ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಚುನಾವಣೆಗೆ ನಿಲ್ಲುವ ವಿಚಾರವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಆದರೆ ನನಗೆ ಈಗಾಗಲೇ ಗೋವಿಂದರಾಜನಗರ ಕ್ಷೇತ್ರವಿದೆ, ಕೆಲಸ ಮಾಡಲು ಚಾಮರಾಜನಗರ ಕ್ಷೇತ್ರವಿದೆ. ಹಾಗಾಗಿ ಮತ್ತೊಂದು ಕ್ಷೇತ್ರದ ಅಗತ್ಯ ನನಗಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ, ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲ್ಲ, ಕ್ಷೇತ್ರ ಬದಲಾವಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧೆ ವಿಚಾರ ನಿರಾಧಾರ. ಮಾಧ್ಯಮಗಳು ಯಾಕೆ ನನ್ನ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸ್ತೀರಿ? ಶಕ್ತಿಗಿಂತ ಅದೃಷ್ಟ ಮುಖ್ಯ, ಅದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ರಾಜ್ಯದಲ್ಲಿ ಒಬ್ಬ ಸರ್ವೋಚ್ಛ ನಾಯಕರು, ಅವರ ವಿರುದ್ಧ ಸ್ಪರ್ಧೆ ಮಾಡುವ ಬಗ್ಗೆ ತೀರ್ಮಾನ ಮಾಡೋದು ಹೈಕಮಾಂಡ್ಗೆ ಬಿಟ್ಟಿದ್ದು. ನಾನು ಬೇರೆಯವರ ತರಹ ಏನೂ ಮಾತನಾಡಲ್ಲ. ಅದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಈಗಾಗಲೇ ನನಗೆ ನನ್ನ ಕ್ಷೇತ್ರ ಇದೆ. ಗೋವಿಂದರಾಜನಗರ ಪ್ರತಿನಿಧಿಸುತ್ತಿದ್ದೇನೆ. ಅದಕ್ಕೂ ಮೀರಿ ಚಾಮರಾಜನಗರಕ್ಕೆ ಹೋಗಿ ಅಲ್ಲಿ ನೀವು ಕೆಲಸ ಮಾಡಿ ಎಂದು ನನಗೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಹೀಗಿರುವಾಗ ನನ್ನನ್ನು ಯಾಕೆ ವರುಣಾಗೆ ತಂದು ಹಾಕ್ತೀರಿ..? ಆ ರೀತಿಯ ಗೊಂದಲಗಳು ಬೇಡ, ನಮ್ಮ ಪಕ್ಷದಲ್ಲಿ ಸಾಕಷ್ಟು ಅಭ್ಯರ್ಥಿಗಳು ಇದ್ದಾರೆ. ಸಿದ್ದರಾಮಯ್ಯ ಎದುರು ತಕ್ಕ ಅಭ್ಯರ್ಥಿಯನ್ನು ನಮ್ಮ ಪಾರ್ಟಿ ಹಾಕುತ್ತದೆ ಎಂದರು.
ಯಡಿಯೂರಪ್ಪಗೆ 80 ವರ್ಷ, ನನಗೆ 72 ವರ್ಷ ನನಗೆ ಇನ್ನೊಂದು ಅವಕಾಶ ಸಿಗಬಹುದು, ಸಿಗದೆಯೂ ಇರಬಹುದು. ಚಾಮರಾಜನಗರಕ್ಕೆ ಹೋಗಿ ಅಲ್ಲಿ ಕೆಲಸ ಶುರು ಮಾಡಿ ಎಂದು ನನಗೆ ಹೈಕಮಾಂಡ್ ಹೇಳಿದೆ. ಹೀಗಾಗಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ನಾನು ಅಲ್ಲಿ ಕೆಲಸ ಮಾಡುತ್ತೇನೆ. ನನಗೆ ಯಾಕೆ ಬೇರೆ ಕ್ಷೇತ್ರ, ನನಗೆ ಗೋವಿಂದರಾಜನಗರ ಕ್ಷೇತ್ರವೇ ಇದೆ. ನಾನು ಎಲ್ಲಾದರೂ ನಿಲ್ಲಬೇಕು ಅಂದರೆ ಬೇರೆ ಯಾರು ಬೇಡ ಅನ್ನೋದಿಲ್ಲ, ಹನೂರಿನಲ್ಲಿ ನಿಲ್ಲಲು ಮುಂದಾದರೂ ವಿರೋಧಿಸಲ್ಲ, ಆದರೆ ಅಮಿತ್ ಶಾ ಅವರು ನನ್ನ ಕರೆದು ಮಾತನಾಡಿ ಕೆಲ ಜವಬ್ದಾರಿ ಕೊಟ್ಟಿದ್ದಾರೆ. ಆ ಜವಾಬ್ದಾರಿಯನ್ನು ನಾನು ಅಲ್ಲಿ ನಿರ್ವಹಣೆ ಮಾಡುತ್ತೇನೆ. ಹನೂರಿನಲ್ಲಿ ನಾನು ಹಿಂದೆಯೇ ಸೆಟಲ್ ಆಗಿದ್ದೆ. ಇವಾಗ ಅಲ್ಲಿ ಯಡಿಯೂರಪ್ಪ ಯಾರಿಗೆ ಟಿಕೆಟ್ ಕೊಡಿಸುತ್ತಾರೆ ಎಂದು ಅವರನ್ನೇ ಕೇಳಿ, ಆದರೆ ನನಗೆ ಗೋವಿಂದರಾಜನಗರವೇ ಇದೆ ಎಂದರು.