ಬೆಂಗಳೂರು:ರಾಜ್ಯದಲ್ಲಿ ಈ ವರ್ಷ ನಡೆದ ಪ್ರಮುಖ ರಾಜಕೀಯ ಘಟನಾವಳಿಗಳನ್ನು ನೋಡುವುದಾದರೆ, ಮೇಕೆದಾಟು ಯೋಜನೆಯ ತ್ವರಿತ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಜನವರಿ 9ರಂದು ಕನಕಪುರದಿಂದ ಪಾದಯಾತ್ರೆ ಆರಂಭಿಸಿತು. ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳುವುದಾಗಿ ಸರಕಾರ ಎಚ್ಚರಿಕೆ ನೀಡಿತ್ತು.
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ 30 ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಜನವರಿ 12ರಂದು ಕೋವಿಡ್ ಕೇಸ್ ಹೆಚ್ಚುತ್ತಿರುವ ಸಮಯದಲ್ಲಿ ಪಾದಯಾತ್ರೆಗೆ ಅವಕಾಶ ನೀಡಿದ್ದಕ್ಕೆ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ರಾಜ್ಯ ಸರಕಾರ ಯಾತ್ರೆಗೆ ನಿರ್ಬಂಧ ವಿಧಿಸಿತು. ಆ ಬಳಿಕ ಕಾಂಗ್ರೆಸ್ ನಾಯಕರು ಅನಿವಾರ್ಯವಾಗಿ ಪಾದಯಾತ್ರೆಯನ್ನು ಸ್ಥಗಿತಗೊಳಿಸಿದರು.
ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ: ಶಿವಮೊಗ್ಗದಲ್ಲಿ ಫೆಬ್ರವರಿ 20 ರಂದು ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಜರಂಗ ದಳ ಕಾರ್ಯಕರ್ತನಾಗಿದ್ದ ಹರ್ಷನನ್ನು ಹತ್ಯೆ ಮಾಡಿದ ಘಟನೆ ಇಡೀ ರಾಜ್ಯವನ್ನು ತಲ್ಲಣಗೊಳಿಸಿತ್ತು. ಈ ಘಟನೆಯ ವಿರುದ್ಧ ಹಲವಾರು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.
ಸಚಿವ ಈಶ್ವರಪ್ಪ ರಾಜೀನಾಮೆ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನದಿಂದ ಕೆ.ಎಸ್.ಈಶ್ವರಪ್ಪ ಅವರನ್ನು ವಜಾ ಮಾಡಬೇಕು. ಜೊತೆಗೆ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಇದರ ಜೊತೆಗೆ 24 ಗಂಟೆ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿಯನ್ನು ನಡೆಸಿದ್ದರು. ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಹೆಚ್ಚಾದ ಬೆನ್ನಲ್ಲೇ ಸಚಿವ ಈಶ್ವರಪ್ಪ ರಾಜೀನಾಮೆ ಸಲ್ಲಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಭಾರಿ ಸುದ್ದಿಯಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್, ಏಪ್ರಿಲ್ 12 ರಂದು ಆತ್ಮಹತ್ಯೆ ಮಾಡಿಕೊಂಡರು. ಡೆತ್ ನೋಟ್ನಲ್ಲಿ ಈಶ್ವರಪ್ಪನವರ ಹೆಸರನ್ನು ಬರೆದಿದ್ದರು. ಹಾಗಾಗಿ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಿತ್ತು.
ಪೇ ಸಿಎಂ ಪೋಸ್ಟರ್: ಬಿಜೆಪಿ ಸರ್ಕಾರ ವಿರುದ್ಧ ಪೇ ಸಿಎಂ ಪೋಸ್ಟರ್ ಸಹ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. 40 ಪರ್ಸೆಂಟ್ ಕಮಿಷನ್ ಆರೋಪ ಮುಂದಿಟ್ಟುಕೊಂಡು ಪೇ ಸಿಎಂ ಎಂದು ಪೇಟಿಎಂ ಮಾದರಿಯಲ್ಲಿ ರಚಿಸಲಾಗಿದ್ದ ಪೋಸ್ಟರ್ ನಗರದ ಹಲವು ಕಡೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಅಂಟಿಸಿ ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರದೊಂದಿಗೆ ಕ್ಯೂ ಆರ್ ಕೋಡ್ ಒಳಗೊಂಡ ಪೇ ಸಿಎಂ ಪೋಸ್ಟರ್ ಹಾಕಿದ್ದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.