ಬೆಂಗಳೂರು: ಕಾಂತರಾಜ್ ವರದಿಯನ್ನು ಅನುಮೋದಿಸಲು ಸಾಮಾಜಿಕ ನ್ಯಾಯದ ಬಗ್ಗೆ ಇಚ್ಛೆಯುಳ್ಳ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲವಾಗಿ ನಿಲ್ಲಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ದಲಿತ ಅಲ್ಪಸಂಖ್ಯಾತರ ಸಂಘ ಆಗ್ರಹಿಸಿತು.
ಈ ಕುರಿತು ಗುರುವಾರ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ದಲಿತ ಅಲ್ಪಸಂಖ್ಯಾತರ ಸಂಘದ ಅಧ್ಯಕ್ಷ ಉದಯ ಶಂಕರ್, "ಜಾತಿಗಳು, ಗಣತಿ ಮೊದಲು ಜಾರಿಗೆ ತಂದವರು ಬ್ರಿಟಿಷರು. 1872, 1874ರಲ್ಲಿ ಅಂದಿನ ಮೈಸೂರು ಸಂಸ್ಥಾನದ ರಾಜರು ವಿಶೇಷವಾಗಿ ನಾಲ್ಮಡಿ ಕೃಷ್ಣರಾಜ ಒಡೆಯರ್, ತದನಂತರ ನಮ್ಮ ದೇಶದ ಸಂವಿಧಾನ, ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ಸಾಮಾಜಿಕ ನ್ಯಾಯ ಆರ್ಥಿಕ ನ್ಯಾಯ, ರಾಜಕೀಯ ನ್ಯಾಯ ಇದು ನಮ್ಮ ಸಂವಿಧಾನದಲ್ಲಿದೆ. ಪ್ರಪಂಚಕ್ಕೆ ಮೊಟ್ಟ ಮೊದಲಿಗೆ ಕರ್ನಾಟಕದಲ್ಲಿ ಜಾರಿಯಾಗಿರುವ ಪರಿಕಲ್ಪನೆ ನಮ್ಮದಾಗಿದೆ" ಎಂದು ಹೇಳಿದರು.
"ಪ್ರತಿಯೊಂದು ಮತ, ಪ್ರತಿ ಜಾತಿ ಪ್ರತಿ ಕೋಮಿನ ಜನಗಣತಿಯಾದರೆ, ಆಗ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಅರ್ಥವಿದೆ. ಆದರೆ ಪ್ರಬಲ ಕೋಮಿನ ಮುಖಂಡರು ಸಿದ್ದರಾಮಯ್ಯ ಸರಕಾರಕ್ಕೆ ಬೇಡವೆಂದು ಹೇಳುತ್ತಿವೆ. ಏಕೆಂದರೆ ಎಲ್ಲರಿಗೂ ಸಮಾನ ಅವಕಾಶಗಳು ಒದಗುತ್ತವೆ. ನಮಗೆ ಕಡಿಮೆಯಾಗುತ್ತವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ" ಎಂದು ಕಿಡಿಕಾರಿದರು.
"ದಿವಂಗತ ದೇವರಾಜ್ ಅರಸು ಅವರ ಹಾವನೂರ್ ಕಮಿಷನ್, ಮುಂದುವರೆದ ದಿನಗಳಲ್ಲಿ ಚಿನ್ನಪ್ಪ ರೆಡ್ಡಿ ಕಮಿಷನ್ ವರದಿಗಳನ್ನು ವಿಧಾನಸೌಧದಲ್ಲಿ ಸುಟ್ಟಿರುವುದು ತಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಸ್ವತಂತ್ರ ಬಂದು 75 ವರ್ಷಗಳು ಕಳೆದು ಹೋಗಿದೆ. ಈಗಲೂ ವಂಚಿತರಿಗೆ ಅವಕಾಶಗಳು ಬೇಡವೇ" ಎಂದು ಪ್ರಶ್ನಿಸಿದರು.