ಬೆಂಗಳೂರು:ಇಬ್ಬರ ವ್ಯಕ್ತಿಗಳ ನಡುವೆ ಆಗಿರುವ ಪಾಲುದಾರಿಕೆ ಒಪ್ಪಂದದ ವಿಸರ್ಜನೆ ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡಿರುವ ವೇಳೆ, ಒಬ್ಬ ಪಾಲುದಾರ ವ್ಯವಹಾರ ಮುಂದುವರೆಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದ ಪಾಲುದಾರರಲ್ಲಿ ಒಬ್ಬರಿಗೆ ವ್ಯವಹಾರ ಮುಂದುವರೆಸುವುದಕ್ಕೆ ಅವಕಾಶ ಕಲ್ಪಿಸಿದ್ದ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದ ಆದೇಶ ರದ್ದು ಪಡಿಸುವಂತೆ ಕೋರಿ ಬೆಂಗಳೂರು ನಗರದ ನಾಗಶೆಟ್ಟಿ ಹಳ್ಳಿ ನಿವಾಸಿ ನಾಗಲಿಂಗ ಎಂಬುವರು ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಸೂಚನೆ:ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ರೀತಿ ತಿಳಿಸಿದೆ. ಒಪ್ಪಂದದ ಒಬ್ಬ ಪಾಲುದಾರರು ವ್ಯವಹಾರ ಮುಂದುವರೆಸುವುದಕ್ಕೆ ನೀಡಿದ್ದ ಪರವಾನಿಗೆ ರದ್ದು ಪಡಿಸಿದೆ. ಅಲ್ಲದೆ, ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ರಾಮಚಂದ್ರ ಎಂಬುವರು ಪಾಲುದಾರಿಕೆ ಒಪ್ಪಂದದ ವಿಸರ್ಜನೆ ಕೋರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ದಾವೆ ವಿಚಾರಣಾ ಹಂತದಲ್ಲಿರುವಾಗ ಮದ್ಯ ಮಾರಾಟ ಪರವಾನಿಗೆ ನವೀಕರಿಸಿಕೊಂಡಿದ್ದಾರೆ. ಕಾನೂನಿನ ಪ್ರಕಾರ ಇದಕ್ಕೆ ಅವಕಾಶವಿಲ್ಲ.
ಅಲ್ಲದೆ, ಇಬ್ಬರು ಪಾಲುದಾರರ ನಡುವೆ ವಿವಾದವಿದ್ದಲ್ಲಿ ರಾಜ್ಯದ ಖಜಾನೆಗೆ ಹಾನಿಯಾಗುತ್ತದೆ ಎಂಬ ಕಾರಣ ನೀಡಿ ಅಬಕಾರಿ ಆಯುಕ್ತರು ಪರವಾನಿಗೆ ನವೀಕರಣ ಮಾಡುವುದು ಸರಿಯಲ್ಲ. ಅಲ್ಲದೆ, ರಾಜ್ಯ ಸರ್ಕಾರ ತನ್ನ ಸ್ವಂತ ಹಿತಾಸಕ್ತಿ ಗಣನೆಗೆ ತೆಗೆದುಕೊಳ್ಳಬಾರದು. ಹೀಗಾಗಿ ಅಬಕಾರಿ ಆಯುಕ್ತರು ನೀಡಿರುವ ಪರವಾನಿಗೆ ಸಮರ್ಥನೀಯವಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಒಪ್ಪಂದ ವಿಸರ್ಜನೆಗೆ ಹೂಡಿರುವ ದಾವೆಯಲ್ಲಿ ವಿಚಾರಣಾ ನ್ಯಾಯಾಲಯ ಯಾರ ಪರವಾಗಿ ಬರಲಿದೆಯೋ ಅದನ್ನು ಆಧರಿಸಿ ಪರವಾನಿಗೆ ನವೀಕರಣ ಮಾಡಬೇಕು. ಅಲ್ಲಿವರೆಗೂ ನವೀಕರಣವನ್ನು ಅಮಾನತ್ತಿನಲ್ಲಿಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ. ಜೊತೆಗೆ ಕೆಎಟಿ ಆದೇಶ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು ?:ಅರ್ಜಿದಾರರಾರ ನಾಗಲಿಂಗ ಮತ್ತು ಪ್ರತಿವಾದಿ ರಾಮಚಂದ್ರ ಪಾಲುದಾರರಾಗಿ ಮೆಸೆಸ್ ಮಾರ್ತಾಂಡ ಎಂಟರ್ ಪ್ರೈಸ್‌ಸ್‌ನ್ನು ಪ್ರಾರಂಭಿಸಿದ್ದರು. ಇದೇ ಹೆಸರಿನಲ್ಲಿ ಮಾರ್ತಾಂಡ ವೈನ್ಸ್ ಎಂಬ ಹೆಸರಿನಲ್ಲಿ ಮದ್ಯ ಮಾರಾಟ ಪರವಾನಿಗೆ ಪಡೆದು ವ್ಯವಹಾರ ನಡೆಸುತ್ತಿದ್ದರು. ಇಬ್ಬರ ನಡುವೆ ವಿವಾದ ಉಂಟಾಗಿತ್ತು.
