ಕರ್ನಾಟಕ

karnataka

ETV Bharat / state

35 ಕ್ಷೇತ್ರಗಳಲ್ಲಿ ಜೆಡಿಎಸ್‍ ಪಂಚರತ್ನ ರಥಯಾತ್ರೆ: ಎಲ್ಲೆಲ್ಲಿ ಸಾಗಲಿದೆ ಗೊತ್ತೇ? - JDS Pancharatna Rath Yatra in 35 constituencies

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ರಥಯಾತ್ರೆ 35 ದಿನಗಳ ಕಾಲ 6 ಜಿಲ್ಲೆಯ 35 ಕ್ಷೇತ್ರದಲ್ಲಿ ಸಂಚರಿಸಲಿದೆ. ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ.

JDS Pancharatna Rath Yatra in 35 constituencies
35 ಕ್ಷೇತ್ರಗಳಲ್ಲಿ ಜೆಡಿಎಸ್‍ ಪಂಚರತ್ನ ರಥಯಾತ್ರೆ

By

Published : Oct 25, 2022, 10:51 PM IST

ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟಿಸುವ ಹಿನ್ನೆಲೆಯಲ್ಲಿ ಜೆಡಿಎಸ್ ನವೆಂಬರ್ 1 ರಿಂದ ಪಂಚರತ್ನ ರಥಯಾತ್ರೆ ಸಿದ್ದತೆ ಕೈಗೊಂಡಿದ್ದು, ಮೊದಲ ಹಂತದಲ್ಲಿ 35 ಕ್ಷೇತ್ರಗಳಲ್ಲಿ ನಡೆಯಲಿದೆ. ಕೋಲಾರ ಜಿಲ್ಲೆಯಿಂದ ಆರಂಭವಾಗುವ ಯಾತ್ರೆಯು ರಾಮನಗರದಲ್ಲಿ ಮುಕ್ತಾಯವಾಗಲಿದೆ.

ಮೊದಲ ಹಂತದಲ್ಲಿ ಸಂಚರಿಸುವ ರಥಯಾತ್ರೆ:ನವೆಂಬರ್ 1 ರಿಂದ 5 ರವರೆಗೆ ಕೋಲಾರ ಜಿಲ್ಲೆ, ನ.6 ರಿಂದ 10 ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆ, ನ.11 ರಿಂದ 13 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನ.14 ರಿಂದ 23 ರವರೆಗೆ ತುಮಕೂರು ಜಿಲ್ಲೆ, ನ.24 ರಿಂದ 30 ರವರೆಗೆ ಹಾಸನ ಜಿಲ್ಲೆ, ಡಿಸೆಂಬರ್ 1 ರಂದು ಮತ್ತೆ ತುಮಕೂರು ಜಿಲ್ಲೆ ಮತ್ತು ಡಿ.2 ರಿಂದ 5 ರವರೆಗೆ ರಾಮನಗರ ಜಿಲ್ಲೆಯಲ್ಲಿ ರಥಯಾತ್ರೆ ತೆರಳಲಿದೆ.

ನವೆಂಬರ್ 1 ರಿಂದ 5 ರವರೆಗೆ ಕೋಲಾರ ಜಿಲ್ಲೆಯ 5 ಕ್ಷೇತ್ರದಲ್ಲಿ ಯಾತ್ರೆ ಕೈಗೊಳ್ಳಲಾಗುತ್ತದೆ. ನವೆಂಬರ್ 1ರಂದು ಕೋಲಾರದ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕುರುಡುಮಲೆಯಿಂದ ಪಂಚರತ್ನ ರಥಯಾತ್ರೆ ಆರಂಭವಾಗಲಿದೆ. ಬಂಗಾರಪೇಟೆ, ಮಾಲೂರು, ಕೋಲಾರ, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ಸಂಚರಿಸಲಿದೆ. ನ.6 ರಿಂದ 10 ರವೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ 5 ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದೆ.

ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ನ.11 ರಿಂದ 13 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಯಾತ್ರೆ ಸಂಚರಿಸಲಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದೆ.

