ಕರ್ನಾಟಕ

karnataka

ETV Bharat / state

ಮಾಹಿತಿ ನೀಡಲು ವಿಳಂಬ: ಬಿಬಿಎಂಪಿ ಅಧಿಕಾರಿಗೆ 10 ಸಾವಿರ ದಂಡ ವಿಧಿಸಿದ ಮಾಹಿತಿ ಆಯೋಗ

ಮಾಹಿತಿ ನೀಡದ ಬಿಬಿಎಂಪಿ ಅಧಿಕಾರಿಗೆ ರಾಜ್ಯ ಮಾಹಿತಿ ಆಯೋಗ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಮಾಹಿತಿ ಆಯೋಗ
ಮಾಹಿತಿ ಆಯೋಗ

By

Published : Oct 4, 2022, 4:00 PM IST

ಬೆಂಗಳೂರು: ಸಾರ್ವಜನಿಕರೊಬ್ಬರು ಖಾತೆ ಕುರಿತಂತೆ ಕೋರಿದ್ದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ನೀಡದ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಹೊರಮಾವಿನ ಬಿಬಿಎಂಪಿ ಕಂದಾಯ ಅಧಿಕಾರಿ ದೊಡ್ಡ ಶಾಮಾಚಾರಿ ಅವರಿಗೆ ರಾಜ್ಯ ಮಾಹಿತಿ ಆಯೋಗ 10 ಸಾವಿರ ರೂ ದಂಡವನ್ನು ವಿಧಿಸಿ ಆದೇಶಿಸಿದೆ.

ಪ್ರಕರಣ ಸಂಬಂಧ ಮಾಹಿತಿ ಒದಗಿಸಲು ವಿಳಂಬ ಮಾಡಿದ ಕುರಿತು ಬೆಳಗಾವಿಯ ರಾಮಮೂರ್ತಿ ನಗರ ನಿವಾಸಿ ಪ್ರವೀಣ್​ ಗೋಪಿನಾಥನ್​ ಎಂಬುವರು ಸಲ್ಲಿಸಿದ್ದ ದೂರಿನ ಸಂಬಂಧ ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಎಸ್​.ಎಲ್​.ಪಾಟೀಲ್​ ಅವರು ದಂಡ ವಿಧಿಸಿ ಆದೇಶಿಸಿದ್ದಾರೆ.

ಅಲ್ಲದೆ, ಕಂದಾಯ ಅಧಿಕಾರಿ ದೊಡ್ಡಶಾಮಾಚಾರಿ ಅವರಿಂದ ವೇತನದಲ್ಲಿ 5 ಸಾವಿರ ರೂ.ಗಳಂತೆ ಎರಡು ತಿಂಗಳು ಸೇರಿ 10 ಸಾವಿರ ರೂ ಕಡಿತಗೊಳಿಸಬೇಕು. ಈ ಮೊತ್ತವನ್ನು ಸರ್ಕಾರದ ಖಾತೆಗೆ ಜಮೆ ಮಾಡಿಸಿಕೊಳ್ಳಬೇಕು. ಈ ಸಂಬಂಧದ ವರದಿಯನ್ನು ಆಯೋಗದ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರಾದ ಪ್ರವೀಣ್​ ಗೋಪಿನಾಥ್​ ಅವರು ಖಾತೆ ವರ್ಗಾವಣೆಗೆ ಸಂಬಂಧಿಸಿದಂತೆ ಆನ್ಲೈನ್​ ಮೂಲಕ ಸಕಾಲದಲ್ಲಿ ಆಂಗ್ಲ ಭಾಷೆಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ್ದ 19 ದಿನಗಳ ಬಳಿಕ ದಾಖಲೆಗಳ ಕೊರತೆ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸಿರುವುದಾಗಿ ಬಿಬಿಎಂಪಿ ಕಂದಾಯ ಅಧಿಕಾರಿಗಳು ತಿಳಿಸಿದ್ದರು.

ಆದರೆ, ಯಾವ ದಾಖಲೆಗಳು ಕೊರತೆಯಾಗಿವೆ ಎಂಬುದಾಗಿ ತಿಳಿಸಿರಲಿಲ್ಲ. ದಾಖಲೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಎಲ್ಲವೂ ಸರಿಯಾಗಿದೆ ಸ್ವೀಕರಿಸಿದ್ದರು. ಆದರೆ, ಬಳಿಕ ದಾಖಲೆಗಳು ಕೊರತೆಯಾಗಿದೆ ಎಂಬುದಾಗಿ ತಿಳಿಸಿದ್ದರು.

ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿದ್ದ ಪ್ರವೀಣ್​, 19 ದಿನಗಳ ಬಳಿಕ ಅರ್ಜಿ ವಜಾಗೊಳಿಸಲಾಗಿದೆ. ಜತೆಗೆ, ಅರ್ಜಿಯ ಸಲ್ಲಿಸಿದಾಗ ಎಲ್ಲವೂ ಸರಿಯಿದೆ ಎಂದು ಹೇಳಿ ಇದೀಗ ದಾಖಲೆ ಕೊರತೆ ಎಂಬುದಾಗಿ ಹೇಳಿಸುವುದಕ್ಕೆ ಕಾರಣವನ್ನು ತಿಳಿಸುವಂತೆ ಕೋರಿದ್ದರು. ಆದರೆ, ಈ ಕುರಿತು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿರಲಿಲ್ಲ. ಪ್ರಶ್ನಿಸಿ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆದರೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.

ಇದನ್ನು ಪ್ರಶ್ನಿಸಿ ಪ್ರವೀಣ್​ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ಆಯೋಗ, ಅರ್ಜಿದಾರರು ಸಲ್ಲಿಸಿರುವ ಮಾಹಿತಿಯನ್ನು 15 ದಿನಗಳಲ್ಲಿ ಉಚಿತವಾಗಿ ಒದಗಿಸಬೇಕು ಎಂದು ಸೂಚನೆ ನೀಡಿತ್ತು. ಅಲ್ಲದೇ, ಮಾಹಿತಿ ನೀಡುವುದಕ್ಕೆ ವಿಳಂಬ ಮಾಡಿರುವುದಕ್ಕಾಗಿ ಯಾವ ಕಾರಣಕ್ಕಾಗಿ ದಂಡ ವಿಧಿಸಬಾರದು ಎಂಬುದಕ್ಕೆ ಲಿಖಿತ ಸಮಜಾಯಿಷಿ ನೀಡಬೇಕು ಎಂದು ಎಚ್ಚರಿಕೆ ನೀಡಿತ್ತು. ಆದರೂ ಮಾಹಿತಿ ನೀಡಿರಲಿಲ್ಲ. ಆದರೆ, ಅರ್ಜಿ ಸಲ್ಲಿಸಿದ ಏಳು ತಿಂಗಳ ಬಳಿಕ ಮಾಹಿತಿ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಆಯೋಗ ಅಧಿಕಾರಿಗೆ ದಂಡ ವಿಧಿಸಿ ಆದೇಶಿಸಿದೆ.

(ಓದಿ: ಬಿಬಿಎಂಪಿ ಮುಖ್ಯ ಆಯುಕ್ತರ ಫೋಟೋ ದುರ್ಬಳಕೆ: ಪ್ರಕರಣ ದಾಖಲು)

ABOUT THE AUTHOR

...view details