ಈ ನಡುವೆ ಪಾಲುದಾರರಲ್ಲಿ ಒಬ್ಬರಾದ ರಾಮಚಂದ್ರ ಮದ್ಯ ಮಾರಾಟ ಪರವಾನಿಗೆ ನವೀಕರಿಸಿಕೊಂಡು ವ್ಯವಹಾರ ಮುಂದುವರೆಸಿದ್ದರು. ಇದರಿಂದ ಮತ್ತೊಬ್ಬ ಪಾಲುದಾರ (ಅರ್ಜಿದಾರರು) ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ(ಕೆಎಟಿ)ದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧಿಕರಣ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಾಗಲಿಂಗ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರ ನಾಗಲಿಂಗ ಮತ್ತು ಪ್ರತಿವಾದಿ ರಾಮಚಂದ್ರ ಪಾಲದಾರರಾಗಿ ಮಾರ್ತಾಂಡ ಎಂಟರ್ ಪ್ರೈಸಸ್ ಎಂಬ ಸಂಸ್ಥೆ ಕಟ್ಟಿದ್ದು, ಮದ್ಯ ಮಾರಾಟ ವ್ಯವಹಾರ ಮಾಡುತ್ತಿದ್ದರು. ಇದೀಗ ಇಬ್ಬರ ನಡುವೆ ವಿವಾದವುಂಟಾಗಿದೆ. ಆದರೆ, ಅರ್ಜಿದಾರರನ್ನು ಹೊರತು ಪಡಿಸಿ ಪ್ರತಿವಾದಿ ಮದ್ಯ ಮಾರಾಟಕ್ಕೆ ಪರವಾನಿಗೆ ನವೀಕರಿಸಿಕೊಂಡು ವ್ಯವಹಾರ ಮುಂದುವರೆಸಿದ್ದಾರೆ. ಅದಕ್ಕೆ ಅವಕಾಶವಿಲ್ಲ ಎಂದರು.
ಅಲ್ಲದೆ, ರಾಮಚಂದ್ರ ಅವರು ಅರ್ಜಿದಾರರ ಸಹಿ ಮತ್ತು ಫೋಟೋಗಳನ್ನು ಪಡೆದುಕೊಳ್ಳುವಲ್ಲಿ ಮೋಸದ ಚಟುವಟಿಕೆಗಳನ್ನು ಮಾಡಿದ್ದಾರೆ. ಫೇಸ್ಬುಕ್ನಿಂದ ಫೋಟೋಗಳನ್ನು ಪಡೆದುಕೊಂಡಿದ್ದಾರೆ. ಇಬ್ಬರ ನಡುವಿನ ವಿವಾದ ಬಗೆಹರಿಯುವುದಕ್ಕೂ ಮುನ್ನ ಮದ್ಯ ಮಾರಾಟ ಪರವಾನಿಗೆ ನವೀಕರಣ ಮಾಡಿಸಿಕೊಂಡಿದ್ದಾರೆ. ಅದನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಭಾರತೀಯ ಪಾಲುದಾರಿಕೆ ಕಾಯ್ದೆ:ರಾಮಚಂದ್ರ ಅವರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಒಪ್ಪಂದಲ್ಲಿ ಭಾರತೀಯ ಪಾಲುದಾರಿಕೆ ಕಾಯಿದೆ ವಿರುದ್ಧ ಮತ್ತು ಒಪ್ಪಂದದ ಹಿತಾಸಕ್ತಿಗೆ ವಿರುದ್ಧವಾದ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ನಮ್ಮ ಕಕ್ಷಿದಾರರು ಪಾಲುದಾರಿಕೆ ರದ್ದು ಮಾಡುವಂತೆ ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಅಲ್ಲದೆ, ಒಪ್ಪಂದದ ಪ್ರಕಾರ ರಾಮಚಂದ್ರ ಅವರು ವ್ಯವಸ್ಥಾಪಕರಾಗಿದ್ದಾರೆ. ಸಂಸ್ಥೆಯ ಆಡಳಿತ ಮತ್ತು ನಿರ್ವಹಣೆ, ದೈನಂದಿನ ವ್ಯವಹಾರಗಳ ಉಸ್ತುವಾರಿ ವಹಿಸಿದ್ದಾರೆ. ಉಳಿದ ಪಾಲುದಾರರು ತಾವು ಮಾಡುವ ಕೆಲಸಕ್ಕೆ ಮಾಸಿಕ ವೇತನಕ್ಕೆ ಮಾತ್ರ ಅರ್ಹರಾಗಿರುತ್ತಾರೆ. ಹೀಗಾಗಿ ನಮ್ಮ ಕಕ್ಷಿದಾರರು ಪರವಾನಿಗೆಯನ್ನು ನವೀಕರಿಸಿ ವ್ಯವಹಾರ ಮುಂದುವರೆಸುವುದಕ್ಕೆ ಅರ್ಹರಾಗಿದ್ದಾರೆ. ಜತೆಗೆ, ಅರ್ಜಿದಾರರು ನಮ್ಮ ಕಕ್ಷಿದಾರರಿಗೆ ಕಿರುಕುಳ ನೀಡುವುದು ಮತ್ತು ದೊಡ್ಡ ಮಟ್ಟದ ಹಣ ಪಡೆಯಲು ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ:ಡ್ರಗ್ಸ್ ಪ್ರಕರಣ: ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು