ಬೆಂಗಳೂರು: ಜನರ ಆಶೀರ್ವಾದದಿಂದಾಗಿ 12 ವರ್ಷದ ನಂತರ ವಿಧಾನಸೌಧಕ್ಕೆ ಕಾಲಿಡುತ್ತಿದ್ದೇನೆ. ಇಂದು ಒಬ್ಬ ಶಾಸಕನ ಆಯ್ಕೆ ಮಾಡಿ ಇಲ್ಲಿಗೆ ಕಳಿಸಿದ್ದಾರೆ ಮುಂದೆ ಬಹುಮತದೊಂದಿಗೆ ವಿಧಾನಸೌಧಕ್ಕೆ ಬರುತ್ತೇನೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 12 ವರ್ಷದ ನಂತರ ಮತ್ತೆ ವಿಧಾನಸೌಧಕ್ಕೆ ಹೆಜ್ಜೆ ಇಡುತ್ತಿದ್ದೇನೆ. ನಮ್ಮ ಪಕ್ಷಕ್ಕೆ ಸಾಕಷ್ಟು ಜನರು ಆಶೀರ್ವಾದ ಮಾಡಿದರು. ಹಾಗಾಗಿ ನಾನು ಗೆದ್ದು ವಿಧಾನಸೌಧ ಪ್ರವೇಶ ಮಾಡಿದ್ದೇನೆ. ಕರ್ನಾಟಕದ ಜನರ ಒಳಿತಿಗಾಗಿ ಕಲ್ಯಾಣ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ನಮ್ಮ ಪಕ್ಷದಿಂದ ನಾನು ಒಬ್ಬನೇ ಗೆದ್ದು ವಿಧಾನಸೌಧಕ್ಕೆ ಹೆಜ್ಜೆ ಇಟ್ಟಿದ್ದೇನೆ.
ಬರುವಂತ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗೆದ್ದು ಬಹುಮತದಿಂದ ವಿಧಾನಸೌಧಕ್ಕೆ ಬರುತ್ತೇನೆ ಎಂದರು. ಜನಪರವಾಗಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನನ್ನ ಸಪೋರ್ಟ್ ಇರುತ್ತದೆ, ಸದನದಲ್ಲಿ ಜನಪರ ಮಸೂದೆ ಮಂಡಿಸುವಾಗ ನನ್ನ ಬೆಂಬಲ ಖಂಡಿತ ಇರುತ್ತದೆ. ಯಾರಿಗೇ ನನ್ನ ಅವಶ್ಯಕತೆ ಇರುತ್ತದೆಯೋ ಅವರಿಗೆ ನನ್ನ ಬೆಂಬಲ ಕೊಡುತ್ತೇನೆ ಎಂದರು.
ಬಳ್ಳಾರಿಯ ಗಣಿದಣಿ ಎಂದೇ ಖ್ಯಾತಿ ಹೊಂದಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆ ಹೊಂದಿದ್ದರು. ಆದರೇ ಪಕ್ಷ ಟಿಕೆಟ್ ನೀಡದ ಹಿನ್ನೆಲೆ ತಾವೇ ಸ್ವತಃ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದರು. ಕೆಆರ್ಪಿಪಿ ಪಕ್ಷದಿಂದ 40 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.
ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ರೆಡ್ಡಿ ಸ್ಪರ್ಧೆಗೆ ಇಳಿದಿದ್ದರೆ, ಪತ್ನಿ ಲಕ್ಷ್ಮೀ ಅರುಣಾ ಬಳ್ಳಾರಿ ನಗರ ಕ್ಷೇತ್ರದಲ್ಲಿ ತಮ್ಮ ಹಿರಿಯ ಸಹೋದರ ವಿರುದ್ಧವೇ ಸ್ಪರ್ಧೆಗೆ ಇಳಿಸಿದ್ದರು. ಆದರೆ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಗೆಲುವು ಸಾಧಿಸಿದರು. ಇನ್ನು ಗಂಗಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ವಿರುದ್ಧ ಜನಾರ್ದನ ರೆಡ್ಡಿ 8 ಸಾವಿರ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದರು. ಕೆಆರ್ಪಿಪಿ ಪಕ್ಷದ ಮೊದಲ ಗೆಲುವು ಇದಾಗಿತ್ತು.
2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಜನಾರ್ದನ ರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದರು. ಅಂದು ಸಹೋದರರಾದ ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಆಪ್ತ ಸ್ನೇಹಿತ ಬಿ. ಶ್ರೀರಾಮುಲು ಕೂಡ ರೆಡ್ಡಿ ಜೊತೆಯಲ್ಲಿದ್ದರು. ಇದಾದ ಬಳಿಕ ಹಲವು ಆರೋಪಗಳನ್ನು ಎದುರಿಸಿದ ರೆಡ್ಡಿ ಒಂದು ದಶಕಕ್ಕೂ ಹೆಚ್ಚು ಕಾಲ ರಾಜಕಾರಣದಿಂದ ದೂರವೇ ಸರಿದಿದ್ದರು. ನಂತರ ಅವರಿಗೆ ಜಾಮೀನು ಸಿಕ್ಕರೂ ಬಳ್ಳಾರಿಗೆ ಪ್ರವೇಶಿಸದಂತೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿತ್ತು. ಹೀಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ.
ಈ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಇಕ್ಬಾಲ್ ಅನ್ಸಾರಿ ಹಾಗೂ ಪರಣ್ಣ ಮುನವಳ್ಳಿ ನಡುವೆ ನೇರ ಹಣಾಹಣಿ ಇರುತಿತ್ತು. 2004ರಲ್ಲಿ ಜೆಡಿಎಸ್ನಿಂದ ಇಕ್ಬಾಲ್ ಅನ್ಸಾರಿ, 2008ರಲ್ಲಿ ಬಿಜೆಪಿಯಿಂದ ಪರಣ್ಣ ಮುನವಳ್ಳಿ, 2013ರಲ್ಲಿ ಮತ್ತೆ ಜೆಡಿಎಸ್ನಿಂದ ಇಕ್ಬಾಲ್ ಅನ್ಸಾರಿ ಗೆದ್ದಿದ್ದರು. 2018ರಲ್ಲಿ ಕಾಂಗ್ರೆಸ್ನಿಂದ ಇಕ್ಬಾಲ್ ಅನ್ಸಾರಿ ಕಣಕ್ಕಿಳಿದು ಸೋಲನುಭವಿಸಿದ್ದರು. ಹೀಗೆ ಒಮ್ಮೆ ಗೆದ್ದವರು, ಮತ್ತೊಮ್ಮೆ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಈ ಬಾರಿ ಸಹ ಅನ್ಸಾರಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದು, ಪರಣ್ಣ ಮುನವಳ್ಳಿ ಬಿಜೆಪಿಯಿಂದ ಕಣದಲ್ಲಿದ್ದರು. ಆದರೆ ಈ ಇಬ್ಬರು ಘಾಟನುಘಟಿಗಳ ನಡುವೆ ರೆಡ್ಡಿ ವಿಜಯದ ಪತಾಕೆ ಹಾರಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿಯಿಂದ ನಕಲಿ ಮತದಾನ: ಕಾಂಗ್ರೆಸ್ ದೂರು