ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ ದೇಶದಲ್ಲೇ ಮುಂಚೂಣಿ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ವಿಶ್ವ ಮಟ್ಟದಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೇರಲು ಇನ್ನಷ್ಟು ಪರಿಶ್ರಮ ಪಡಬೇಕಿದೆ ಎಂದು ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್ ಹೇಳಿದರು. ಸೋಮವಾರ ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಓದಲು ಹೆಮ್ಮೆ ಪಡುತ್ತಾರೆ.
ಈ ಸಂಸ್ಥೆ ತನ್ನ ಉನ್ನತ ಗುಣಮಟ್ಟದ ವಿಜ್ಞಾನ ಮತ್ತು ಸಂಶೋಧನಾ ಪ್ರಕ್ರಿಯಲ್ಲಿ ಸುಮಾರು ನೂರು ವರ್ಷದಿಂದ ತೊಡಗಿದೆ. ಮುಂದಿನ ಉಜ್ವಲ ಭವಿಷ್ಯಕ್ಕೆ ಈ ಸಂಸ್ಥೆ ಸದಾ ಗಟ್ಟಿಯಾದ ಅಡಿಪಾಯವನ್ನು ಹಾಕಿಕೊಟ್ಟಿದೆ. ಹಲವು ಉತ್ಕೃಷ್ಟ ವಿಜ್ಞಾನಿಗಳನ್ನು ಹುಟ್ಟು ಹಾಕಿ ವಿದ್ಯಾರ್ಥಿಗಳಿಗೆ ಮತ್ತು ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡಿದೆ ಎಂದು ಬಣ್ಣಿಸಿದರು. ಇಲ್ಲಿನ ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಪದವೀಧರರ ಮೇಲೆ ಕುಟುಂಬ, ಸ್ನೇಹಿತರು ಮತ್ತು ಇಡೀ ಸಮಾಜ ನಂಬಿಕೆಯನ್ನು ಇಟ್ಟಿದೆ. ಅದನ್ನು ವಿದ್ಯಾರ್ಥಿಗಳು ಉಳಿಸಿಕೊಂಡು ಇನ್ನಷ್ಟು ಉನ್ನತ ಸ್ಥಾನಕ್ಕೆ ಏರಿ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.
ಮುಂದಿನ 10 ವರ್ಷದ ಪೂರ್ವ ತಯಾರಿಯನ್ನು ಈಗ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕಿದೆ. ಇದರಿಂದ ಭವಿಷ್ಯದಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ಎದುರಿಸುವ ಚಾಣಾಕ್ಷತನ ಬರುತ್ತದೆ. ವಿಶ್ವವನ್ನು ಮನುಷ್ಯ ಮತ್ತು ಜೀವ ಕುಲಕ್ಕೆ ಉತ್ತಮವಾದ ಜಾಗವನ್ನಾಗಿ ಮಾಡಲು ದಾರಿಗಳು ಕಾಣಸಿಗುತ್ತವೆ ಎಂದು ಕ್ರಿಸ್ ಗೋಪಾಲಕೃಷ್ಣನ್ ಕಿವಿಮಾತು ಹೇಳಿದರು.