ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಕಳಪೆ ಪ್ರದರ್ಶನವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. 123 ಸ್ಥಾನದ ಗುರಿ ಇಟ್ಟುಕೊಂಡಿದ್ದ ಜೆಡಿಎಸ್ಗೆ ಈ ಬಾರಿ ದಕ್ಕಿದ್ದು ಕೇವಲ 19 ಸ್ಥಾನ ಮಾತ್ರ. ಇದನ್ನು ದಳಪತಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏನೇ ಆದರೂ ಮತದಾರರ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು.
ಜೆಡಿಎಸ್ ಸೋಲಿನ ಪರಾಮರ್ಶೆ ಮಾಡಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಸದ್ಯದಲ್ಲೇ ಆತ್ಮಾವಲೋಕನ ಸಭೆ ನಡೆಸಲು ನಿರ್ಧರಿಸಲಾಗಿದೆ. ಇಡೀ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆ ನಡೆಸಿ ಜೆಡಿಎಸ್ ಪಕ್ಷ ಸಂಘಟನೆ ಮಾಡುವಲ್ಲಿ ಯಶಸ್ವಿಯಾದರೂ, ಈ ಬಾರಿ ಸೋಲಲು ಕಾರಣಗಳನ್ನು ಹುಡುಕಬೇಕಿರುವುದರಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ನೇತೃತ್ವದಲ್ಲಿ ಆತ್ಮಾವಲೋಕನ ಸಭೆ ನಡೆಸುವ ಮೂಲಕ ಸೋಲಿಗೆ ಕಾರಣ ಹುಡುಕಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಬಾರಿ ಗೆದ್ದ ಶಾಸಕರು ಸಹ ಈ ಚುನಾವಣೆಯಲ್ಲಿ ಸೋಲು ಕಂಡಿರುವುದು ಜೆಡಿಎಸ್ ಗೆ ಮರ್ಮಾಘಾತವಾಗಿದೆ. ಹೀಗಾಗಿ, ಶೀಘ್ರದಲ್ಲೇ ಸಭೆ ಕರೆಯಲು ತೀರ್ಮಾನಿಸಿರುವ ದಳಪತಿಗಳು, ಸೋಲು ಕಂಡಿರುವ ಕ್ಷೇತ್ರವಾರು ಮಾಹಿತಿ ಸಂಗ್ರಹಿಸಲಿದ್ದಾರೆ.
ವಿಶೇಷವಾಗಿ ಹಳೇ ಮೈಸೂರು ಮತ್ತು ಬೆಂಗಳೂರು ಭಾಗದ 11 ಜಿಲ್ಲೆಗಳಲ್ಲಿ ಒಟ್ಟು 89 ಕ್ಷೇತ್ರಗಳ ಪೈಕಿ ಬಿಜೆಪಿ 22, ಕಾಂಗ್ರೆಸ್ 34 ಹಾಗೂ ಜೆಡಿಎಸ್ 31 ಸ್ಥಾನ ಗಳಿಸಿದ್ದವು. ಒಂದು ಕಡೆ ಬಿಎಸ್‌ಪಿ, ಇನ್ನೊಂದು ಕಡೆ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ಈ ಬಾರಿ ಚುನಾವಣೆಯಲ್ಲಿ ಹಳೇ ಮೈಸೂರು ಹಾಗೂ ಬೆಂಗಳೂರು ಭಾಗದಲ್ಲಿ ಕಾಂಗ್ರೆಸ್ 52 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಜೆಡಿಎಸ್ 31ರಿಂದ 14ಕ್ಕೆ ಕುಸಿದಿದೆ. ಬಿಜೆಪಿ ಕಳೆದ ಬಾರಿಗಿಂತ ಒಂದು ಸ್ಥಾನ ಕಡಿಮೆ ಪಡೆದಿದೆ. ಈ ಬಾರಿಯೂ ಸರ್ವೋದಯ ಕರ್ನಾಟಕ ಪಕ್ಷ, ಗೌರಿಬಿದನೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಜೆಡಿಎಸ್ ಪ್ರಾಬಲ್ಯವಿರುವ ಜಿಲ್ಲೆಗಳಲ್ಲೇ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. 2018ರಲ್ಲಿ ಮಂಡ್ಯ ಜಿಲ್ಲೆಯಲ್ಲಿ 7 ಕ್ಕೆ 7 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದ ಜೆಡಿಎಸ್, ಈ ಬಾರಿ ಒಂದೇ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 2019ರಲ್ಲಿ ಅಪರೇಷನ್ ಕಮಲದಿಂದ ಬಿಜೆಪಿ ತೆಕ್ಕೆಗೆ ಹೋಗಿದ್ದ ಕೆ. ಆರ್. ಪೇಟೆಯಲ್ಲಿ ಕಾಂಗ್ರೆಸ್ ಗೆದ್ದಿದೆ.
ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ 3 ಸ್ಥಾನ ಕಳೆದುಕೊಂಡಿದೆ. ಬೆಂಗಳೂರಿನಲ್ಲಿ ಶೂನ್ಯ ಸಾಧನೆ ಮಾಡಿದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸ್ಥಾನಗಳು ದ್ವಿಗುಣಗೊಂಡಿವೆ. ನನಗೂ ಒಮ್ಮೆ ಅವಕಾಶ ಕೊಡಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನವಿಗೆ ಮತದಾರರು ಮಣೆ ಹಾಕಿದಂತೆ ಗೋಚರಿಸುತ್ತಿದೆ. ಒಕ್ಕಲಿಗ ಸಮುದಾಯ ಹೆಚ್ಚಿರುವ ಕಡೆಗಳಲ್ಲೂ ಜೆಡಿಎಸ್ ನಿರೀಕ್ಷಿತ ಗೆಲುವು ಸಾಧಿಸಿಲ್ಲ. ಇದು ದಳಪತಿಗಳನ್ನು ಚಿಂತೆಗೀಡು ಮಾಡುವಂತೆ ಮಾಡಿದೆ.
ಅಭ್ಯರ್ಥಿಗಳ ಕೊರತೆ: ಜೆಡಿಎಸ್ಗೆ ಸರಿಯಾದ ಅಭ್ಯರ್ಥಿಗಳ ಕೊರತೆಯೂ ಸೋಲಲು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ವಲಸೆ ಬಂದಿದ್ದವರಿಗೆ ಟಿಕೆಟ್ ನೀಡಲಾಗಿತ್ತು.
ಗೆಲ್ಲದ ವಲಸಿಗರು: ಬಿಜೆಪಿಯಿಂದ ಟಿಕೆಟ್ ತಪ್ಪಿದ್ದರಿಂದ ಎಂ.ಪಿ. ಕುಮಾರಸ್ವಾಮಿ, ಅರಸೀಕೆರೆಯಿಂದ ಟಿಕೆಟ್ ಪಡೆದಿದ್ದ ಎನ್.ಆರ್. ಸಂತೋಷ್, ಕಾಂಗ್ರೆಸ್ ನಲ್ಲಿ ಟಿಕೆಟ್ ತಪ್ಪಿದ್ದ ರಘು ಆಚಾರ್, ಮನೋಹರ್ ತಹಶೀಲ್ದಾರ್, ಮೋಯ್ದಿನ್ ಬಾವಾ, ಎ.ಬಿ. ಮಾಲಕರೆಡ್ಡಿ, ಆಯನೂರು ಮಂಜುನಾಥ್, ಭಾರತಿ ಶಂಕರ್, ಎಲ್.ಎಲ್. ಘೋಟ್ನೆಕರ್, ಸೌರಭ ಚೋಪ್ರಾ, ದೊಡ್ಡಪ್ಪಗೌಡ ನರಿಬೋಳ, ಸೂರ್ಯಕಾಂತ್ ನಾಗಮಾರಪಲ್ಲಿ ಸೇರಿದಂತೆ ಅನ್ಯಪಕ್ಷಗಳಿಂದ ಬಂದ ಯಾರೊಬ್ಬರೂ ಗೆಲುವು ಕಂಡಿಲ್ಲ.
ಕಾಂಗ್ರೆಸ್ ನಿಂದ ಬಂದ ಎ.ಮಂಜು ಅವರು ಜೆಡಿಎಸ್ ಟಿಕೆಟ್ ಪಡೆದು ಅರಕಲಗೂಡಿನಲ್ಲಿ ಸ್ಪರ್ಧಿಸಿ ಜಯಗಳಿಸಿದರು. ಇವರನ್ನು ಹೊರತುಪಡಿಸಿದರೆ ವಲಸಿಗರು ಯಾರೂ ಗೆಲ್ಲಲು ಸಾಧ್ಯವಾಗಲಿಲ್ಲ. ಇದು ಸಹ ಜೆಡಿಎಸ್ಗೆ ದೊಡ್ಡ ಪೆಟ್ಟು ನೀಡಿದೆ. ಇದರ ಬಗ್ಗೆಯೂ ದಳಪತಿಗಳು ಪರಾಮರ್ಶೆ ಮಾಡಲಿದ್ದಾರೆ.
ಇದನ್ನೂಓದಿ:ಈ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ನೋಟಾದ ಆಟ: 10 ಕ್ಷೇತ್ರಗಳಲ್ಲಿ ಸೋಲಿನ ಅಂತರಕ್ಕಿಂತ ನೋಟಾ ವೋಟ್ ಹೆಚ್ಚು!