ಬೆಂಗಳೂರು :ಸ್ಥಳಾಂತರದ ಅನುಮತಿಯಿಲ್ಲದೆ ಅನಧಿಕೃತವಾಗಿ ನಡೆಸುತ್ತಿರುವ ಶ್ವೇತಾ ಪಬ್ಲಿಕ್ ಶಾಲೆ (ಸೇಂಟ್ ಮಿರಾಸ್ ಪಬ್ಲಿಕ್ ಸ್ಕೂಲ್)ಯ ಮಾನ್ಯತೆ ರದ್ದುಪಡಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಶಿಕ್ಷಣ ಸಚಿವರಿಗೆ ಶಿಫಾರಸು ಮಾಡಿದ್ದಾರೆ.
ಬೆಂಗಳೂರಿನ ಚೋಳೂರು ಪಾಳ್ಯದಲ್ಲಿನ ಶ್ವೇತಾ ಪಬ್ಲಿಕ್ ಶಾಲೆಯು ಅನುದಾನ ರಹಿತ ಆಂಗ್ಲಮಾಧ್ಯಮ ಶಾಲೆ. ಶಿಕ್ಷಣ ಇಲಾಖೆಯ ನಿಯಮಾವಳಿಗೆ ವಿರುದ್ಧವಾಗಿ ಬೇರೊಂದು ಸ್ಥಳದಲ್ಲಿ ಅನುಮತಿಯಿಲ್ಲದೆ ಅನಧಿಕೃತ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ. ಈ ಶಾಲೆ ವಿರುದ್ಧ ಕ್ರಮಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪತ್ರ ಬರೆದಿತ್ತು.
ಒಂದನೇ ಮಹಡಿಯಲ್ಲಿ ಶಾಲೆ ನಡೆಯುತ್ತಿದೆ. ನೆಲಮಹಡಿಯಲ್ಲಿ ಪ್ರಿಂಟಿಂಗ್ ಪ್ರೆಸ್, 2-3ನೇ ಮಹಡಿಯಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ನಡೆಯುತ್ತಿದೆ. ಪ್ರಸ್ತುತ ಶ್ವೇತಾ ಪಬ್ಲಿಕ್ ಶಾಲೆಯು ಅನಧಿಕೃತವಾಗಿ ಶಾಲೆ ನಡೆಸುತ್ತಿರುವ ಕಟ್ಟಡದಲ್ಲಿ ಶೌಚಾಲಯ, ಕುಡಿಯುವ ನೀರು, ಕೊಠಡಿಗಳಿಗೆ ಗಾಳಿ-ಬೆಳಕಿನ ಕೊರತೆ ಇತ್ಯಾದಿ ಸಮಸ್ಯೆಗಳಿವೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಅಲ್ಲದೆ ಈ ಶಾಲೆಯನ್ನು ಸ್ಥಳಾಂತರಿಸಲು ಉದ್ದೇಶಿಸಿರುವ ಕಟ್ಟಡ, ಆಡಳಿತ ಮಂಡಳಿ ಸಂಸ್ಥೆಯ ಹೆಸರಿನಲ್ಲಿ ಇಲ್ಲದಿರುವ ಕಾರಣ ಶಾಲೆ ಸ್ಥಳಾಂತರಕ್ಕೆ ಅವಕಾಶವಿಲ್ಲ.
ಕಳೆದ 2 ವರ್ಷಗಳಿಂದ ಅನಧಿಕೃತವಾಗಿ ಶಾಲೆ ನಡೆಸುತ್ತಿರುವ ಶ್ರೀಶ್ವೇತಾ ಪಬ್ಲಿಕ್ ಶಾಲೆಯ ಮಾನ್ಯತೆ ರದ್ದುಪಡಿಸಿ ಕ್ರಮ ಜರುಗಿಸುವಂತೆ ದಾಖಲೆಗಳೊಂದಿಗೆ ಉಲ್ಲೇಖಿಸಿ ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಪ್ರಾಧಿಕಾರದ ಅಧ್ಯಕ್ಷರು ಪ್ರಸ್ತಾಪಿಸಿದ್ದಾರೆ.
ಅಲ್ಲದೆ ಶಾಲೆಯ ಸ್ಥಳಾಂತರದ ಬಗ್ಗೆ ಪರಿಶೀಲಿಸಿ ವರದಿ ನೀಡಲು ತ್ರಿಸದಸ್ಯ ಸಮಿತಿ ರಚಿಸುವಂತೆಯೂ ತಿಳಿಸಲಾಗಿತ್ತು. ಆದರೆ, ಸದರಿ ಸಮಿತಿಯು ಶ್ವೇತಾ ಪಬ್ಲಿಕ್ ಶಾಲೆಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಕ್ಷೇಪಣೆಗೆ ಸಂಬಂಧಿಸುವುದಿಲ್ಲ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ. ಹಾಗಿದ್ದರೆ ತ್ರಿಸದಸ್ಯ ಸಮಿತಿಯಲ್ಲಿದ್ದ ಸದಸ್ಯರು ಯಾರು? ಕನ್ನಡ ಅಭಿವೃಧ್ದಿ ಪ್ರಾಧಿಕಾರದ ವ್ಯಾಪ್ತಿ ಪ್ರಶ್ನಿಸುವ ಹಕ್ಕನ್ನು ಆ ಸಮಿತಿಗೆ ಶಿಕ್ಷಣ ಇಲಾಖೆ ನೀಡಿದೆಯೇ? ಎಂದು ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರಿಗೆ ಬರೆಯಲಾಗಿರುವ ಪತ್ರದಲ್ಲಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸದರಿ ಪ್ರಕರಣ ಸಂಬಂಧ ಚರ್ಚೆ ನಡೆಸಲಾಗಿದೆ. ಈ ಕುರಿತು ಒಂದು ವಾರದೊಳಗೆ ಸಕ್ಷಮ ಪ್ರಾಧಿಕಾರಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಾಧಿಕಾರಕ್ಕೆ ವರದಿ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಆದರೂ, ಯಾವುದೇ ವರದಿ ನೀಡದೆ ಕನ್ನಡ ವಿರೋಧಿ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ, ಖುದ್ದು ಪ್ರಾಧಿಕಾರದ ಅಧ್ಯಕ್ಷರೇ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ 5-6 ಬಾರಿ ದೂರವಾಣಿ ಕರೆ ಮಾಡಿದ್ರೂ ಸೂಕ್ತ ರೀತಿ ಉತ್ತರಿಸದಿರುವುದರ ಹಿಂದೆ ಖಾಸಗಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳ ದೊಡ್ಡ ಲಾಬಿ ಇರುವ ಬಗ್ಗೆ ಪ್ರಾಧಿಕಾರದ ಅಧ್ಯಕ್ಷರು ಅನುಮಾನ ವ್ಯಕ್ತಪಡಿಸಿದ್ದಾರೆ.