ಕರ್ನಾಟಕ

karnataka

ETV Bharat / state

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಡಿ ವಿ ಶೈಲೇಂದ್ರ ಕುಮಾರ್ ವಿಧಿವಶ - etv bharat kannada

ಕರ್ನಾಟಕ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಡಿ.ವಿ ಶೈಲೇಂದ್ರಕುಮಾರ್(72) ಶುಕ್ರವಾರ ವಿಧಿವಶ - ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿದ ಅಂತ್ಯಕ್ರಿಯೆ

Justice D V Shailendra Kumar passed away
ಬೆಂಗಳೂರು:ನ್ಯಾಯಮೂರ್ತಿ ಡಿ ವಿ ಶೈಲೇಂದ್ರ ಕುಮಾರ್ ವಿಧಿವಶ

By

Published : Mar 3, 2023, 6:57 PM IST

ಬೆಂಗಳೂರು:ಕರ್ನಾಟಕ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಡಿ.ವಿ ಶೈಲೇಂದ್ರಕುಮಾರ್(72) ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಗ್ಗೆ 8 ಗಂಟೆ ಸಮಯದಲ್ಲಿ ರಕ್ತದೊತ್ತಡ ಹೆಚ್ಚಾಗಿ ಮುಖದಲ್ಲಿ ಬೆರವು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗಿತ್ತು. ತಕ್ಷಣ ಅವರನ್ನು ಆಂಬ್ಯುಲೆನ್ಸ್​ನಲ್ಲಿ ಮಲ್ಲಿಗೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಇಹಲೋಕ ತ್ಯಜಿಸಿದರು ಎಂದು ಅವರ ಪುತ್ರ ಅನೂಪ್ ಈಟಿವಿ ಭಾರತ್‌ಗೆ ತಿಳಿಸಿದರು. ಸಂಜೆ 4 ಗಂಟೆಯವರೆಗೂ ವಿಲ್ಸ್‌ನ ಗಾರ್ಡ್‌ನ್ ಬಳಿಯ ಮನೆಯಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಿಟ್ಟಿದ್ದು, ಬಳಿಕ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದರು.

ಪ್ರಾಮಾಣಿಕತೆ ಹೆಸರಾಗಿದ್ದ ಡಿ ವಿ ಶೈಲೇಂದ್ರಕುಮಾರ್:ಪಾರದರ್ಶಕತೆಗೆ ಹೆಸರಾಗಿದ್ದ ಡಿ.ವಿ ಶೈಲೇಂದ್ರಕುಮಾರ್ ಅವರು ಅಕ್ರಮ ಭೂ ಕಬಳಿಕೆ ಆರೋಪಕ್ಕೆ ಗುರಿಯಾಗಿದ್ದ ಕರ್ನಾಟಕ ಹೈಕೋರ್ಟ್​ನ ಅಂದಿನ ಮುಖ್ಯ ನ್ಯಾಯಮೂರ್ತಿ ಪಿ ಡಿ ದಿನಕರನ್ ಅವರ ವಿರುದ್ಧ ಸೆಡ್ಡು ಹೊಡೆದು ಪೂರ್ಣ ನ್ಯಾಯಾಲಯ ಸಭೆಯನ್ನು ಕರೆದಿದ್ದರು. ಇದಕ್ಕೆ ನ್ಯಾಯಮೂರ್ತಿಗಳು ಬೆಂಬಲ ನೀಡದಿದ್ದಾಗ ಪ್ರತ್ಯೇಕವಾಗಿ ತಾವು ರೂಪಿಸಿದ್ದ ವೆಬ್ಸೈಟ್​ನಲ್ಲಿ ಮಾಹಿತಿ ಬಹಿರಂಗಪಡಿಸಿದ್ದರು.

