ಬೆಂಗಳೂರು :ನಾಳೆ(ಶನಿವಾರ) ಇಸ್ರೋ ನಿರ್ಮಿತ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ. ಈ ಕುರಿತು ಈಟಿವಿ ಭಾರತಕ್ಕೆ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ.ಗಲಗಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಭೂಮಿಯನ್ನು ಹಲವಾರು ಬಾರಿ ಹಲವಾರು ಕಕ್ಷೆಗಳಲ್ಲಿ ಸುತ್ತುತ್ತಾ, ಕ್ರಮೇಣವಾಗಿ ದೂರ ಸರಿಯುತ್ತಾ ಭೂಮಿಯ ಗುರುತ್ವ ಪ್ರಭಾವದಿಂದಾಚೆ ಸಾಗಲಿದೆ. ಮುಂದೆ ಸುಮಾರು 4 ತಿಂಗಳ ಕಾಲದ ಪಯಣದಲ್ಲಿ ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ ಗಳಷ್ಟು ದೂರದಲ್ಲಿ ಬಾಹ್ಯಾಕಾಶದಲ್ಲಿರುವ ಎಲ್ 1 ಬಿಂದು ತಲುಪುತ್ತದೆ. ಆ ಬಿಂದುವಿನಲ್ಲಿ ಭೂಮಿಯ ಗುರುತ್ವ ಪ್ರಭಾವ ಮತ್ತು ಸೂರ್ಯನ ಗುರುತ್ವ ಪ್ರಭಾವಗಳು ಸಮತೋಲನಗೊಳ್ಳುತ್ತವೆ. ಆದಿತ್ಯ-ಎಲ್ 1 ಯೋಜನೆಯಲ್ಲಿ ಈ ಬಿಂದುವನ್ನು ಕೇಂದ್ರೀಕರಿಸಿ ಸೂರ್ಯನ ಸುತ್ತ ಪರಿಭ್ರಮಿಸಲು ಯೋಜಿಸಲಾಗಿದೆ.
ಈ ನಿರ್ದಿಷ್ಟ ಸ್ಥಾನದಲ್ಲಿರಿಸಿದ ಉಪಗ್ರಹವು ಸಾಕಷ್ಟು ಪ್ರಮಾಣದಲ್ಲಿ ಸೌರಕಿರಣಗಳು ಹಾಗೂ ಕಣಗಳನ್ನು ಸಂಗ್ರಹಿಸಿ ತನ್ಮೂಲಕ ಸೂರ್ಯನ ಕೊರೋನ, ಹೊರವಲಯ ಮತ್ತು ಎಲ್ 1 ಸ್ಥಳದಲ್ಲಿರುವ ಕ್ಷೇತ್ರಗಳಲ್ಲಿ ಹೊರಹೊಮ್ಮುವ ಕಾಂತೀಯ ಕುರಿತಾದ ಅಪಾರ ದತ್ತಾಂಶವನ್ನು ಒದಗಿಸಲಿದೆ. ಇವುಗಳ ಅಧ್ಯಯನದಿಂದ ನಮ್ಮ ಸಮೀಪದ ನಕ್ಷತ್ರವಾದ ಸೂರ್ಯನನ್ನು ಇನ್ನೂ ಉತ್ತಮವಾಗಿ, ಸಮಗ್ರವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.
ನೌಕೆಯ ಮೂಲಕ ಏಳು ಪೇ ಲೋಡ್‌ಗಳು (ಉಪಕರಣಗಳು) ಎಲ್ 1 ಬಿಂದುವನ್ನು ತಲುಪಿ ಸೂರ್ಯನ ಕುರಿತು ಸಮಗ್ರ ಅಧ್ಯಯನ ನಡೆಸಲಿದೆ. "ಅಸ್ಪ್ಸ್" ಎನ್ನುವ ಪೇ ಲೋಡ್ ಅನ್ನು ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ ಸಿದ್ಧಪಡಿಸಲಾಗಿದ್ದು, ಸೌರಮಾರುತ ಮತ್ತು ಶಕ್ತಿಯುತ ಕಣಗಳು ಹಾಗು ಅವುಗಳ ಚಲನಶಕ್ತಿಯ ವ್ಯಾಪಕತೆಯನ್ನು ಅಧ್ಯಯನ ಮಾಡಲಿದೆ.