರ್ಧೆ ಮಾಡಿದ್ದಾರೆ.

in article image
ಸೋಲು-ಗೆಲುವಿನ ಅಂಕಿ-ಅಂಶ

ಬಿ.ಸಿ.ಪಾಟೀಲ್ (ಹಿರೇಕೆರೂರು): ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ.ಪಾಟೀಲ್ ಸೋತಿದ್ದಾರೆ. ಕಾಂಗ್ರೆಸ್​ನ ಯು.ಬಿ.ಬಣಕಾರ್ ಗೆಲುವಿನ ನಗೆ ಬೀರಿದ್ಧಾರೆ. 2018ರಲ್ಲಿ ಕಾಂಗ್ರೆಸ್‌ನಿಂದ ಬಿ.ಸಿ.ಪಾಟೀಲ್ ಆಯ್ಕೆಯಾಗಿದ್ದರು. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಮರು ಆಯ್ಕೆಯಾಗಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯು.ಬಿ.ಬಣಕಾರ್ ಅವರು ನಂತರ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಬಿ.ಸಿ.ಪಾಟೀಲ್ ವಿರುದ್ಧ ಬಣಕಾರ್ ಕಾಂಗ್ರೆಸ್​ನಿಂದ​ ಸ್ಪರ್ಧೆ ಮಾಡಿದ್ದರು. 2004ರಿಂದಲೂ ಯು.ಬಿ.ಬಣಕಾರ್ ಮತ್ತು ಬಿ.ಸಿ.ಪಾಟೀಲ್ ನಡುವೆಯೇ ಇದೆ. 2004ರಲ್ಲಿ ಬಿ.ಸಿ.ಪಾಟೀಲ್ ಜೆಡಿಎಸ್‌ನಿಂದ ಮತ್ತು 2008ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. 2013ರಲ್ಲಿ ಕೆಜೆಪಿಯಿಂದ ಯು.ಬಿ.ಬಣಕಾರ್ ಗೆದ್ದಿದ್ದರು.

ಶಿವರಾಮ ಹೆಬ್ಬಾರ್ (ಯಲ್ಲಾಪುರ):ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ಗೆಲುವು ಕಂಡಿದ್ದಾರೆ. ಕಾಂಗ್ರೆಸ್​ನ ವಿ.ಎಸ್.ಪಾಟೀಲ್ ಸೋತಿದ್ದಾರೆ. 2013 ಮತ್ತು 2018ರಲ್ಲಿ ಎರಡು ಬಾರಿ ಕಾಂಗ್ರೆಸ್​ನಿಂದ ಹೆಬ್ಬಾರ್ ಆಯ್ಕೆಯಾಗಿದ್ದರು. ಬಳಿಕ ಬಿಜೆಪಿ ಸೇರಿ ಉಪಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು. 2013 ಮತ್ತು 2018ರ ಎರಡೂ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದ ವಿಎಸ್​ ಪಾಟೀಲ್​ ಸೋತಿದ್ದರು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ವಿಎಸ್​ ಪಾಟೀಲ್​ ಕಣಕ್ಕಿಳಿದಿದ್ದಾರೆ.

