ಬೆಂಗಳೂರು:ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿಅಡ್ಡ ಮತದಾನ ಮಾಡಿದ ಶಾಸಕರಾದ ಗುಬ್ಬಿ ಶ್ರೀನಿವಾಸ್ ಹಾಗೂ ಕೋಲಾರದ ಶ್ರೀನಿವಾಸ್ ಗೌಡರನ್ನು ಅನರ್ಹಗೊಳಿಸುವಂತೆ ಜೆಡಿಎಸ್ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ದೂರು ನೀಡಿದೆ. ವಿಧಾನಸೌಧದಲ್ಲಿ ಸ್ಪೀಕರ್ ಭೇಟಿ ಮಾಡಿದ ಜೆಡಿಎಸ್ ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ಇಬ್ಬರನ್ನೂ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವೆಂಕಟರಾವ್ ನಾಡಗೌಡ, ನಾವು ಇಬ್ಬರು ಶಾಸಕರ ವಿರುದ್ಧ ದೂರು ನೀಡಿದ್ದೇವೆ. ಕಳೆದ ಕೆಲವು ದಿನಗಳಿಂದ ಅವರು ನಮ್ಮ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಶ್ರೀನಿವಾಸಗೌಡರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಬಹಿರಂಗ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಎಲ್ಲಾ ದಾಖಲೆಗಳ ಸಮೇತ ದೂರು ನೀಡಲಾಗಿದೆ. ಸ್ಪೀಕರ್ ಕೂಡ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆಂದು ಭರವಸೆ ಕೊಟ್ಟಿದ್ದಾರೆ ಎಂದರು.