ಬೆಂಗಳೂರು:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆ ನೀಡುವುದಾಗಿ ಕಾಂಗ್ರೆಸ್ ನಾಯಕರು ಚುನಾವಣೆಗೆ ಮುನ್ನವೇ ಗ್ಯಾರಂಟಿಯಾಗಿ ಘೋಷಿಸಿದ್ದರು. ಇದೀಗಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರಕ್ಕೆ ದಿನಾಂಕ ನಿಗದಿಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಜುಲೈ 17 ಅಥವಾ 18 ರಂದು ಯೋಜನೆಗೆ ಚಾಲನೆ ನೀಡಲು ತೀರ್ಮಾನ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿ ದಿನಾಂಕ ಘೋಷಣೆ ಮಾಡಲಿದ್ದಾರೆ.
ಕಳೆದ ತಿಂಗಳು 'ಗೃಹಲಕ್ಷ್ಮಿ' ಯೋಜನೆ ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿತ್ತು. ಇದನ್ನು ಫಲಾನುಭವಿಗಳು ಸೇವಾ ಸಿಂಧು ಕೇಂದ್ರ ಸಂಪರ್ಕಿಸಿ ಇಲ್ಲವೇ ನೇರವಾಗಿ ವೆಬ್ಸೈಟ್ನಲ್ಲಿ ಸೇವಾ ಸಿಂಧು ಪೋರ್ಟಲ್ಗೆ ತೆರಳಿ ಅರ್ಜಿ ಭರ್ತಿ ಮಾಡಿ, ದಾಖಲೆಗಳನ್ನು ಸಲ್ಲಿಸಬಹುದಾಗಿದೆ ಎಂದು ಸೂಚಿಸಲಾಗಿತ್ತು. ಈ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂಪಾಯಿ ಸಹಾಯಧನ ನೀಡಲಾಗುತ್ತಿದ್ದು, ಲಾಭ ಪಡೆದುಕೊಳ್ಳಲು ಸರ್ಕಾರವು ಹಲವು ಷರತ್ತುಗಳನ್ನು ವಿಧಿಸಿದೆ. ಈಗಾಗಲೇ ಕೆಲ ಗೈಹಲಕ್ಷ್ಮಿ ಯೋಜನೆಗೆನ ಕೆಲ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ಜುಲೈ 16, 17 ರಂದು ಬೆಂಗಳೂರಿನಲ್ಲಿ ಮಿತ್ರಪಕ್ಷಗಳ ಕೂಟದ ಸಭೆ ನಡೆಯಲಿದ್ದು, ಸೋನಿಯಾ ಗಾಂಧಿ ಆಗಮಿಸಲಿದ್ದಾರೆ. ಈ ವೇಳೆ ಅರ್ಜಿ ಸ್ವೀಕಾರಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಆಗಸ್ಟ್ 16 ರಿಂದ ಗೃಹ ಲಕ್ಷ್ಮೀ ಅಕೌಂಟಿಗೆ ಹಣ ಜಮಾವಣೆಯಾಗಲಿದೆ. ಇನ್ನು ರಾಜ್ಯದ ವಿವಿಧ ಕಾರಾಗೃಹದಲ್ಲಿರುವಂಥ 67 ಮಂದಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅಸ್ತು ನೀಡಲಾಗಿದೆ.
ಇತರ ತೀರ್ಮಾನಗಳೇನು?:
- ಕರ್ನಾಟಕ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ವಿಧೇಯಕಕ್ಕೆ ಅನುಮೋದನೆ
- ಬಯಲು ಸೀಮೆ ಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕಕ್ಕೆ ಅಸ್ತು
- ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ತಿದ್ದುಪಡಿ ವಿಧೇಯಕಕ್ಕೆ ಅಸ್ತು
- ಮೈಸೂರು ಲ್ಯಾಂಪ್ಸ್ ವರ್ಕ್ಸ್ ಲಿ. ಮೌಲ್ಯಮಾಪನ ವಿಧಾನವನ್ನು ಪರಿಷ್ಕರಿಸಲು ಅನುಮೋದನೆ
- ಕೃಷಿ ಮತ್ತು ತೋಟಗಾರಿಕಾ ಬೆಲೆಗಳ ಸ್ಥಿರೀಕರಣ ಮತ್ತು ಬೆಲೆ ನಿಗದಿ ಮಾಡಲು ಸಚಿವ ಸಂಪುಟ ಉಪಸಮಿತಿ ರಚನೆಗೆ ಅನುಮೋದನೆ
- ಆರ್ಟಿಕಲ್ 371ಜೆ ಸಂಬಂಧ ವಿಶೇಷ ಅನುಷ್ಠಾನ ಪ್ರಗತಿಯನ್ನು ಪರಿಶೀಲಿಸಲು ಸಚಿವ ಸಂಪುಟ ಉಪ ಸಮಿತಿ ರಚನೆಗೆ ಅನುಮೋದನೆ
ಇದನ್ನೂ ಓದಿ:ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಮೂನೆ ಬಿಡುಗಡೆ : ವಿಧಿಸುವ ಷರತ್ತುಗಳು ಏನು ಗೊತ್ತಾ?