ಎಸ್.​ಟಿ.ಸೋಮಶೇಖರ್ (ಯಶವಂತಪುರ): ಯಶವಂತಪುರ ಕ್ಷೇತ್ರದಲ್ಲಿ ಎಸ್.​ಟಿ.ಸೋಮಶೇಖರ್ ಗೆಲುವು ಸಾಧಿಸಿದ್ದಾರೆ. ಜೆಡಿಎಸ್​ನ ಜವರಾಯಿಗೌಡ ಮತ್ತೊಮ್ಮೆ ಸೋತಿದ್ದಾರೆ. 2013 ಮತ್ತು 2018ರಲ್ಲಿ ಎರಡು ಬಾರಿ ಕಾಂಗ್ರೆಸ್​ನಿಂದ ಸೋಮಶೇಖರ್ ಗೆದ್ದಿದ್ದರು. 2019ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಆಯ್ಕೆಯಾಗಿದ್ದರು. ಎರಡು ಸಾರ್ವತ್ರಿಕ ಚುನಾವಣೆಗಳು ಮತ್ತು ಉಪ ಚುನಾವಣೆಯಲ್ಲಿ ಜೆಡಿಎಸ್​ನ ಟಿಎನ್​ ಜವರಾಯಿಗೌಡ ಸೋತಿದ್ದರು. ಈ ಚುನಾವಣೆಯಲ್ಲೂ ಜವರಾಯಿಗೌಡ ಅವರನ್ನೇ ಜೆಡಿಎಸ್​ ಮತ್ತೊಮ್ಮೆ ಕಣಕ್ಕಿಳಿಸಿತ್ತು. ಮತ್ತೊಂದೆಡೆ, ಕಾಂಗ್ರೆಸ್​ನಿಂದ​ ಎಸ್​.ಬಾಲರಾಜ್​ಗೌಡ ಸ್ಪರ್ಧೆ ಮಾಡಿದ್ದರು.

ಬೈರತಿ ಬಸವರಾಜ್ (ಕೆ.ಆರ್.ಪುರಂ):ಕೆ.ಆರ್.ಪುರಂ ಕ್ಷೇತ್ರದಲ್ಲಿಬೈರತಿ ಬಸವರಾಜ್ ಭರ್ಜರಿ ಗೆಲುವು ದಾಖಲಿಸಿದ್ಧಾರೆ. ಕಾಂಗ್ರೆಸ್​ನಿಂದ ಡಿಕೆ ಮೋಹನ್​ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 2013 ಮತ್ತು 2018ರಲ್ಲಿ ಎರಡು ಬಾರಿ ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದರು. ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಬಳಿಕ 2019ರ ಉಪ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್​ನ ಎಂ.ನಾರಾಯಣ ಸ್ವಾಮಿ ಸೋತಿದ್ದರು. ಈ ಬಾರಿ ಬಿಜೆಪಿಯಿಂದ ಬೈರತಿ ಬಸವರಾಜ್ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್​ನಿಂದ ಡಿಕೆ ಮೋಹನ್​ ಸ್ಪರ್ಧೆ ಮಾಡದ್ದರು.

ಆನಂದ್ ಸಿಂಗ್ (ವಿಜಯನಗರ): ವಿಜಯ ನಗರ ಕ್ಷೇತ್ರದಲ್ಲಿಆನಂದ್ ಸಿಂಗ್ ಬದಲು ಸ್ಪರ್ಧಿಸಿದ್ದ ಪುತ್ರ ಸಿದ್ಧಾರ್ಥ್​ ಸಿಂಗ್ ಸೋಲು ಕಂಡಿದ್ದಾರೆ. ಕಾಂಗ್ರೆಸ್​ನ ಹೆಚ್​ಆರ್​ ಗವಿಯಪ್ಪ ಜಯ ಸಾಧಿಸಿದ್ದಾರೆ. 2013 ಮತ್ತು 2018ರಲ್ಲಿ ಎರಡು ಬಾರಿ ಆನಂದ್ ಸಿಂಗ್ ಬಿಜೆಪಿಯಿಂದ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ ಮರಳಿ ಕಮಲ ಪಕ್ಷ ಸೇರಿದ್ದ ಆನಂದ್​ ಸಿಂಗ್​ 2019ರ ಉಪ ಚುನಾವಣೆಯಲ್ಲಿ ಕೂಡ ಜಯ ದಾಖಲಿಸಿದ್ದರು. ಆದರೆ, ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಆನಂದ್​ ಸಿಂಗ್​ ಬಿಜೆಪಿಯಿಂದ ತಮ್ಮ ಮಗ ಸಿದ್ಧಾರ್ಥ್​ ಸಿಂಗ್ ಅವರನ್ನು ಕಣಕ್ಕೆ ಇಳಿಸಿದ್ದರು.

