ಬೆಂಗಳೂರು: ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆ(ಎನ್ಡಿಪಿಎಸ್)ಯಲ್ಲಿ ಹೊರ ರಾಜ್ಯದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದಲ್ಲಿ ಪ್ರಕರಣದ ವಿಚಾರಣೆಗೆ ಅಡ್ಡಿಯಾಗಲಿದೆ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್ ಒಡಿಶಾ ಮೂಲದ ಇಬ್ಬರು ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.
ಒಡಿಶಾ ರಾಜ್ಯದ ಗಜಪತಿ ಜಿಲ್ಲೆ ಮೋಹನ ತಾಲೂಕಿನ ಸುನೀಲ್ ಬೀರಾ ಮತ್ತು ರೋಹಿತ್ ಬೀರ್ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾ ಕೆ ನಟರಾಜನ್ ಅವರಿದ್ದ ನ್ಯಾಯಪೀಠ ಜಾಮೀನು ನೀಡಲು ನಿರಾಕರಿಸಿದೆ. ಅರ್ಜಿದಾರರ ಪರ ವಕೀಲರು, ಆರೋಪಿಗಳು ಕಳೆದ ಆರೂವರೆ ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಪ್ರಕರಣದ ಕುರಿತ ತನಿಖೆ ಮುಗಿದಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ. ನ್ಯಾಯಾಲಯ ವಿಧಿಸುವ ಷರತ್ತುಗಳನ್ನು ಪಾಲಿಸುವುದಕ್ಕೆ ಸಿದ್ದರಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರದ ಪರ ವಕೀಲರು, ಅರ್ಜಿದಾರರ ಒಡಿಶಾ ರಾಜ್ಯದವರಾಗಿದ್ದಾರೆ. ಅವರಿಗೆ ಜಾಮೀನು ಮಂಜೂರು ಮಾಡಿದಲ್ಲಿ ಪ್ರಕರಣದ ವಿಚಾರಣೆಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಜಾಮೀನು ಪಡೆದ ಬಳಿಕ ನಾಪತ್ತೆಯಾದಲ್ಲಿ ವಿಚಾರಣೆಗೆ ಹಾಜರು ಪಡಿಸಲು ಸಾಧ್ಯವಿರುವುದಿಲ್ಲ. ಹೀಗಾಗಿ ಜಾಮೀನು ಮಂಜೂರು ಮಾಡದಂತೆ ಮನವಿ ಮಾಡಿದರು.