ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಜೆಡಿಎಸ್, ಮತ್ತೆ ಮೇಲೆದ್ದು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಚಿಂತನೆ ನಡೆಸಿದೆ. ಪಕ್ಷ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ರಚಿಸಲು ಮುಂದಾಗಿರುವ ಸಮಿತಿಯಲ್ಲಿ ಎಲ್ಲ ಸಮುದಾಯದ ನಾಯಕರಿಗೆ ಅವಕಾಶ ನೀಡುವ ಕುರಿತು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ.
ಮುಂಬರುವ ಚುನಾವಣೆಗೆ ಸಿದ್ಧತೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿದೇಶಿ ಪ್ರವಾಸ ಮುಗಿಸಿ ಮುಂದಿನ ವಾರ ವಾಪಸ್ ಆಗಲಿದ್ದಾರೆ. ನಂತರ ಜಿ.ಟಿ ದೇವೇಗೌಡ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ. ಪಕ್ಷದ ಸಂಘಟನೆಗೊಳಿಸುವ ದೃಷ್ಟಿಯಿಂದ ಕಾರ್ಯತಂತ್ರ ರೂಪಿಸಲು ಸಮಿತಿ ರಚನೆ ಮಾಡಲಾಗುತ್ತದೆ. ಸಮಿತಿ ಮೂಲಕ ಜಿಲ್ಲಾ, ತಾಲೂಕು ಮಟ್ಟದಲ್ಲಿ ಪಕ್ಷ ಸದೃಢಗೊಳಿಸುವುದರ ಜತೆಗೆ ಪಕ್ಷದಲ್ಲಿನ ಸಮುದಾಯ ನಾಯಕರ ಕೊರತೆ ನೀಗಿಸುವಲ್ಲಿಯೂ ವರಿಷ್ಠರು ಹೆಚ್ಚಿನ ಗಮನ ಹರಿಸಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣೆ ವೇಳೆ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂಬರುವ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾರ್ಯತಂತ್ರ ರೂಪಿಸಲು ಸಮಿತಿ ರಚನೆ: ಈ ಹಿಂದೆ ಎಲ್ಲ ಸಮುದಾಯದ ನಾಯಕರನ್ನೊಳಗೊಂಡ ಪಕ್ಷವಾಗಿದ್ದ ಜೆಡಿಎಸ್, ಇತ್ತೀಚಿನ ವರ್ಷದಲ್ಲಿ ಒಕ್ಕಲಿಗ ಸಮುದಾಯದ ಪಕ್ಷ ಎಂಬ ಹಣೆಪಟ್ಟಿ ಹೊಂದಿದೆ. ಇದನ್ನು ಕಳಚಲು ಹೆಚ್.ಡಿ ಕುಮಾರಸ್ವಾಮಿ ಹರಸಾಹಸ ಪಡುತ್ತಿದ್ದು, ಇದೀಗ ಈ ಪ್ರಯತ್ನಕ್ಕೆ ಮತ್ತಷ್ಟು ವೇಗ ಸಿಕ್ಕಿದೆ. ಹಾಗಾಗಿಯೇ ಹಿರಿಯ ನಾಯಕ, ಶಾಸಕ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕಾರ್ಯತಂತ್ರ ರೂಪಿಸಲು ಪಕ್ಷದ ವರಿಷ್ಠರು ಮುಂದಾಗಿದ್ದಾರೆ.
ಸಮಿತಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಸಾ.ರಾ.ಮಹೇಶ್, ಮುಖಂಡರಾದ ಅನ್ನದಾನಿ, ಬಿ.ಎಂ.ಫಾರೂಕ್ ಸೇರಿದಂತೆ ಇತರ ಸಮುದಾಯದ ನಾಯಕರಿಗೆ ಅವಕಾಶ ಸಿಗಲಿದೆ. ಅಲ್ಲದೇ, ಪಕ್ಷಕ್ಕೆ ನಿಷ್ಠರಾಗಿರುವ ಯುವ ನಾಯಕರನ್ನು ಸಹ ಪಕ್ಷದಲ್ಲಿ ಹೆಚ್ಚಿನ ಅವಕಾಶ ನೀಡಲು ವರಿಷ್ಠರು ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.