ಸೋಲು-ಗೆಲುವಿನ ಅಂಕಿ-ಅಂಶ

ಎನ್​.ಮುನಿರತ್ನ (ಆರ್​ಆರ್​ ನಗರ):ಆರ್​ಆರ್​ ನಗರ ಕ್ಷೇತ್ರದಲ್ಲಿಮುನಿರತ್ನ ಗೆಲುವು ಕಂಡಿದ್ದಾರೆ. ಕಾಂಗ್ರೆಸ್​ನ ಕುಸುಮಾ ಸೋತಿದ್ದಾರೆ. 2013 ಮತ್ತು 2018ರಲ್ಲಿ ಕಾಂಗ್ರೆಸ್​ನಿಂದ ಗೆದ್ದು ಎರಡನೇ ಬಾರಿಗೆ ಮುನಿರತ್ನ ಆಯ್ಕೆಯಾಗಿದ್ದರು. ಬಿಜೆಪಿಯಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಕಾಂಗ್ರೆಸ್​ನಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಐಎಎಸ್ ಅಧಿಕಾರಿಯಾಗಿದ್ದ ದಿವಂಗತ ಡಿಕೆ ರವಿ ಪತ್ನಿ ಕುಸುಮಾ ಹನುಮಂತರಾಯಪ್ಪ ಪರಾಜಿತಗೊಂಡಿದ್ದರು. ಈ ಬಾರಿ ಕಾಂಗ್ರೆಸ್​ನಿಂದ ಕುಸುಮಾ ಮತ್ತು ಬಿಜೆಪಿಯಿಂದ ಮುನಿರತ್ನ ಕಣದಲ್ಲಿದ್ದಾರೆ.

ಡಾ. ಕೆ.ಸುಧಾಕರ್ (ಚಿಕ್ಕಬಳ್ಳಾಪುರ): ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ. ಕೆ.ಸುಧಾಕರ್ ಸೋತಿದ್ದಾರೆ. ಕಾಂಗ್ರೆಸ್​ನ ಪ್ರದೀಪ್​ ಈಶ್ವರ್ ಜಯದ ಕೇಕೆ ಹಾಕಿದ್ದಾರೆ. ​2013 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸುಧಾಕರ್ ಗೆಲುವು ಕಂಡಿದ್ದರು. ನಂತರ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜಯ ದಾಖಲಿಸಿದ್ದರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಎಂ.ಅಂಜನಪ್ಪ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್​ ಪ್ರದೀಪ್​ ಈಶ್ವರ್​ ಅವರಿಗೆ ಮಣೆ ಹಾಕಿತ್ತು.

