ಬೆಂಗಳೂರು :ಗಣರಾಜ್ಯೋತ್ಸವವನ್ನು ಬೆಂಗಳೂರಿನ ಮೈಸೂರು ವೃತ್ತದ ಸಮೀಪವಿರುವ ಈದ್ಗಾ ಮೈದಾನದಲ್ಲಿ ಆಚರಿಸುವಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಿಗೆ ಪತ್ರ ಬರೆದಿರುವ ಅವರು, ಗಣರಾಜ್ಯೋತ್ಸವವನ್ನು ಈ ವರ್ಷ ಇದೇ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸಬೇಕು. ಕೂಡಲೇ ಸರ್ಕಾರ ಇದಕ್ಕೆ ನಿರ್ದೇಶನ ನೀಡಿ ಸರ್ಕಾರದ ವತಿಯಿಂದಲೇ ಕಾರ್ಯಕ್ರಮ ನಡೆಸಬೇಕು ಎಂದು ಕೋರಿದ್ದಾರೆ.
ಮಾಲೀಕತ್ವದ ವಿವಾದ: ಈದ್ಗಾ ಮೈದಾನ ವಿವಾದ ಕೋರ್ಟ್‌ನಲ್ಲಿದೆ. ಮಾಲೀಕತ್ವದ ವಿಚಾರಣೆ ನಡೆಯುತ್ತಿದ್ದು, ಸ್ಥಳ ಸರ್ಕಾರದ್ದು ಎಂದು ಕೋರ್ಟ್ ಹೇಳಿದೆ. ಇದರ ಆಧಾರದಲ್ಲಿ ಕಳೆದ ವರ್ಷ ಹಿಂದೂಪರ ಸಂಘಟನೆಗಳು ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಮುಂದಾಗಿದ್ದವು. ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಕಾರ್ಯಕ್ರಮ ತಡೆದು ಶಾಂತಿ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಗಣರಾಜ್ಯೋತ್ಸವ ಧ್ವಜಾರೋಹಣ:ವಿವಾದಿತ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲು ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಕಳೆದ ಬಾರಿ ಧ್ವಜಾರೋಹಣ ಮಾಡಿದ್ದ ಬೆಂಗಳೂರು ಉತ್ತರ ಎ.ಸಿ.ಶಿವಣ್ಣ ಅವರೇ ಈ ಬಾರಿಯೂ ಧ್ವಜಾರೋಹಣ ಮಾಡಲಿದ್ದಾರೆ ಎಂದು ಸಂಸದ ಪಿ.ಸಿ.ಮೋಹನ್ ಮಾಹಿತಿ ನೀಡಿದ ನಂತರ ಜಮೀರ್ ಕೂಡಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.