ಬೆಂಗಳೂರು :ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ಪ್ರವಾಸೋದ್ಯಮ ಇಲಾಖೆಯಲ್ಲಿ ಹೆಚ್ಚು ಗುತ್ತಿಗೆ ನೌಕರರು ಇರುವ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಗೊಂದಲದ ಹೇಳಿಕೆ ನೀಡಿದರು. ಕಾಂಟ್ರಾಕ್ಟ್ ಬೇಸಿಸ್ ಮೇಲೆ ಇದ್ರೆ ಓಡಿ ಬಂದು ಕೆಲಸ ಮಾಡುತ್ತಾರೆ, ಅವರಿಗೆ ಒಂದು ಭಯ ಇರುತ್ತದೆ. ಆದರೆ ಸರ್ಕಾರಿ ನೌಕರರಾದರೆ ಮಾಡೋಣ ಬಿಡಿ ಅಂತ ಉದಾಸೀನ ಮಾಡುತ್ತಾರೆ ಎಂದು ಹೇಳಿದರು.
ಜಂಗಲ್ ಲಾಡ್ಜ್ ಬಗ್ಗೆ..:ಜಂಗಲ್ ಲಾಡ್ಜ್ ರೆಸಾರ್ಟ್ (ಜೆಎಲ್ಆರ್) ಸಂಸ್ಥೆ ಈ ವರ್ಷ ಲಾಭದಾಯಕವಾಗಿದೆ. ಅಂದಿನ ಸಿಎಂ ದೇವರಾಜ್ ಅರಸ್ ಅವರು ಜಂಗಲ್ ಲಾಡ್ಜ್ ಸ್ಥಾಪನೆ ಮಾಡಿದರು. ನಂತರ ನೇಪಾಳದಿಂದ ಟೈಗರ್ ಟಾಪರ್ಸ್ ಅವರು ಸಂಸ್ಥೆಯನ್ನು ನೋಡಿ ಜಂಗಲ್ ಲಾಡ್ಜ್ ನಡೆಸುವ ಬಗ್ಗೆ ಚರ್ಚೆ ಮಾಡಿದ್ದರು. 1980ರಲ್ಲಿ ಟೈಗರ್ ಟಾಪರ್ಸ್ ಸಂಸ್ಥೆಯವರು ಮುಂದೆ ಬಂದರೂ, ಇದಾದ ಸುಮಾರು 14 ವರ್ಷಗಳ ನಂತರ ಅಂದರೆ 1994ರಲ್ಲಿ ಜಂಗಲ್ ಲಾಡ್ಜ್ ನಡೆಸದೇ ವಾಪಸ್ ಹೋದರು. ಬಳಿಕ ಸರ್ಕಾರವೇ ಜಂಗಲ್ ಲಾಡ್ಜ್ ರೆಸಾರ್ಟ್ಸ್ಗಳನ್ನು ಪ್ರಾರಂಭಸಲು ಮುಂದಾಯಿತು. ಇದೀಗ ಅರಣ್ಯ ಇಲಾಖೆಯಿಂದ ಜಾಗ ಗುರುತಿಸಿ ಪ್ರವಾಸೋದ್ಯಮ ಇಲಾಖೆಯಿಂದ ಜಂಗಲ್ ಲಾಡ್ಜ್ ರೆಸಾರ್ಟ್ಸ್ ಮಾಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆಯನ್ನು ಲಾಭದಾಯಕವಾಗಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಆದರೆ ಈ ವರ್ಷ 15 ಕೋಟಿ ಲಾಭ ಬಂದಿದೆ. ಈ ಒಂದು ಸಂಸ್ಥೆಯ ಮೂಲಕ ಮಕ್ಕಳಿಗೆ ಸ್ಕಾಲರ್ ಶಿಪ್, ಕಾರ್ಮಿಕರಿಗೆ ಭದ್ರತೆ ದೃಷ್ಟಿಯಿಂದ ಇನ್ಶೂರೆನ್ಸ್ ಮಾಡಲಾಗಿದೆ. ಮೊದಲು ನನಗೆ ಅರಣ್ಯ ಇಲಾಖೆ ಕೊಟ್ಟರು, ಬಳಿಕ ವಕ್ಫ್ ಬೋರ್ಡ್ ಕೊಟ್ಟರು, ಕೊನೆಯಲ್ಲಿ ಪ್ರವಾಸೋದ್ಯಮ ಇಲಾಖೆ ನೀಡಿದರು. ನನಗೆ ಸಿಕ್ಕ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಕೆಲಸ ಮಾಡಿದ್ದೇವೆ ಎಂದರು.