ಬೆಂಗಳೂರು: ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಕರೆ ನೀಡಿರುವ 'ನಾನೊಬ್ಬ ಕರಸೇವಕ, ನನ್ನನ್ನೂ ಬಂಧಿಸಿ' ಅಭಿಯಾನದಡಿ ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
ಕೇಸರಿ ಪಂಚೆ ಉಟ್ಟು, ಚಪ್ಪಲಿ ಹಾಕದೇ ಅಶೋಕ್ ಅಭಿಯಾನ ನಡೆಸಿದ್ದು, "ಕ್ರಿ.ಶ 1992 ಡಿಸೆಂಬರ್ 2ರ ರಾಮಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದೆ. ನನ್ನನ್ನೂ ಅರೆಸ್ಟ್ ಮಾಡಿ" ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂಭಾಗ ಪೋಸ್ಟರ್ ಹಿಡಿದು ಧರಣಿ ನಡೆಸಿದರು. ಆರ್.ಅಶೋಕ್ ಅವರಿಗೆ ಸಂಸದ ಪಿ.ಸಿ.ಮೋಹನ್, ಪರಿಷತ್ ಪ್ರತಿಪಕ್ಷ ಸಚೇತಕ ರವಿಕುಮಾರ್ ಸಾಥ್ ನೀಡಿದರು. ಇದೇ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, "ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿ ಸುಳ್ಳು ಹೇಳಿದ್ದು, ನೈತಿಕತೆ ದೃಷ್ಟಿಯಿಂದ ಕೂಡಲೇ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಕೈತಪ್ಪಿ, ಕಾಣದ ಕೈಗಳು ದಿಕ್ಕು ತಪ್ಪಿಸುತ್ತಿವೆ. ಇಲ್ಲವೆಂದರೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಕೆಣಕಲು ಉದ್ದೇಶಪೂರ್ವಕವಾಗಿ ಈ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ. ಇವೆರಡರಲ್ಲಿ ಯಾವುದು ಸತ್ಯವಾದರೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದರ್ಥ. ಆದ್ದರಿಂದ ಕೂಡಲೇ ತಮ್ಮ ತಪ್ಪನ್ನು ಒಪ್ಪಿಕೊಂಡು ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡಬೇಕು. ರಾಜ್ಯದ ಜನರಲ್ಲಿ ಕ್ಷಮಾಪಣೆ ಕೋರಿ ರಾಜೀನಾಮೆ ನೀಡಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಒಬ್ಬ ಸಮರ್ಥ ಮುಖ್ಯಮಂತ್ರಿಗೆ ದಾರಿ ಮಾಡಿಕೊಡಬೇಕು" ಎಂದು ಆಗ್ರಹಿಸಿದರು.