ಎಂಟಿಬಿ ನಾಗರಾಜ್ (ಹೊಸಕೋಟೆ):ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಮತ್ತೊಮ್ಮೆ ಸೋಲು ಕಂಡಿದ್ದಾರೆ. ಕಾಂಗ್ರೆಸ್​ನ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ. 2013 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಎಂಟಿಬಿ ನಾಗರಾಜ್ ಗೆಲುವು ಸಾಧಿಸಿದ್ದರು. 2013ರಲ್ಲಿ ಬಿಜೆಪಿಯಿಂದ ಬಿಎನ್​ ಬಚ್ಚೇಗೌಡ ಮತ್ತು 2018ರಲ್ಲಿ ಮಗ ಶರತ್​ ಬಚ್ಚೇಗೌಡ ಸಹ ಸೋಲು ಕಂಡಿದ್ದರು. ಆದರೆ, ಕಾಂಗ್ರೆಸ್​ ತೊರೆದು ನಾಗರಾಜ್​ ಬಿಜೆಪಿ ಸೇರಿದ್ದ 2019ರ ಉಪ ಚುನಾವಣೆಯಲ್ಲಿ ಸೋತಿದ್ದರು. 2018ರ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದ ಶರತ್ ಬಚ್ಚೇಗೌಡ ಬಿಜೆಪಿ ವಿರುದ್ಧ ಬಂಡಾಯ ಎದ್ದು ಸ್ವತಂತ್ರವಾಗಿ ಸ್ಪರ್ಧೆ ಗೆಲುವು ದಾಖಲಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಶರತ್ ಬಚ್ಚೇಗೌಡ ಸ್ಪರ್ಧೆ ಮಾಡಿದ್ದರು. ಬಿಜೆಪಿಯಿಂದ ನಾಗರಾಜ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಶ್ರೀಮಂತ್​ ಪಾಟೀಲ್​ (ಕಾಗವಾಡ): ಕಾಗವಾಡ ಕ್ಷೇತ್ರದಲ್ಲಿ ಶ್ರೀಮಂತ್​ ಪಾಟೀಲ್​ ಸಹ ಸೋತಿದ್ದಾರೆ. ಕಾಂಗ್ರೆಸ್​ನ ರಾಜು ಕಾಗೆ ಜಯ ದಾಖಲಿಸಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಶ್ರೀಮಂತ್​ ಪಾಟೀಲ್​ ಗೆದ್ದಿದ್ದರು. ನಂತರ ಕಾಂಗ್ರೆಸ್​ ತೊರೆದು ಶ್ರೀಮಂತ್​ ಪಾಟೀಲ್ ಬಿಜೆಪಿ ಸೇರಿದ್ದರಿಂದ ಉಪ ಚುನಾವಣೆ ಎದುರಾಗಿತ್ತು. ಆಗ ಬಿಜೆಪಿಯ ಹಿರಿಯ ನಾಯಕ, ಮಾಜಿ ಶಾಸಕ, 2018ರ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಯಾಗಿದ್ದ ರಾಜು ಕಾಗೆ ಅವರನ್ನು ಕಾಂಗ್ರೆಸ್​ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ, ಉಪ ಚುನಾವಣೆಯಲ್ಲಿ ರಾಜು ಕಾಗೆ ಅವರನ್ನೂ ಮಣಿಸುವಲ್ಲಿ ಶ್ರೀಮಂತ್​ ಯಶ ಕಂಡಿದ್ದರು. ಈ ಬಾರಿ ಕಾಂಗ್ರೆಸ್​ನಿಂದ ರಾಜು ಕಾಗೆ ಗೆಲುವು ಕಂಡಿದ್ಧಾರೆ.

ರಮೇಶ್ ಜಾರಕಿಹೊಳಿ (ಗೋಕಾಕ್):ಗೋಕಾಕ್​ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಮತ್ತೊಮ್ಮೆ ಗೆಲುವು ಕಂಡಿದ್ದಾರೆ. ಕಾಂಗ್ರೆಸ್​ನ ಡಾ.ಮಹಾಂತೇಶ ಕಡಾಡಿ ಸೋತಿದ್ದಾರೆ. ರಮೇಶ ಜಾರಕಿಹೊಳಿ ಕಾಂಗ್ರೆಸ್​ನಿಂದ 1999ರಿಂದ 2018ರವರೆಗೆ ಸತತವಾಗಿ ಐದು ಬಾರಿ ಜಯ ದಾಖಲಿಸಿದ್ದರು. 2019ರಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸುವಲ್ಲಿ ಪ್ರಮುಖ ಪಾತ್ರದಾರಿಯಾಗಿದ್ದರು. ನಂತರ ಬಿಜೆಪಿ ಸೇರಿ 2019ರ ಉಪ ಚುನಾವಣೆಯಲ್ಲಿಯೂ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಅತೀ ಹೆಚ್ಚು ಎಂದರೆ ಸತತವಾಗಿ ಆರು ಬಾರಿ ಗೆದ್ದ ಇತಿಹಾಸ ನಿರ್ಮಿಸಿದ್ದರು. ಈ ಬಾರಿ ಚುನಾವಣೆಯಲ್ಲೂ ರಮೇಶ ಜಾರಕಿಹೊಳಿ ಗೆಲುವಿನ ಓಟ ಮುಂದುವರೆಸಿದ್ದಾರೆ.