ತಮ್ಮ ಆಸ್ತಿ ವಿವರವನ್ನು ಹೈಕೋರ್ಟ್ ವೆಬ್ಸೈಟ್​ನಲ್ಲಿ ಪ್ರಕಟಿಸಲು ರಿಜಿಸ್ಟ್ರಾರ್ ಜನರಲ್ ಅವರಿಗೆ ಅನುಮತಿ ಕೋರಿದ್ದರು. ಇದಕ್ಕೆ ಅನುಮತಿ ಸಿಗದಿದ್ದಾಗ ತಮ್ಮದೇ ವೈಯಕ್ತಿಕ ವೆಬ್ಸೈಟ್​ ರೂಪಿಸಿ, ತಮ್ಮ ಮತ್ತು ಕುಟುಂಬದ ಆಸ್ತಿಯ ವಿವರವನ್ನು ಬಹಿರಂಗಪಡಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದರು. ಇದು ರಾಷ್ಟ್ರಮಟ್ಟದ ನ್ಯಾಯಾಂಗ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೇ ಅಂಶದ ಆಧಾರದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಸೇರಿದಂತೆ ಎಲ್ಲಾ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸಲು ಕಾರಣರಾಗಿದ್ದರು. ಇದೇ ಹಾದಿಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಪಾಲಿಸಿದ್ದರು.

ಸೇವಾವಧಿ 1951ರ ಸೆಪ್ಟೆಂಬರ್ 5ರಂದು ಜನಿಸಿದ್ದ ನ್ಯಾ.ಡಿ.ವಿ ಶೈಲೇಂದ್ರಕುಮಾರ್ ಅವರು 1976ರ ಜೂನ್ 30ರಂದು ವಕೀಲರಾಗಿ ನೋಂದಾಯಿಸಿಕೊಂಡಿದ್ದು, ಮದ್ರಾಸ್ ಮತ್ತು ಕರ್ನಾಟಕ ಹೈಕೋರ್ಟ್​ಗಳಲ್ಲಿ ಒಟ್ಟು 14 ವರ್ಷ ಪ್ರಾಕ್ಟೀಸ್ ಮಾಡಿದ್ದರು. ಮದ್ರಾಸ್​ನಲ್ಲಿ ಖ್ಯಾತ ವಕೀಲರಾಗಿದ್ದ ಎಸ್ ಪರಾಶರನ್ ಅವರ ಜೂನಿಯರ್ ಆಗಿ ಕೆಲಸ ಆರಂಭಿಸಿದ್ದರು. ಕರ್ನಾಟಕದಲ್ಲಿ ನ್ಯಾ. ರಾಜಶೇಖರ ಮೂರ್ತಿ ಅವರ ಅಡಿ ಪ್ರಾಕ್ಟೀಸ್ ಮಾಡಿದ್ದರು. ಕೇಂದ್ರ ಸರ್ಕಾರದ ವಕೀಲರಾಗಿಯೂ ಕೆಲಸ ಮಾಡಿದ್ದ ಡಿವಿಎಸ್ ಅವರು ಸಾಂವಿಧಾನಿಕ, ಸಿವಿಲ್, ಕ್ರಿಮಿನಲ್ ವಿಷಯಗಳಲ್ಲಿ ನೈಪುಣ್ಯತೆ ಸಾಧಿಸಿದ್ದರು. ಇದಕ್ಕೂ ಮುನ್ನ, ಎಸ್ಜೆಆರ್ಸಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು.

13 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿ ಸೇವೆ:2000ದ ಡಿಸೆಂಬರ್ 11ರಂದು ಕರ್ನಾಟಕ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, 2002ರ ಏಪ್ರಿಲ್ 18ರಂದು ಕಾಯಂಗೊಂಡಿದ್ದರು. 2013ರ ಸೆಪ್ಟೆಂಬರ್​ನಲ್ಲಿ ನಿವೃತ್ತರಾಗಿದ್ದ ಡಿವಿಎಸ್ ಅವರು ಒಟ್ಟು 13 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ:ಶುಚಿತ್ವದ ಕೆಲಸವೂ ದೀರ್ಘಕಾಲಿಕವಾದದ್ದು, ಇಂಥ ಕಾರ್ಮಿಕರನ್ನು ಉದ್ಯೋಗಿಗಳೆಂದು ಪರಿಗಣಿಸಿ: ಹೈರ್ಕೋರ್ಟ್

ABOUT THE AUTHOR

...view details