ಬೆಂಗಳೂರು: ತೆಲಂಗಾಣದಿಂದ ಕರ್ನಾಟಕ ಹೈಕೋರ್ಟ್ಗೆ ವರ್ಗಾವಣೆಗೊಂಡ ನ್ಯಾಯಮೂರ್ತಿ ಲಲಿತಾ ಕನೆಗಂಟಿ ಅವರಿಗೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಶುಕ್ರವಾರ ಪ್ರಮಾಣ ವಚನ ಬೋಧಿಸಿದರು. ಬಳಿಕ ನ್ಯಾಯಮೂರ್ತಿ ಲಲಿತಾ ಕನೆಗಂಟಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಸಂಪ್ರದಾಯ ಉಳಿಸಿಕೊಂಡು ಜಾಗತೀಕರಣ ಮಿಶ್ರಣಗೊಳ್ಳುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ. ಸಂಸ್ಕೃತಿಯ ಪರಂಪರೆ ಮತ್ತು ಪ್ರಕೃತಿಯ ವೈವಿಧ್ಯತೆ ನಾಡಾಗಿದೆ ಎಂದು ಹೇಳಿದರು.
ಅಲ್ಲದೇ ರಾಜ್ಯದ ಸ್ವಾತಂತ್ರ್ಯಹೋರಾಟ ಮತ್ತು ಸಾಮಾಜಿಕ, ರಾಜಕೀಯವಾಗಿ ಮಹಿಳೆಯರು ಪಾಲ್ಗೊಳ್ಳುತ್ತಿದ್ದು, ರಾಜ್ಯದ ಇತಿಹಾಸ ಅತ್ಯಂತ ಶ್ರೀಮಂತವಾಗಿದೆ. ಕರ್ನಾಟಕ ಹೈಕೋರ್ಟ್ನಿಂದ ಸುಪ್ರೀಂಕೋರ್ಟ್ ವರ್ಗಾವಣೆಯಾಗಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಸುಪ್ರೀಂಕೋರ್ಟ್ನ ಮೊದಲ ಮುಖ್ಯ ನ್ಯಾಯಮೂರ್ತಿಯಾಗುವರು. ಕರ್ನಾಟಕದ ಹೈಕೋರ್ಟ್ ಇಂಥ ಅದ್ಭುತ ಸಂಸ್ಥೆಯಲ್ಲಿ ನಾನೂ ಭಾಗವಾಗಿರುವುದು ನನಗೆ ಅತ್ಯಂತ ಸಂತಸ ನೀಡಲಿದೆ ಎಂದು ತಿಳಿಸಿದರು.
ಇದಾದ ಬಳಿಕ ವಕೀಲರ ಸಂಘದಿಂದ ನೀಡಿದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬೆಂಗಳೂರಿನ ವಕೀಲರು ಕಾನೂನಿನಲ್ಲಿ ಅತ್ಯಂತ ಚಾಣಾಕ್ಷ ಮತ್ತು ಜ್ಞಾನದಲ್ಲಿ ಹೆಸರುವಾಸಿಯಾಗಿದ್ದಾರೆ. ಇಂತಹ ಸಹೋದ್ಯೋಗಿಗಳ ನಡುವೆ ತಮ್ಮ ಜ್ಞಾನವನ್ನು ಹೆಚ್ಚಳ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಅಲ್ಲದೇ, ಬಾರ್ ಕೌನ್ಸಿಲ್ ಸದಸ್ಯರ ನೆರವಿನೊಂದಿಗೆ ಸಮರ್ಥವಾಗಿ ಕಾರ್ಯನಿರ್ವಸಲು ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಾಂತಿ ಮತ್ತು ಸುವ್ಯವಸ್ಥೆ ಇಲ್ಲದಿದ್ದಲ್ಲಿ ಸಮಾಜ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ನ್ಯಾಯಾಲಯದ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಬಾರ್ ಕೌನ್ಸಿಲ್ ಅಧ್ಯಕ್ಷ ಎಚ್.ಎಲ್.ವಿಶಾಲ್ ರಘು ಮತ್ತಿತರರಿದ್ದರು.
ನ್ಯಾಯಮೂರ್ತಿ ಲಲಿತಾ ಕನೆಗಂಟಿ ಸೇವೆ:ನ್ಯಾಯಮೂರ್ತಿ ಕನೆಗಂಟಿ ಅವರು 1994ರಲ್ಲಿ ವಕೀಲರಾಗಿ ಸನ್ನದು ಪಡೆದುಕೊಂಡು, ಕೋರ್ಟ್ನ ಎಲ್ಲ ವಿಭಾಗಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಕೃಷಿ ಮಾರುಕಟ್ಟೆ ಸಮಿತಿ, ಇಂಗ್ಲಿಷ್ ಮತ್ತು ಫಾರಿನ್ ಲಾಂಗ್ವೇಜಸ್ ವಿಶ್ವವಿದ್ಯಾಲಯ, ಮುಜರಾಯಿ, ತಿರುಮಲ ತಿರುಪತಿ ದೇವಸ್ಥಾನ, ವೆಂಕಟೇಶ್ವರ ವೇದಿಕ್ ವಿಶ್ವವಿದ್ಯಾಲಯ, ವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ತಿರುಪತಿಯ ಸಂಸ್ಕೃತಿ ವಿಶ್ವವಿದ್ಯಾಲಯದ ಪರವಾಗಿ ವಾದ ಮಂಡಿಸಿದ್ದರು. 2020ರ ಮೇ 2 ರಂದು ಆಂಧ್ರ ಪ್ರದೇಶದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಇದಾದ ಬಳಿಕ 2021ರ ನವೆಂಬರ್ 15 ರಂದು ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡಿದ್ದರು.
ಉಸ್ಮಾನಿಯಾ ವಿವಿಯಿಂದ ಕಾನೂನು ಪದವಿ:ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಬಾಪಟ್ಲಾ ಮಂಡಲದ ಚೆರುವು ಜಮ್ಮುಪಾಲೆಂ ಗ್ರಾಮದ ದಿ, ಕೊಮ್ಮಿನೇನಿ ಅಂಕಮ್ಮ ಚೌಧರಿ ದಂಪತಿ ಪುತ್ರಿಯಾಗಿ ಜನಿಸಿದರು. ಹೈದರಾಬಾದ್‌ನ ನಾಂಪಲ್ಲಿ ಸರೋಜಿನಿ ನಾಯ್ಡು ವನಿತಾ ಮಹಾವಿದ್ಯಾಲಯದಿಂದ ಕಲೆಯಲ್ಲಿ ಪದವಿ, ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಪಡಲ ರಾಮಿ ರೆಡ್ಡಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. 1994 ರಂದು ಆಂಧ್ರಪ್ರದೇಶದ ಸಂಯೋಜಿತ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿ ಸೇವೆಗೆ ಸೇರಿಕೊಂಡಿದ್ದರು.
ಇದನ್ನೂಓದಿ:ಕಾನೂನು ಸಲಹೆ ಪಡೆದು ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಆಯೋಗ ತೀರ್ಮಾನ: ಸಿಎಂ ಭರವಸೆ