ಮಹೇಶ್ ಕುಮಟಳ್ಳಿ (ಅಥಣಿ​):ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಸೋತಿದ್ದಾರೆ. ಕಾಂಗ್ರೆಸ್​ನ ಲಕ್ಷ್ಮಣ ಸವದಿ ಗೆಲುವು ದಾಖಲಿಸಿದ್ದಾರೆ. 2018ರಲ್ಲಿ ಮಹೇಶ್ ಕುಮಟಳ್ಳಿ ಕಾಂಗ್ರೆಸ್​ನಿಂದ ಗೆದ್ದಿದ್ದರು. ಬಳಿಕ ಬಿಜೆಪಿ ಸೇರಿ ಉಪ ಚುನಾವಣೆಯಲ್ಲೂ ಗೆಲುವು ಕಂಡಿದ್ದರು. ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಮೂರು ಆಯ್ಕೆಯಾಗಿದ್ದ ಬಾರಿ ಆಯ್ಕೆಯಾಗಿದ್ದ ಲಕ್ಷ್ಮಣ ಸವದಿ 2018ರಲ್ಲಿ ಸೋತಿದ್ದರು. 2019ರ ಉಪ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್​ ಬಿಟ್ಟುಕೊಟ್ಟಿದ್ದರು. ಆದರೆ, ಈ ಬಾರಿ ಬಿಜೆಪಿ ಟಿಕೆಟ್​ಗಾಗಿ ಲಕ್ಷ್ಮಣ ಸವದಿ ಪಟ್ಟು ಹಿಡಿದಿದ್ದರು. ಆದರೆ, ಬಿಜೆಪಿ ಟಿಕೆಟ್​ ಸಿಗದ ಕಾರಣ ಕಾಂಗ್ರೆಸ್​ ಸೇರಿ ಲಕ್ಷ್ಮಣ ಸವದಿ ಸ್ಪರ್ಧೆ ಮಾಡಿದ್ದರು.

ಆರ್​.ಶಂಕರ್ (ರಾಣೆಬೆನ್ನೂರು): ರಾಣೆಬೆನ್ನೂರು ಕ್ಷೇತ್ರದಲ್ಲಿ ಆರ್​.ಶಂಕರ್ ಪರಾಭವಗೊಂಡಿದ್ದಾರೆ. ಕಾಂಗ್ರೆಸ್​ನ ಪ್ರಕಾಶ್​ ಕೋಳಿವಾಡ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಕೆಪಿಜೆಪಿಯಿಂದ ಸ್ಪರ್ಧಿಸಿ ಆರ್​.ಶಂಕರ್ ಗೆಲುವು ಕಂಡಿದ್ದರು. ನಂತರ ಶಾಸಕ ಸ್ಥಾನದಿಂದ ಅನರ್ಹವಾಗಿದ್ದರಿಂದ ಉಪ ಚುನಾವಣೆ ಎದುರಾಗಿತ್ತು. ಆಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಅರುಣಕುಮಾರ್​ ಗೆಲುವು ಕಂಡಿದ್ದರು. ನಂತರ ಬಿಜೆಪಿ ಆರ್​.ಶಂಕರ್ ಅವರನ್ನು ವಿಧಾನ ಪರಿಷತ್​ಗೆ ಆಯ್ಕೆ ಮಾಡಿತ್ತು. ಈ ಚುನಾವಣೆಯಲ್ಲಿ ಆರ್​.ಶಂಕರ್ ಎನ್​ಸಿಪಿಯಿಂದ ಕಣಕ್ಕಿಳಿದಿದ್ದರು. ಬಿಜೆಪಿಯಿಂದ ಅರುಣಕುಮಾರ್​, ಕಾಂಗ್ರೆಸ್​ನಿಂದ ಪ್ರಕಾಶ್​ ಕೋಳಿವಾಡ ಸ್ಪರ್ಧೆ ಮಾಡಿದ್ದರು.

ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್): ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿಕೆ.ಗೋಪಾಲಯ್ಯ ಗೆಲುವು ಕಂಡಿದ್ಧಾರೆ. 2013 ಮತ್ತು 2018ರಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಗೋಪಾಲಯ್ಯ ಜಯ ಸಾಧಿಸಿದ್ದರು. ನಂತರ ಪಕ್ಷ ಬದಲಿಸಿ ಬಿಜೆಪಿಗೆ ಸೇರಿದ್ದರು. 2019ರ ಉಪ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರು. 2018ರಲ್ಲಿ ಬಿಜೆಪಿಯಿಂದ ನೆ.ಲ.ನರೇಂದ್ರಬಾಬು ಸ್ಪರ್ಧಿಸಿ ಸೋತಿದ್ದರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಎಂ.ಶಿವರಾಜು ಸೋಲು ಕಂಡಿದ್ದರು. ಈ ಬಾರಿ ಗೋಪಾಲಯ್ಯ ವಿರುದ್ಧ, ಕಾಂಗ್ರೆಸ್​ನಿಂದ ಕೇಶವಮೂರ್ತಿ ಎಸ್​. ಹಾಗೂ ಜೆಡಿಎಸ್​ನಿಂದ ಕೆಸಿ ರಾಜಣ್ಣ ಸ್ಪರ್ಧೆ ಮಾಡಿದ್ದರು.

ಹೆಚ್.ವಿಶ್ವನಾಥ್ (ಹುಣಸೂರು):ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್​ನ ಜೆಡಿ ಹರೀಶಗೌಡ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ನ ಹೆಚ್​ಪಿ ಮಂಜುನಾಥ್ ಸೋತಿದ್ದಾರೆ. 2018ರಲ್ಲಿ ಜೆಡಿಎಸ್​ನಿಂದ ಹೆಚ್​ ವಿಶ್ವನಾಥ್​ ಗೆಲುವು ಕಂಡಿದ್ದರು. ನಂತರ ಬಿಜೆಪಿಗೆ ಸೇರಿದ್ದರು. ಇದರಿಂದ ಎದುರಾದ ಉಪ ಚುನಾವಣೆ ಎದುರಾಗಿತ್ತು. ಆದರೆ, ಈ ಚುನಾವಣೆಯಲ್ಲಿ ವಿಶ್ವನಾಥ್ ಸೋಲು ಕಂಡಿದ್ದರು. 2018ರ ಪರಾಜಿತ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್​ನ ಹೆಚ್​ಪಿ ಮಂಜುನಾಥ್ ಉಪ ಚುನಾವಣೆಯಲ್ಲಿ ಗೆದ್ದಿದ್ದರು.

ಕೆಸಿ ನಾರಾಯಣ ಗೌಡ (ಕೆಆರ್ ಪೇಟೆ): ಕೆಆರ್ ಪೇಟೆ ಕ್ಷೇತ್ರದಲ್ಲಿ ಕೆಸಿ ನಾರಾಯಣ ಗೌಡ ಸೋತಿದ್ದಾರೆ. ಜೆಡಿಎಸ್​ನ ಹೆಚ್​ಟಿ ಮಂಜು ಗೆಲುವು ಸಾಧಿಸಿದ್ದಾರೆ. 2013 ಮತ್ತು 2018ರ ಚುನಾವಣೆಯಲ್ಲಿ ಎರಡು ಬಾರಿ ಜೆಡಿಎಸ್​ನಿಂದ ಕೆಸಿ ನಾರಾಯಣ ಗೌಡ ಗೆದ್ದಿದ್ದರು. ನಂತರ ಜೆಡಿಎಸ್​ ತೊರೆದು ಅವರು ಬಿಜೆಪಿ ಸೇರ್ಪಡೆಗೊಂಡಿದ್ದರು. ಇದರಿಂದ ನಡೆದ 2019ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದರು. ಈ ಮೂಲಕ 1957ರಿಂದ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು. ಉಪ ಚುನಾವಣೆಯಿಂದ ಜೆಡಿಎಸ್​ನಿಂದ ಸ್ಪರ್ಧೆ ಮಾಡಿದ್ದ ಬಿಎಲ್​ ದೇವರಾಜ ಸೋತಿದ್ದರು.

ಇದನ್ನೂ ಓದಿ:ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಏಳು-ಬೀಳಿನ ಕತೆ ಏನು? ಮೈತ್ರಿ ಸರ್ಕಾರದ ಆಸಕ್ತಿಕರ ಸಂಗತಿ!

Last Updated : May 14, 2023, 9:46 AM IST

ABOUT THE AUTHOR

...view details