ಬೆಂಗಳೂರು:''ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟ ಮುಖ್ಯಮಂತ್ರಿ ಎಂದು ಹೇಳಿದ್ದೆ. ಆದರೆ ಲಿಂಗಾಯತರೆಲ್ಲ ಭ್ರಷ್ಟರು ಎಂದು ನಾನು ಹೇಳಿಲ್ಲ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತರ ಬಗ್ಗೆ ನೀಡಿದ್ದ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಸುದ್ದಿ ಮಾಧ್ಯಮವೊಂದರ ಜೊತೆಗೆ ಮಾತನಾಡಿದ್ದ ಸಿದ್ದರಾಮಯ್ಯ, ಬಿಜೆಪಿಯ ಲಿಂಗಾಯತ ಸಿಎಂ ಅಸ್ತ್ರದ ಬಗ್ಗೆ ತಿರುಗೇಟು ನೀಡಿದ್ದರು. "ರಾಜ್ಯದಲ್ಲಿ ಈಗಾಗಲೇ ಲಿಂಗಾಯತ ಮುಖ್ಯಮಂತ್ರಿ ಇದ್ದಾರೆ. ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿದ್ದಾರೆ" ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರ ಈ ಹೇಳಿಕೆಯು ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿಯು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿತ್ತು.
ಈ ವಿವಾದದ ಕುರಿತು ಟ್ವೀಟ್ನಲ್ಲಿ ಸ್ಪಷ್ಟನೆ ನೀಡುತ್ತ ವಿಡಿಯೋ ಹಂಚಿಕೊಂಡಿರುವ ಸಿದ್ದರಾಮಯ್ಯ, "ಬಿಜೆಪಿಯವರು ನನ್ನ ಹೇಳಿಕೆಯ ವಿಡಿಯೋವನ್ನು ತಮಗೆ ಬೇಕಾದಂತೆ ತಿರುಚಿದ್ದಾರೆ" ಎಂದು ಹೇಳಿದ್ದಾರೆ. ಬಿಜೆಪಿಯವರು ನನ್ನ ಹೇಳಿಕೆಯ ವಿಡಿಯೋವನ್ನು ಕಟ್ ಮಾಡಿ ತಮಗೆ ಬೇಕಾದಂತೆ ಎಡಿಟ್ ಮಾಡಿದ್ದಾರೆ. ಲಿಂಗಾಯತರೆಲ್ಲ ಭ್ರಷ್ಟರೆಂದು ಹೇಳಿದ್ದೇನೆ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣಾ ಲಾಭ ಪಡೆಯುವ ಬಿಜೆಪಿಯ ಇಂತಹ ಷಡ್ಯಂತ್ರಗಳಿಗೆ ನಾಡಿನ ಲಿಂಗಾಯತ ಸಮುದಾಯ ಕಿವಿಗೊಡುವುದಿಲ್ಲ ಎಂಬ ನಂಬಿಕೆ ನನಗಿದೆ. ಲಿಂಗಾಯತರೆಲ್ಲ ಭ್ರಷ್ಟರು ಎಂದು ನಾನು ಹೇಳಿಲ್ಲ. ಇದೆಲ್ಲ ಬಿಜೆಪಿ ಸೃಷ್ಟಿಸಿದ ಸುಳ್ಳು ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದಲ್ಲಿ ವಿರೇಂದ್ರ ಪಾಟೀಲ್, ನಿಜಲಿಂಗಪ್ಪ, ಜೆ ಎಚ್ ಪಟೇಲ್, ಬಿ.ಡಿ ಜತ್ತಿ, ಎಸ್ಆರ್ ಕಂಠಿ ಅವರಂತಹ ಅನೇಕ ಪ್ರಾಮಾಣಿಕ ಮುಖ್ಯಮಂತ್ರಿಗಳನ್ನು ಲಿಂಗಾಯತ ಸಮುದಾಯ ನೀಡಿದೆ. ಈ ಎಲ್ಲ ನಾಯಕರ ಬಗೆಗೆ ನನಗೆ ವಿಶೇಷ ಪ್ರೀತಿ, ಅಭಿಮಾನವಿದೆ. ವೀರಶೈವ ಲಿಂಗಾಯತರ ಬಗ್ಗೆ ನಮಗೆ ಗೌರವ ಇರುವುದರಿಂದಲೇ ಅವರಿಗೆ ಹೆಚ್ಚು ಟಿಕೆಟ್ ನೀಡಿದ್ದೇವೆ. ಕಳೆದ ಬಾರಿ 47 ಲಿಂಗಾಯತ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಅಂದರೆ ಸುಮಾರು 52 - 53 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದ್ದೇವೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.