ಕರ್ನಾಟಕ

karnataka

ETV Bharat / state

ಉಪ ಚುನಾವಣೆ ಸಾಧ್ಯತೆ: ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ - Kpcc President Dinesh Gundu Rao

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಉಂಟಾಗಿರುವ ಹಾನಿ, ಇನ್ನೂ ಕೆಲವು ಜಿಲ್ಲೆಗಳಲ್ಲಿ ತಲೆ ದೂರಿರುವ ಬರ ಪರಿಸ್ಥಿತಿ ಮತ್ತು ಮುಂದೆ ನಡೆಯಲಿರುವ ಉಪ ಚುನಾವಣೆ ಸಂಬಂಧ ಚರ್ಚಿಸಲು ಕೆಪಿಸಿಸಿ ಕಚೇರಿಯಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.

ನೆರೆ, ಬರ, ರಾಜಕೀಯ ವಿಚಾರದ ಬರಪೂರ್ ಚರ್ಚೆಗೆ ಕೆಪಿಸಿಸಿಯಲ್ಲಿ ಸಭೆ

By

Published : Aug 14, 2019, 7:55 PM IST

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದ್ದು, ಜೊತೆಗೆ ಉಪ ಚುನಾವಣೆ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.

ಕಳೆದ 15ದಿನಗಳಿಂದ ರಾಜ್ಯಾದ್ಯಂತ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ ಉಂಟಾಗಿದೆ. ಹಳೆ ಮೈಸೂರು ಹಾಗೂ ಬಯಲು ಸೀಮೆ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗದೆ ಬರದ ಛಾಯೆ ಆವರಿಸಿದೆ. ಈ ಎರಡು ಪ್ರದೇಶಗಳಿಗೆ ಕಾಂಗ್ರೆಸ್ ಪಕ್ಷದಿಂದ ಪ್ರತ್ಯೇಕ ತಂಡವನ್ನು ರಚಿಸಿ ವೀಕ್ಷಣೆಗೆ ಕಳುಹಿಸಲು ನಿರ್ಧರಿಸಿದ್ದು, ಇಂದಿನ ಸಭೆಯಲ್ಲಿ ಈ ವಿಚಾರವಾಗಿ ಮಹತ್ವದ ಚರ್ಚೆ ನಡೆಯಿತು.

ಅನರ್ಹ ಶಾಸಕರಿಂದ ತೆರವಾದ ರಾಜ್ಯದ 17 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಸಾಧ್ಯತೆಯಿದ್ದು, ಶಾಸಕರು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ಇತ್ಯರ್ಥವಾದ ಕೆಲವೇ ದಿನಗಳಲ್ಲಿ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದ್ದು, ಕಾಂಗ್ರೆಸ್ ಪಕ್ಷ ತಾನು ಕಳೆದುಕೊಂಡಿರುವ 14 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನುಕಣಕ್ಕಿಳಿಸುವ ಸಂಬಂಧ ಇಂದಿನ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಿದೆ. ಕಾಂಗ್ರೆಸ್ ಬಿಟ್ಟು ಹೊರ ನಡೆದ ಶಾಸಕರ ಕ್ಷೇತ್ರವನ್ನು ಮರಳಿ ಕೈವಶ ಮಾಡಿಕೊಳ್ಳುವ ಕುರಿತು ಹಿರಿಯ ನಾಯಕರ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತುಕತೆ ನಡೆಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಶಿವಮೊಗ್ಗ, ಚಿಕ್ಕಮಗಳೂರು ಕಡೆ ಪ್ರವಾಹ ಪರಿಸ್ಥಿತಿಯಿದೆ. ಹೀಗಾಗಿ ನಮ್ಮ ಮುಖಂಡರ ಸಭೆ ಕರೆದಿದ್ದೇವೆ. ದೇಶಪಾಂಡೆ, ಉಗ್ರಪ್ಪ, ಹೆಚ್.ಸಿ.ಮಹದೇವಪ್ಪ, ರಮಾನಾಥ್ ರೈ, ಬಿ.ಎಲ್.ಶಂಕರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಿದ್ದೇವೆ. ಐದು ತಂಡಗಳನ್ನ ಮಾಡಿ ಪರಿಶೀಲನೆಗೆ ಕಳಿಸುತ್ತೇವೆ. ಅತಿವೃಷ್ಠಿಯ ಪ್ರದೇಶಗಳಿಗೆ ಆ ತಂಡಗಳು ಭೇಟಿ ನೀಡಲಿದೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ರಾಮಲಿಂಗ ರೆಡ್ಡಿ, ಕೆಜೆ ಜಾರ್ಜ್, ಕೃಷ್ಣ ಬೈರೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

ABOUT THE AUTHOR

...view details