ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಗೆ, ಹೈಕೋರ್ಟ್ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಲು ಸಮನ್ಸ್ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಿದ್ದರಾಮಯ್ಯ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ದಿನೇಶ್ ಕುಮಾರ್ ಅವರ ಏಕಸದಸ್ಯ ಪೀಠ ಅಧೀನ ನ್ಯಾಯಾಲಯದ ವಿಚಾರಣೆಗೆ ನಾಲ್ಕು ವಾರಗಳ ತಡೆ ನೀಡಿ ಅರ್ಜಿ ಮುಂದೂಡಿಕೆ ಮಾಡಿದ್ದಾರೆ.
ಮೈಸೂರಿನ ವಿಜಯನಗರದಲ್ಲಿನ ಭೂಮಿ ಡಿನೋಟಿಫೈ ಮತ್ತು ಭೂ ಕಬಳಿಕೆ ಆರೋಪ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿಲ್ಲ ಎಂದು ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಜನಪ್ರತಿನಿಧಿ ವಿಶೇಷ ನ್ಯಾಯಾಲಯ ಬಿ ರಿಪೋರ್ಟ್ ತಿರಸ್ಕರಿಸಿ ಇಂದು ಖುದ್ದು ಜನಪ್ರತಿನಿಧಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿದ್ದರಾಮಯ್ಯಗೆ ಸೂಚನೆ ನೀಡಿತ್ತು. ಆದರೆ, ಹೈಕೋರ್ಟ್ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿರೋದು ಸಿದ್ದರಾಮಯ್ಯ ಅವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ
ಪ್ರಕರಣದ ವಿವರ:
1988ರಲ್ಲಿ ಮೈಸೂರಿನ ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಇನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ 535 ಎಕರೆ ಪ್ರದೇಶವನ್ನ ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ ವಶಪಡಿಸಿಕೊಂಡಿತ್ತು. 10 ವರ್ಷಗಳ ಬಳಿಕ ಬಡಾವಣೆ ರಚಿಸಿ ನಿವೇಶನ ಹಂಚಿಕೆಯಾದ ನಂತರ ಸಿದ್ದರಾಮಯ್ಯ ಅವರ ಆಪ್ತ ಪಾಪಣ್ಣ ಅವರು ತಮ್ಮ ಸಂಬಂಧಿಕರಿಗೆ ಸೇರಿದ 30 ಗುಂಟೆ ಜಮೀನನ್ನು ಕೈ ಬಿಡುವಂತೆ ಮುಡಾಗೆ ಅರ್ಜಿ ಸಲ್ಲಿಸಿದ್ದರು. ನಂತರ ಮುಡಾ ಜಾಗವನ್ನ ಡಿನೋಟಿಫೈ ಮಾಡಿತ್ತು.
ಡಿನೋಟಿಫೈ ಮಾಡಿದ್ದಾರೆ ಎನ್ನಲಾದ ಜಮೀನಿನಲ್ಲಿ ಪಾಪಣ್ಣ ಅವರ ಚಿಕ್ಕಮ್ಮ ಸಾಕಮ್ಮ ಅವರಿಗೆ ಸೇರಿದ್ದ 10 ಗುಂಟೆ ನಿವೇಶನವನ್ನು ಸಿದ್ದರಾಮಯ್ಯ ಖರೀದಿಸಿದ್ದಲ್ಲದೇ ಪಕ್ಕದ ಜಮೀನನ್ನು ಅತಿಕ್ರಮಿಸಿ ಮನೆ ಕಟ್ಟಿ ಬೇರೆಯವರಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ. ನೋಟಿಫೈ ಮಾಡಿದ ಜಾಗವನ್ನ ಸಿದ್ದರಾಮಯ್ಯ ಮಾರಾಟ ಮಾಡಿದ್ದಾರೆಂದು ಗಂಗರಾಜು ಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ಬಗ್ಗೆ ಕಳೆದ ವರ್ಷ 2018ರಲ್ಲಿ ನವೆಂಬರ್ 3ರಂದು ಪೊಲೀಸರು ನ್ಯಾಯಾಲಯಕ್ಕೆ ಬಿ ರೀಪೋರ್ಟ್ ಸಲ್ಲಿಕೆ ಮಾಡಿದ್ದರು. ಹೀಗಾಗಿ ಇದನ್ನ ಪ್ರಶ್ನಿಸಿ ಗಂಗರಾಜು ಕೋರ್ಟ್ ಮೊರೆ ಹೋಗಿದ್ದರು.