ನ.14 ರಿಂದ 23 ರವರೆಗೆ ತುಮಕೂರು ಜಿಲ್ಲೆಯ 10 ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ. ತುಮಕೂರು ಗ್ರಾಮಾಂತರ, ತುಮಕೂರು ನಗರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ನ.24 ರಿಂದ 30 ರವರೆಗೆ ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಯಾತ್ರೆಯು ತೆರಳಲಿದೆ. ಬೇಲೂರು, ಅರಸೀಕೆರೆ, ಹಾಸನ, ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ ಕ್ಷೇತ್ರದಲ್ಲಿ ನಡೆಯಲಿದೆ. ಡಿ.1 ರಂದು ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದಲ್ಲಿ ಯಾತ್ರೆ ಜರುಗಲಿದೆ. ಡಿ.2 ರಿಂದ 5 ರವರೆಗೆ ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲಿ ಯಾತ್ರೆಯು ಸಂಚರಿಸಲಿದೆ. ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ.

ಯಾತ್ರೆಯ ವೇಳೆಯಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಈ ಬಾರಿ ಅಭ್ಯರ್ಥಿಗಳ ಆಯ್ಕೆಯನ್ನು ನೆಪಮಾತ್ರಕ್ಕೆ ಮಾಡುವುದು ಬೇಡ ಎಂಬ ಲೆಕ್ಕಾಚಾರವನ್ನು ಜೆಡಿಎಸ್ ಮುಖಂಡರು ಕೈಗೊಂಡಿದ್ದಾರೆ. ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.

ರಥಯಾತ್ರೆ ವೇಳೆ ಮೊದಲ ಪಟ್ಟಿ ಬಿಡುಗಡೆ?: ಮುಂಬರುವ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪಂಚರತ್ನ ರಥಯಾತ್ರೆ ಸಂದರ್ಭದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ರಥಯಾತ್ರೆ ಸಂದರ್ಭದಲ್ಲೇ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಈಗಾಗಲೇ 126 ಸಂಭವನೀಯ ಅಭ್ಯರ್ಥಿಗಳಿಗೆ ಚುನಾವಣೆ ಸಿದ್ಧತೆ ಕುರಿತಂತೆ ಮೈಸೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಪಕ್ಷದ ವರಿಷ್ಠರು ಮಾರ್ಗದರ್ಶನ ಮಾಡಿದ್ದಾರೆ. ಬಿಡದಿ ಕಾರ್ಯಾಗಾರದಲ್ಲಿ ನೀಡಲಾಗಿದ್ದ ಟಾಸ್ಕ್‌ನ್ನು ಕೆಲವರು ಪೂರ್ಣಗೊಳಿಸಿರಲಿಲ್ಲ. ಅಂಥವರಿಂದ ವಿವರಣೆ ಕೇಳಲಾಗಿದೆ. ಎಲ್ಲ ರೀತಿಯಲ್ಲೂ ಸಮರ್ಥರಾದವರಿಗೆ ಮಾತ್ರ ಕಣಕ್ಕಿಳಿಸಲು ಉದ್ದೇಶಿಸಲಾಗಿದೆ.

ಪಂಚರತ್ನ ರಥ ಯಾತ್ರೆಯ ಸಿದ್ಧತೆ ಕುರಿತಂತೆ ಮಾರ್ಗದರ್ಶನ ಮಾಡಿದ್ದಾರೆ. ನ.1ರಂದು ಆರಂಭವಾಗುವ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಪಕ್ಷದ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಅದಕ್ಕೆ ಅಗತ್ಯವಿರುವ ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತಿದೆ. ಈ ರಥ ಯಾತ್ರೆಯ ನಡುವೆ ವಿಧಾನಸಭೆ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕಾರ್ಯಾಗಾರ ನಡೆಸಿ ಚುನಾವಣೆಯ ತಂತ್ರ ಹಾಗೂ ಸಿದ್ಧತೆ ಬಗ್ಗೆ ಪಕ್ಷದ ವರಿಷ್ಠರು ಸಲಹೆ ಸೂಚನೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ:'ನಾನು ಜೆಡಿಎಸ್ ಬಿಟ್ಟು ಹೋಗಲ್ಲ..': ದೇವೇಗೌಡರೆದುರು ಕಣ್ಣೀರು ಹಾಕಿದ ಜಿಟಿಡಿ

ABOUT THE AUTHOR

...view details