ಚಾಮರಾಜಪೇಟೆ ಕ್ಷೇತ್ರ: ಸ್ಥಳೀಯರ ಅಭಿಪ್ರಾಯ ಬೆಂಗಳೂರು:ನಗರದ ಪ್ರಮುಖ ವಿಧಾನಸಭೆ ಕ್ಷೇತ್ರವಾದ ಚಾಮರಾಜಪೇಟೆ ಈ ಬಾರಿಯ ಚುನಾವಣೆಯಲ್ಲಿ ಹೊಸ ರಾಜಕೀಯ ಲೆಕ್ಕಾಚಾರದೊಂದಿಗೆ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್ ಭದ್ರಕೋಟೆಯಾಗಿರುವ ಇಲ್ಲಿ ಸದ್ಯ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇನ್ನೇನು 5 ದಿನಗಳಲ್ಲಿ ಚುನಾವಣೆಗೆ ಮತದಾನ ನಡೆಯಲಿದೆ. ಎಲ್ಲಾ ರಾಜಕೀಯ ಪಕ್ಷಗಳು ಅಂತಿಮ ಹಂತದ ಕಸರತ್ತು ನಡೆಸುತ್ತಿವೆ. ಕಣದಲ್ಲಿರುವ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಜೆಡಿಎಸ್‌ನಲ್ಲಿದ್ದಾಗ ಹೆಚ್.ಡಿ.ಕುಮಾರಸ್ವಾಮಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಜಮೀರ್, 2008, 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಜಯಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಒಟ್ಟು 3 ಬಾರಿ ಗೆದ್ದು ಬೀಗಿರುವ ಇವರು ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರೇ ನಿರ್ಣಾಯಕರು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿರುವ ಜಮೀರ್ ಅಹಮ್ಮದ್ ಖಾನ್ ಪ್ರಭಾವ ಇಲ್ಲಿದೆ. ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಜಮೀರ್ ಅಹಮ್ಮದ್ ವೈಯಕ್ತಿಕ ವರ್ಚಸ್ಸೇ ಹೆಚ್ಚು. ಆ ವರ್ಚಸ್ಸಿನಿಂದಲೇ ಜಮೀರ್ ಹ್ಯಾಟ್ರಿಕ್ ಗೆಲುವು ಸಾಧಿಸಿ, ನಾಲ್ಕನೇ ಬಾರಿ ಗೆಲುವಿಗಾಗಿ ತಂತ್ರ ರೂಪಿಸುತ್ತಿದ್ದಾರೆ.
ಕ್ಷೇತ್ರದ ಇತರೆ ಹುರಿಯಾಳುಗಳು ಯಾರು?:ಬಿಜೆಪಿಯಿಂದ ಹೊಸ ಮುಖ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಪಕ್ಷ ಸಿ.ಗೋವಿಂದ ರಾಜ ಅವರನ್ನು ಕಣಕ್ಕಿಳಿಸಿದೆ. ಜಮೀರ್ ಆಪ್ತರಾಗಿದ್ದ ಸಿ.ಗೋವಿಂದರಾಜ ಜೆಡಿಎಸ್ಗೆ ವಲಸೆ ಬಂದು ತೆನೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆ ಮೂಲಕ ಚಾಮರಾಜಪೇಟೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕ್ಷೇತ್ರದಲ್ಲಿ ಮೂವರು ಪಕ್ಷೇತರರು ಸೇರಿ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಪೈಪೋಟಿ ಇದೆ.
ರಾಜಕೀಯ ಲೆಕ್ಕಾಚಾರ:ಜಮೀರ್ ಚಾಮರಾಜಪೇಟೆ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದಾರೆ. ಬದಲಾಗಿರುವ ರಾಜಕೀಯ ಲೆಕ್ಕಾಚಾರದಿಂದ ಈ ಸಲ ಕ್ಷೇತ್ರ ಸ್ವಲ್ಪ ಕುತೂಹಲ ಕೆರಳಿಸಿದೆ. 'ಮನೆ ಮಗ' ಎಂಬ ಘೋಷವಾಕ್ಯದೊಂದಿಗೆ ಜಮೀರ್ ಕ್ಷೇತ್ರದಲ್ಲಿ ಮತಬೇಟೆ ಮಾಡುತ್ತಿದ್ದಾರೆ.
ಈದ್ಗಾ ಮೈದಾನ ವಿವಾದ ಕ್ಷೇತ್ರದ ಪ್ರಮುಖ ಚುನಾವಣಾ ಅಜೆಂಡಾವಾಗಿದೆ. ಹಾಗಾಗಿ ಈ ಬಾರಿ ಕ್ಷೇತ್ರದ ಚುನಾವಣಾ ಲೆಕ್ಕವನ್ನು ಇದು ಬದಲಾಯಿಸಲಿದೆ. ಈದ್ಗಾ ಮೈದಾನ ವಿವಾದ, ಗಣೇಶೋತ್ಸವಕ್ಕೆ ಮೈದಾನದಲ್ಲಿ ಅವಕಾಶ ನೀಡದೇ ಇರುವುದನ್ನು ಬಳಸಿ ಹಾಲಿ ಶಾಸಕ ಹಿಂದೂ ವಿರೋಧಿ ಎಂಬ ಅಂಶದೊಂದಿಗೆ ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಭಾಸ್ಕರ್ ರಾವ್ ಕ್ಷೇತ್ರದಲ್ಲಿನ ಅಭಿವೃದ್ಧಿ ಕುಂಟಿತವನ್ನು ಮುಂದಿಟ್ಟು ಮತಯಾಚುಸುತ್ತಿದ್ದಾರೆ.
ಜಮೀರ್ ಆಪ್ತ ಬಳಗದಲ್ಲಿದ್ದ ಮಾಜಿ ಕಾರ್ಪೊರೇಟರ್ ಗೋವಿಂದರಾಜು ಅವರನ್ನು ಜೆಡಿಎಸ್ ಪಕ್ಷಕ್ಕೆ ಸೆಳೆದು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಬಿಬಿಎಂಪಿಯ ಮಾಜಿ ಸದಸ್ಯೆ ಗೌರಮ್ಮ ಅವರ ಪತಿ, ಕಾಂಗ್ರೆಸ್ ಮುಖಂಡ ಗೋವಿಂದರಾಜು ಹಾಗೂ ಅವರ ಬೆಂಬಲಿಗರನ್ನು ಜೆಡಿಎಸ್ ಸೆಳೆಯುವ ಮೂಲಕ ಕ್ಷೇತ್ರದಲ್ಲಿ ರಾಜಕೀಯ ಸಮೀಕರಣವನ್ನು ಬದಲಾಯಿಸಿದೆ. ಹಿಂದಿನ ಚುನಾವಣೆಯಲ್ಲಿ ಜಮೀರ್ ಪರ ಗೋವಿಂದರಾಜು ಕೆಲಸ ಮಾಡಿದ್ದರು. ಇದೀಗ ಕಾಂಗ್ರೆಸ್ ಪಕ್ಷ ಬಿಟ್ಟಿರುವುದು ‘ಕೈ’ ಪಡೆಗೆ ಆತಂಕ ತಂದೊಡ್ಡಿದೆ.
ಜಾತಿ ಸಮೀಕರಣ:ಚಾಮರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 2,20,337 ಮತದಾರರನ್ನು ಹೊಂದಿದೆ. ಪುರುಷ ಮತದಾರರ ಸಂಖ್ಯೆ 1,13,340. ಮಹಿಳಾ ಮತದಾರರು ಒಟ್ಟು 1,06,963 ಇದ್ದಾರೆ. ಮಧ್ಯಮ ವರ್ಗದ ಜನರೇ ನೆಲೆಸಿರುವ ಕ್ಷೇತ್ರದಲ್ಲಿ ಸಂಚಾರ, ತ್ಯಾಜ್ಯ ವಿಲೇವಾರಿ, ರಸ್ತೆ ವಿಸ್ತರಣೆಯಂತಹ ಸಮಸ್ಯೆಗಳಿವೆ. ಕಿರಿದಾದ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ ಎಂಬುದು ಸ್ಥಳೀಯರ ಅಸಮಾಧಾನ. ಕ್ಷೇತ್ರದಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ ಆಗಿಲ್ಲ ಎಂಬ ದೂರಿದೆ. ಸುಮಾರು 30ಕ್ಕೂ ಹೆಚ್ಚು ಕೊಳಗೇರಿಗಳನ್ನು ಹೊಂದಿದ್ದು, ಅವರ ಮತಗಳೇ ನಿರ್ಣಾಯಕವಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿನ ಕೊಳಗೇರಿ ಎಲ್ಲಾ ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ.
ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಮತದಾರರಿದ್ದಾರೆ. ಇದರ ನಂತರದ ಸ್ಥಾನ ಎಸ್ಸಿ ಹಾಗೂ ಎಸ್ಟಿ ಸಮುದಾಯದ್ದು. ಸುಮಾರು 65,000 ಎಸ್ಸಿ, ಎಸ್ಟಿ ಮತದಾರರಿದ್ದಾರೆ. 35,000-40,000ದಷ್ಟು ಒಬಿಸಿ ಮತಗಳಿವೆ. ಕ್ರೈಸ್ತರು 12,000, ಒಕ್ಕಲಿಗರು 10,000, ಕುರುಬರು 10,000, ಬ್ರಾಹ್ಮಣರ ಮತ ಸುಮಾರು 7,000-8,000 ಇದೆ.
2018 ಚುನಾವಣೆಯ ಫಲಿತಾಂಶ:ಕಳೆದ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಖಾನ್ 65,339 ಮತಗಳನ್ನು ಗಳಿಸಿ ಭರ್ಜರಿ ಜಯಭೇರಿ ಬಾರಿಸಿದ್ದರು. ಅಂದಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಲಕ್ಷ್ಮೀನಾರಾಯಣ್ 32,202 ಮತಗಳಿಸಿದ್ದರೆ, ಜೆಡಿಎಸ್ ಅಭ್ಯರ್ಥಿಯಾಗಿದ್ದ ಆಲ್ತಾಫ್ ಖಾನ್ 19,393 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಜಮೀರ್ 33,137 ಅಂತರದಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಶೇ.54 ಮತ ಪ್ರಮಾಣ ಗಳಿಸಿದ್ದರೆ, ಬಿಜೆಪಿ ಶೇ. 27 ಮತ ಗಳಿಸಿತ್ತು. ಜೆಡಿಎಸ್ ಮತಗಳಿಕೆ ಪ್ರಮಾಣ ಶೇ.16 ರಷ್ಟಿತ್ತು.
ಸ್ಥಳೀಯರು ಪ್ರತಿಕ್ರಿಯೆಗಳು: "ಬೆಲೆ ಏರಿಕೆ, ಗ್ಯಾಸ ದರ ಹೆಚ್ಚಿರುವುದರಿಂದ ಜೀವನ ಸಾಗಿಸುವುದು ಕಷ್ಟ ಸಾಧ್ಯವಾಗುತ್ತಿದೆ. ಮಧ್ಯಮ ವರ್ಗದವರು ಜೀವನ ಮಾಡುವುದೇ ಸಮಸ್ಯೆ ಆಗಿದೆ. ಇಲ್ಲಿನ ಶಾಸಕರು ಎಲ್ಲರ ಕೈಗೂ ಸಿಗುತ್ತಾರೆ. ಪಕ್ಷ ಬೇಧ ಮಾಡದೇ ಸಹಾಯ ಮಾಡುತ್ತಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಬಿಜೆಪಿ ಸರ್ಕಾರ ಬರಬಾರದು. ಕಾಂಗ್ರೆಸ್ ಸರ್ಕಾರ ಬರಬೇಕು"- ಸ್ಥಳೀಯ ನಿವಾಸಿ ಗಣೇಶ್.
"ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದೆ. ಕೊಳವೆ ಬಾವಿಯಲ್ಲಿ ನೀರಿಲ್ಲ. ಟ್ರಾಫಿಕ್ ಸಮಸ್ಯೆ ಜಾಸ್ತಿ ಇದೆ. ಇವೆಲ್ಲ ನಿವಾರಣೆಗೆ ಜೆಡಿಎಸ್ ಸರ್ಕಾರ ಬರಬೇಕು. ಪಂಚರತ್ನ ಯೋಜನೆ ತರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಬಾರಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ"- ಪ್ರಭು ಸ್ಥಳೀಯ ನಿವಾಸಿ
ಇದನ್ನೂ ಓದಿ:ಚಾಮರಾಜಪೇಟೆಯಲ್ಲಿ ಕಮಲ ಅರಳಲಿದೆ: ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ವಿಶ್ವಾಸ