ಬೆಂಗಳೂರು: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಅಪರಿಚಿತ ವ್ಯಕ್ತಿ ಭೇಟಿಯಾದ ಮಾಹಿತಿ ನೀಡಿದ್ದೇನೆಯೇ ಹೊರತು ಅವ್ಯವಹಾರದ ದಾಖಲೆ ನನ್ನ ಬಳಿ ಇದೆ ಎಂದು ಹೇಳಿಲ್ಲ. ಈ ವಿಷಯದಲ್ಲಿ ಅನಗತ್ಯವಾಗಿ ನನ್ನ ಹೆಸರು ತಳುಕು ಹಾಕಬಾರದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶಾಸಕ ಮುರುಗೇಶ್ ನಿರಾಣಿ ಮನವಿ ಮಾಡಿದ್ದಾರೆ.
ಕೋವಿಡ್-19 ಗೆ ಸಂಬಂಧಿಸಿದಂತೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬರು ನನ್ನ ಕಚೇರಿಗೆ ಬಂದು ನನಗೆ ತಿಳಿಸಿದ್ದರು. 125 ಪುಟಗಳ ದಾಖಲೆಗಳ ಪೆನ್ ಡ್ರೈವ್ ನಲ್ಲಿ ಇದೆ. ಆದರೆ ಪ್ರಿಂಟ್ ಔಟ್ ಬರುತ್ತಿಲ್ಲ ಎಂದು ನನಗೆ ಹೇಳಿದ್ದರು. ಈ ವಿಷಯವನ್ನು ನಾನು ಸಾಂದರ್ಭಿಕವಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಹೇಳಿದ್ದೆ ಅಷ್ಟೇ. ನಂತರ ಆ ವ್ಯಕ್ತಿ ನನಗೆ ಸಿಕ್ಕಿಲ್ಲ, ಆತನ ಪರಿಚಯವೂ ನನಗಿಲ್ಲ, ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಬೇಡ ಹಾಗೂ ನನ್ನ ಹೆಸರನ್ನು ಅನಾವಶ್ಯಕವಾಗಿ ಎಳೆದು ತರುವುದು ಬೇಡ ಎಂದು ಶಾಸಕ ಮುರುಗೇಶ್ ನಿರಾಣಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.