ಬೆಂಗಳೂರು:ವಿಧಾನಸಭೆ ಚುನಾವಣೆಯ ನಂತರ ನಡೆದ ರಾಜಕೀಯ ಘಟನೆಗಳ ಹಿನ್ನೆಲೆಯಲ್ಲಿ ಹಳೆ ಘಟಕವನ್ನು ವಿಸರ್ಜನೆ ಮಾಡಿ ಇಂದು ಹೊಸ ಸಮಿತಿ ರಚನೆ ಮಾಡಲಾಗಿದೆ. ಪಕ್ಷಕ್ಕೆ ಪುನಶ್ಚೇತನ ತುಂಬಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಜವಾಬ್ದಾರಿ ನಿರ್ವಹಣೆ ಮಾಡುವುದಾಗಿ ಮಾಜಿ ಸಿಎಂ, ಜೆಡಿಎಸ್ನ ನೂತನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಗುರುವಾರ ನಡೆದ ಕೋರ್ ಕಮಿಟಿ ಸಭೆ ನಂತರ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರಿಂದ ನೇಮಕಾತಿ ಪತ್ರ ಪಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರ್ ಕಮಿಟಿ ಹಾಗೂ 18 ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು. ಎಲ್ಲರ ಸಹಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿಜಯದಶಮಿ ಹಬ್ಬದ ನಂತರ ಮತ್ತೊಂದು ಸಭೆ ನಡೆಸಿ, ಪಕ್ಷ ಸಂಘಟನೆ ಹಾಗೂ ರಾಜ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದರು. ಕುಟುಂಬ ರಾಜಕಾರಣದ ಕುರಿತಾದ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ, ಕಾಂಗ್ರೆಸ್ದೂ ಸಹ ಕುಟುಂಬ ಮೂಲ ಇಲ್ಲವೇ?, ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ವಿದ್ಯುತ್ ಕೊರತೆ ವಿಚಾರವಾಗಿ ಈ ಸರ್ಕಾರದ ಲೋಪದೋಷಗಳೇನು?. ಹಿಂದೆ ಸದನದಲ್ಲಿ ಮಾತನಾಡುವಾಗ ತಡೆ ಮಾಡಿದರು. ಇಂಧನ ಇಲಾಖೆಯಲ್ಲಿ ಏನೇನು ಲೂಟಿ ಆಗುತ್ತಿದೆ. ಇದೆಲ್ಲದರ ಬಗ್ಗೆ ಅಂಕಿ-ಅಂಶಗಳ ಸಮೇತ ನಾಳೆ ಹೇಳುತ್ತೇನೆ ಎಂದರು.
ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಮಾತನಾಡಿ, ಇವತ್ತು ಕೋರ್ ಕಮಿಟಿ ಸಭೆ ಸೇರಿ ಮತ್ತೆ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆ. ಈ ಹಿಂದೆಯೂ ಅವರು ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ರಾಜಕೀಯದಲ್ಲಿ ನಮ್ಮ ಪಕ್ಷ ಈಗ ಕೆಳಗೆ ಬಂದಿದೆ. ಬೀದರ್ನಿಂದ ಚಾಮರಾಜನಗರದವರೆಗೆ ಪಕ್ಷಕ್ಕೆ ಶಕ್ತಿ ತುಂಬಲು ಕುಮಾರಸ್ವಾಮಿ ಅವರು ಈಗ ಬೇಕು. ಹೀಗಾಗಿ ಪಕ್ಷ ಅವರಿಗೆ ಒಂದು ಜವಾಬ್ದಾರಿ ಕೊಟ್ಟಿದೆ ಎಂದು ತಿಳಿಸಿದರು.
ರಾಜ್ಯ ಕಾರ್ಯಕಾರಿ ಸಮಿತಿ ವಿಸರ್ಜನೆ:ಸಿ.ಎಂ.ಇಬ್ರಾಹಿಂ ಸೇರಿದಂತೆ ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಆದೇಶಿಸಿದ್ದಾರೆ. ಇಂದು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯ ನಂತರ ದೇವೇಗೌಡರು ಮಾಧ್ಯಮಗೋಷ್ಠಿ ನಡೆಸಿ, ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ವಿಸರ್ಜಿಸಿದ ನಿರ್ಧಾರ ಪ್ರಕಟಿಸಿದರು.
ಶಾಸಕಾಂಗ ಪಕ್ಷದ ನಾಯಕರಾಗಿರುವ ಕುಮಾರಸ್ವಾಮಿ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಸಲು ನಾವೆಲ್ಲ ಒಟ್ಟಾಗಿ ಸೇರಿ ಸರ್ವಾನುಮತದಿಂದ ತೀರ್ಮಾನಿಸಿದ್ದೇವೆ. ಹಾಗೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ವಿಸರ್ಜಿಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ:ಜೆಡಿಎಸ್ ನೂತನ ಅಧ್ಯಕ್ಷರಾಗಿ ಕುಮಾರಸ್ವಾಮಿ ನೇಮಕ.. ಸಿ ಎಂ ಇಬ್ರಾಹಿಂ ಸೇರಿ ರಾಜ್ಯ ಕಾರ್ಯಕಾರಿ ಸಮಿತಿ ವಿಸರ್ಜನೆ