ಬೆಂಗಳೂರು:ಜೆಡಿಎಸ್, ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗುಸುಗುಸು ನಡುವೆಯೇ ಕೆಲ ಪ್ರಮುಖರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುವುದನ್ನು ಮುಂದುವರೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೆಲವರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಹನೂರಿನ ಜೆಡಿಎಸ್ ಶಾಸಕ ಮಂಜುನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಜೆಡಿಎಸ್ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಲು ಸಿದ್ದರಾಮಯ್ಯ ತೆರೆಮರೆಯ ಕಾರ್ಯತಂತ್ರ ರೂಪಿಸಿದ್ದು, ಈ ಭೇಟಿ ಕೂಡ ಇದೇ ಉದ್ದೇಶದಿಂದ ನಡೆದಿರಬಹುದು ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರೊಂದಿಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಜೆಡಿಎಸ್‍ನ ಶಾಸಕರು, ರಾಜಕೀಯ ಆಗು ಹೋಗುಗಳ ಕುರಿತು ಚರ್ಚಿಸಿದ್ದಾರೆ. ಕಾಂಗ್ರೆಸಿಗರು ಹಾಲಿ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವ ಬದಲಾಗಿ ಮಾಜಿ ಶಾಸಕರು, ಪ್ರಭಾವಿಗಳನ್ನು ಕೇಂದ್ರೀಕರಿಸಿದ್ದಾರೆ. ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ಜೆಡಿಎಸ್‍ನಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಅತೃಪ್ತ ಪ್ರಮುಖ ನಾಯಕರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ.
ಈಗಾಗಲೇ ಬಿಬಿಎಂಪಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ನಾಯಕರುಗಳು ಹಂತ ಹಂತವಾಗಿ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದಾರೆ. ಕೆಲವು ಪ್ರಭಾವಿ ನಾಯಕರುಗಳನ್ನು ವರಿಷ್ಠ ನಾಯಕರು ಕೆಪಿಸಿಸಿಯಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡರೆ, ಕೆಳ ಹಂತದ ನಾಯಕರನ್ನು ಜಿಲ್ಲಾ ಮಟ್ಟದಲ್ಲೇ ಸೆಳೆಯಲಾಗುತ್ತಿದೆ.