ಬೆಂಗಳೂರು:ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿ, ಫೋಟೋ ವಿರೂಪಗೊಳಿಸಿ ಹಾಗೂ ಅವರ ಪತ್ನಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸಿ ಪೋಸ್ಟ್ ಪ್ರಕಟಿಸಿದ್ದ ಆರೋಪಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆಪಿಸಿಸಿಯ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯದರ್ಶಿ ಸಂಜಯ್ ಯಾದವ್ ಎಂಬುವವರು ನೀಡಿರುವ ದೂರಿನನ್ವಯ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ದೂರಿನಲ್ಲಿರುವ ಸಾರಾಂಶ:ಜನವರಿ 11 ರಂದು ‘ಟ್ರೋಲ್ ಕನ್ನಡಿಗ' ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರ ಫೋಟೋವನ್ನು ತಿರುಚಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಲಾಗಿದೆ. ಅಲ್ಲದೇ ಫೇಸ್‌ಬುಕ್‌ನಲ್ಲಿ 'ಕೃತಿಕಾ ಕೃತಿ' ಹೆಸರಿನ ಖಾತೆಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿಯನ್ನು ಉಲ್ಲೇಖಿಸಿ ಅಶ್ಲೀಲವಾಗಿ ನಿಂದಿಸಿ ಅವಹೇಳನ ಮಾಡಲಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬದವರನ್ನ ಕೀಳಾಗಿ ಅವಮಾನಿಸಿ ಪೋಸ್ಟ್ ಪ್ರಕಟಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅದರನ್ವಯ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇತ್ತೀಚಿನ ಪ್ರಕರಣ, ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್:ಬಿಜೆಪಿ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾವಚಿತ್ರವನ್ನು ಅಳವಡಿಸಿ ಅವರ ವಿರುದ್ಧ ಅತ್ಯಂತ ಗಂಭೀರ ಟೀಕೆ ಮತ್ತು ಅಪಪ್ರಚಾರ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಎಕ್ಸ್ ಖಾತೆಯ ಸಾಮಾಜಿಕ ಜಾಲತಾಣವನ್ನು ಸ್ಥಗಿತಗೊಳಿಸಬೇಕು. ಜೊತೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೆಪಿಸಿಸಿ ನಿಯೋಗ ಕೇಂದ್ರ ವಿಭಾಗದ ಸೈಬರ್ ಕ್ರೈಂಗೆ ಇತ್ತೀಚೆಗೆ ದೂರು ನೀಡಿತ್ತು.
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ವೈ. ಪುಟ್ಟರಾಜು ಹಲಸೂರು ಗೇಟ್ನ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದರು. ದೂರಿನಲ್ಲಿ ಬಿಜೆಪಿಯ ಸಾಮಾಜಿಕ ಜಾಲತಾಣವಾಗಿರುವ ಎಕ್ಸ್ ಖಾತೆಯಲ್ಲಿ (BJP@4india official Twitter) ಕಾಂಗ್ರೆಸ್ ಪಕ್ಷದ ನೆಚ್ಚಿನ ನಾಯಕರು ಮತ್ತು ಸಂಸದರಾದ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಅವರ ವಿರುದ್ಧ ಸುಳ್ಳು ಆರೋಪವನ್ನು ಮತ್ತು ಧರ್ಮ ವಿರೋಧಿ, ಶ್ರೀರಾಮನ ವಿರೋಧಿ ಎಂದು ಸುಳ್ಳು ಮಾಹಿತಿ, ಭಾರತದ ಆಧುನಿಕ ರಾವಣ ಎಂಬ ಪದಗಳನ್ನು ಬಳಕೆ ಮಾಡಿದ್ದರು. ಇದರ ಪರಿಣಾಮ ದೇಶದ ಹಾಗೂ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರ ಅಭಿಮಾನಿಗಳಿಗೆ ಮತ್ತು ಪಕ್ಷಕ್ಕೆ ತೀವ್ರ ನೋವು ಉಂಟಾಗಿದೆ ಎಂದು ಆಕ್ಷೇಪಿಸಲಾಗಿತ್ತು. ಈ ಕೂಡಲೇ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಕೆ ಮಾಡಲಾಗಿತ್ತು.
ಇದನ್ನೂ ಓದಿ:ರಾಮಮಂದಿರ ಉದ್ಘಾಟನೆಯನ್ನು ಬಿಜೆಪಿಯವರು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ: ಸಿಎಂ ಸಿದ್ದರಾಮಯ್ಯ