ಬೆಂಗಳೂರು: ಕೊರೊನಾ ಸೋಂಕು ತಗುಲಿ ಮೃತಪಟ್ಟ ಬಳಿಕ ಪಾರ್ಥಿವ ಶರೀರವನ್ನು ನಿರ್ವಹಣೆ ಮಾಡುವ ಕುರಿತು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಸರ್ಕಾರ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಆ ಪ್ರಕಾರ ಐಸೋಲೇಷನ್ ಕೇಂದ್ರದಲ್ಲಿ ಸೋಂಕಿತ ವ್ಯಕ್ತಿ ಮೃತಪಟ್ಟ ಬಳಿಕ ಅಂತ್ಯಕ್ರಿಯೆ ನೆರವೇರಿಸುವವರೆಗೂ ಕಠಿಣ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಒಂದು ವೇಳೆ, ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿದರೆ ಆರೋಪಿತರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನೂ ಜರುಗಿಸಲಾಗುತ್ತದೆ.
ಮೃತ ದೇಹ ಮುಟ್ಟೋ ಹಾಗಿಲ್ಲ..
ಕೊರೊನಾ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಲ್ಲಿ ಆ ಮೃತದೇಹದ ಅಂತ್ಯಸಂಸ್ಕಾರವನ್ನು ಸರ್ಕಾರವೇ ಮಾಡಲಿದೆ. ಅರ್ಥಾತ್ ಮೃತರ ಸಂಬಂಧಿಕರ ಸಮ್ಮುಖದಲ್ಲಿ ಜಿಲ್ಲಾಡಳಿತವೇ ಅಂತ್ಯಸಂಸ್ಕಾರ ನೆರವೇರಿಸಲಿದೆ. ಈ ವೇಳೆ, ಮೃತರ ಸಂಬಂಧಿಕರೂ ಸೇರಿದಂತೆ ಯಾರೊಬ್ಬರಿಗೂ ಮೃತ ದೇಹ ಮುಟ್ಟುವುದಕ್ಕಾಗಲಿ ಅಥವಾ ಹತ್ತಿರದಿಂದ, ಅತ್ಯಂತ ಹತ್ತಿರದಿಂದ ನೋಡುವುದಕ್ಕಾಗಲಿ ಅವಕಾಶವಿಲ್ಲ.
ದಾಖಲೆಗಳ ಪ್ರಕಾರ ಮೃತದೇಹ ಹಸ್ತಾಂತರ, ವಾಸ್ತವವಾಗಿ ಅಲ್ಲ..!
ಸರ್ಕಾರದ ನಿಯಮಗಳಂತೆ ಜಿಲ್ಲಾಡಳಿತ ವಿಪತ್ತು ನಿರ್ವಹಣಾ ನಿಯಮಗಳ ಅನುಸಾರ ಕೊರೊನಾ ವೈರಸ್ ಸೋಂಕು ತಗುಲಿ ವ್ಯಕ್ತಿ ಮೃತಪಟ್ಟಾಗ ಈ ವಿಚಾರವನ್ನು ಸಂಬಂಧಿಕರಿಗೆ ತುರ್ತಾಗಿ ತಲುಪಿಸಬೇಕು. ಈ ವೇಳೆ, ಮೃತ ದೇಹವನ್ನು ಸಂಬಂಧಿಕರು ಗುರುತಿಸಿದ ಬಳಿಕ ಅಗತ್ಯತೆಗಳನ್ನು ಪೂರೈಸಿ ಪಾರ್ಥಿವ ಶರೀರ ಹಸ್ತಾಂತರಿಸಬೇಕು. ದಾಖಲೆಗಳ ಪ್ರಕಾರ ಮೃತದೇಹ ಸಂಬಂಧಿಗಳಿಗೆ ಹಸ್ತಾಂತರವಾಗುತ್ತದೆಯೇ ವಿನಃ ವಾಸ್ತವವಾಗಿ ಅಲ್ಲ. ಈ ವೇಳೆ ನಿಯೋಜಿತ ವೈದ್ಯಕೀಯ ಸಿಬ್ಬಂದಿ ಮೃತದೇಹ ಪಡೆದುಕೊಂಡು ಅಂತ್ಯಸಂಸ್ಕಾರವನ್ನೂ ನೆರವೇರಿಸುತ್ತಾರೆ.
ವ್ಯಕ್ತಿ ಮೃತಪಟ್ಟ ಬಳಿಕ ಪಾರ್ಥಿವ ಶರೀರವನ್ನು ಸಂಬಂಧಿಕರ ಪರವಾಗಿ ವಶಕ್ಕೆ ತೆಗೆದುಕೊಳ್ಳವ ನಿಯೋಜಿತ ಸಿಬ್ಬಂದಿ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್‌ಮೆಂಟ್) ಕಿಟ್ ಅನ್ನು ಧರಿಸಿರಬೇಕು. ಐಸೋಲೇಷನ್ ಕೇಂದ್ರದಿಂದ ಶವಾಗಾರಕ್ಕೆ, ನಂತರ ಅಂತ್ಯಕ್ರಿಯೆ ಸ್ಥಳಕ್ಕೆ ಸಾಗಿಸುವವರೆಗೆ, ಕೊನೆಗೆ ಅಂತ್ಯಕ್ರಿಯೆ ಮುಗಿಯುವರೆಗೂ ಇವರು ಇದೇ ಸುರಕ್ಷತೆಯಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ನಿಯೋಜಿತ ಸಿಬ್ಬಂದಿ ಮೃತ ದೇಹವನ್ನು ಬರಿಗೈನಿಂದ ಮುಟ್ಟುವಂತಿಲ್ಲ. ಬದಲಿಗೆ ಕೈಗಳಿಗೆ ಸೂಕ್ತ ಗ್ಲೌಸ್‌ಗಳನ್ನು ಧರಿಸಿರಬೇಕು. ಅಂತ್ಯಕ್ರಿಯೆ ಮುಗಿಸಿದ ನಂತರ ಈ ಗ್ಲೌಸ್ ಹಾಗೂ ಪಿಪಿಇ ಕಿಟ್‌ನ್ನು ಜೈವಿಕ ತ್ಯಾಜ್ಯದ ರೀತಿಯಲ್ಲಿ ನಿರ್ವಹಣೆ ಮಾಡಬೇಕು.
ಮೃತ ದೇಹಕ್ಕೆ ಇರುತ್ತೆ ಪ್ರತ್ಯೇಕ ಶೈತ್ಯಾಗಾರ..!
ಮೃತ ದೇಹ ಸ್ಥಳಾಂತರಿಸುವ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಅಥವಾ ವಾಹನಕ್ಕೆ ಮತ್ತು ವೈದ್ಯಕೀಯ ಪರಿಕರಗಳಿಗೆ ವೈರಸ್ ತಾಕದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಮೃತದೇಹ ಸಾಗಿಸುವ ವೇಳೆ ಅದರಿಂದ ರಕ್ತ ಅಥವಾ ಯಾವುದೇ ರೀತಿಯ ದ್ರವ ಹೊರಬರದಂತೆ ದೇಹವನ್ನು ಬ್ಯಾಗ್ ಕವರ್ನಿಂದ ಸೀಲ್ ಮಾಡಿರಬೇಕು. ಮೃತ ದೇಹ ಕೊಡಲು ಅಥವಾ ಪಡೆದುಕೊಳ್ಳುವಲ್ಲಿ ವಿಳಂಬವಾದಲ್ಲಿ ಪಾರ್ಥಿವ ಶರೀರವನ್ನು 2 ರಿಂದ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಪ್ರತ್ಯೇಕ ಶೈತ್ಯಾಗಾರದಲ್ಲಿ ಇರಿಸಬೇಕು. ವಾರಸುದಾರರು ಬರದಿದ್ದಲ್ಲಿ ಜಿಲ್ಲಾಡಳಿತವೇ ಅಂತ್ಯಕ್ರಿಯೆ ನೆರವೇರಿಸಬೇಕು.
ನಿರ್ಬಂಧಿತ ಧಾರ್ಮಿಕ ಕ್ರಿಯೆಗಳ ಮೂಲಕ ಅಂತ್ಯಸಂಸ್ಕಾರ..!
ಅಂತ್ಯಕ್ರಿಯೆಯನ್ನು ಎರಡು ರೀತಿಯಲ್ಲಿ ನಡೆಸಲು ಸರ್ಕಾರ ಅನುಮತಿ ನೀಡಿದೆ. ಮೃತ ವ್ಯಕ್ತಿಯ ಧರ್ಮ ಮತ್ತು ಆಚರಣೆಗಳಿಗೆ ಅನುಸಾರವಾಗಿ ಧಾರ್ಮಿಕ ಕ್ರಿಯೆಗಳನ್ನು ನಡೆಸಿ ಹೂಳಬಹುದು ಅಥವಾ ಸುಡಬಹುದಾಗಿದೆ. ಆಯ್ಕೆ ಸಂಬಂಧಿಕರ ವಿವೇಚನೆಗೆ ಬಿಟ್ಟದ್ದು. ಅಂತ್ಯಕ್ರಿಯೆ ವೇಳೆ ಮಂತ್ರ ಪಠಿಸುವುದು, ಪವಿತ್ರ ಜಲ ಚಿಮುಕಿಸುವುದನ್ನು ಮಾಡಬಹುದಾದರೂ ಮೃತದೇಹವನ್ನು ನಿಯೋಜಿತ ಸಿಬ್ಬಂದಿ ಹೊರತಾಗಿ ಸಂಬಂಧಿಗಳಾಗಲೀ, ಅಧಿಕಾರಿ ವರ್ಗವಾಗಲೀ ಸ್ಪರ್ಶಿಸುವಂತಿಲ್ಲ.
ಮೃತ ದೇಹ ಹೂಳುವುದೇ ಆದಲ್ಲಿ ಜಲಮೂಲಗಳಿಂದ ಕನಿಷ್ಠ 200 ಮೀಟರ್ ದೂರವಿರಬೇಕು ಮತ್ತು ಗುಂಡಿಯ ಆಳ 1.5 ಮೀಟರ್ ಆಳವಿರಬೇಕು. ಪ್ರತಿ ಸಮಾಧಿಯ ನಡುವೆ 0.4 ಮೀಟರ್ ಅಂತರವಿರಬೇಕು. ಇನ್ನು ದಹಿಸುವುದಾದರೆ ಅಂತ್ರಕ್ರಿಯೆ ನೆರವೇರಿಸುವ ಪ್ರದೇಶ ಜಲಮೂಲಗಳಿಂದ 30 ಮೀಟರ್ ದೂರದಲ್ಲಿರಬೇಕು. ