ಬೆಂಗಳೂರು: ಕರ್ನಾಟಕ ರಾಜ್ಯದ ಪಾಲಿಗೆ ಇಂದು ಐತಿಹಾಸಿಕ ದಿನ. ದೇವರು ನಮಗೆ ಎರಡು ಆಯ್ಕೆಗಳನ್ನು ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ಅದೇ ರೀತಿ ದೇವರಾಜ ಅರಸು ಅವರು 50 ವರ್ಷಗಳ ಹಿಂದೆ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂಬ ಹೆಸರನ್ನು ಕೊಟ್ಟಿದ್ದಾರೆ. ಅವರನ್ನು ಸ್ಮರಿಸಿ ಇಂದು ಈ ಕಾರ್ಯಕ್ರಮದ ಆಚರಣೆ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರನ್ನು ಇಟ್ಟು ಇಂದಿಗೆ 50 ವರ್ಷ ತುಂಬಿದೆ. ಈ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಹಮ್ಮಿಕೊಂಡಿದ್ದ 'ಕರ್ನಾಟಕ 50ರ ಸಂಭ್ರಮದ ಲಾಂಛನ' ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮ್ಮ ಕೊಟ್ಟಿರುವುದು ಜನ್ಮ. ದೇವರು ಕೊಟ್ಟಿರುವುದು ಬುದ್ಧಿ, ಗುರುಗಳು ಕೊಟ್ಟಿರುವುದು ವಿದ್ಯೆ, ಯಾರು ಕೊಡದೇ ನಮಗೆ ಸಿಕ್ಕಿರುವುದು ಕನ್ನಡ ನಾಡು. ಈ ನಾಡಿನಲ್ಲಿ ನಾವು ಉಸಿರಾಡುತ್ತಿದ್ದೇವೆ ಎಂದು ಡಿಸಿಎಂ ಹೇಳಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ’ ಎಂದು ಹೇಳಿದ್ದಾರೆ. ಇಂದು ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದವರು ಕನ್ನಡದವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರಕ್ಕೆ, ಸಚಿವ ಶಿವರಾಜ ತಂಗಡಗಿ ಅವರ ನೇತತ್ವದಲ್ಲಿ ಈ ಸಂಭ್ರಮಾಚರಣೆ ಮಾಡುವ ಅವಕಾಶ ಸಿಕ್ಕಿರುವುದೇ ನಮ್ಮ ಭಾಗ್ಯ ಎಂದು ಹೇಳಿದರು. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು. ಕನ್ನಡಕ್ಕಾಗಿ ಕೊರಳೆತ್ತು ಪಾಂಚಜನ್ಯ ಮೊಳಗುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತಿದರೆ, ಅದೇ ಗೋವರ್ದನ ಗಿರಿಯಾಗುತ್ತದೆ ಎಂದು ವಿಶ್ವಮಾನವ ಕುವೆಂಪು ಅವರು ನಮಗೆ ಸಂದೇಶ ನೀಡಿದ್ದಾರೆ ಎಂದರು.