ಬೆಂಗಳೂರು: ಬಸವಕಲ್ಯಾಣದ ಆಧುನಿಕ ಅನುಭವ ಮಂಟಪಕ್ಕೆ ಸಂಬಂಧಿಸಿದಂತೆ ಮತ್ತು ಸುತ್ತಮುತ್ತಲ ಶರಣ ಸ್ಮಾರಕಗಳ ಅಭಿವೃದ್ಧಿ ಕುರಿತಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ಬಸವಕಲ್ಯಾಣದ ಆಧುನಿಕ ಅನುಭವ ಮಂಟಪ ನಿರ್ಮಾಣ ಸಂಬಂಧ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಪಾಲ್ಗೊಂಡ ವೇಳೆ ಈ ವಿಚಾರ ತಿಳಿಸಿದ್ದೇನೆ. ನೂತನವಾದ ಆಧುನಿಕ ಅನುಭವ ಮಂಟಪ ತ್ವರಿತವಾಗಿ ನಿರ್ಮಾಣವಾಗಬೇಕಾದರೆ ಅದಕ್ಕೆ 100 ಎಕರೆ ಜಮೀನು ಬೇಕಾಗುತ್ತದೆ. ಆದರೆ ಸರ್ಕಾರದ ಬಳಿ ಇರುವುದು 20 ಎಕರೆ ಮತ್ತು ದಾನವಾಗಿ ಬಂದಿರುವುದು 11 ಎಕರೆ. ಇನ್ನೂ 69 ಎಕರೆ ಭೂ ಸ್ವಾಧೀನ ತುರ್ತಾಗಿ ಆಗಬೇಕಾಗಿರುತ್ತದೆ.
ಆದರೆ, ಸರ್ಕಾರ ನಿಯಮಾನುಸಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಈಗ ಆರಂಭಿಸಿದರೂ ಅದು ಮುಗಿಯಲು ಕನಿಷ್ಠ 8-10 ತಿಂಗಳಾದರೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ನೂತನ ಕಾಯಿದೆಯ ರೀತಿ “ಕನ್ಸೆಂಟ್ ಅವಾರ್ಡ್’ನಂತೆ ಭೂಮಿ ಪಡೆಯಬೇಕಾಗುತ್ತದೆ. ಹೀಗಾಗಿ ಎಲ್ಲ ಭೂ ಮಾಲೀಕರನ್ನೂ ಕರೆದು ಸಭೆ ನಡೆಸಿ, ಅವರ ಮನವೊಲಿಸಿ ಮಾರುಕಟ್ಟೆ ಮೌಲ್ಯಕ್ಕೆ ಭೂಮಿಯನ್ನು ತ್ವರಿತವಾಗಿ ಖರೀದಿಸುವಂತೆ ಸಲಹೆ ನೀಡಿದ್ದೇನೆ ಎಂದಿದ್ದಾರೆ.
ಆಧುನಿಕ ಅನುಭವ ಮಂಟಪ ಕಟ್ಟಡ ನಿರ್ಮಾಣ ಸಂಬಂಧ ಈಗಾಗಲೇ ಟೆಂಡರ್ ಕರೆದಿರುವ ವಿಚಾರ ಸಭೆಯಲ್ಲಿ ಚರ್ಚೆಗೆ ಬಂತು. ವಾಸ್ತವವಾಗಿ ಭೂಸ್ವಾಧೀನ ಆಗದೆ ಡಿಪಿಆರ್ ಅಂದರೆ ವಿಸ್ತೃತ ಯೋಜನಾ ವರದಿ ಅನುಮೋದನೆ ಅಪೂರ್ಣವಾಗುತ್ತದೆ. ಹೀಗಾಗಿ ಯಾವುದೇ ಅಡೆತಡೆ, ವಿಳಂಬ ಇಲ್ಲದೆ ಆಧುನಿಕ ಅನುಭವ ಮಂಟಪ ಸಾಕಾರವಾಗಲು ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ತಕ್ಷಣವೇ ಡಿಪಿಆರ್ ಅನುಮೋದನೆಗೆ ತಜ್ಞರ/ಪರಿಣತರ ಸಮಿತಿಯನ್ನು ರಚಿಸಲು ಸಲಹೆ ನೀಡಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.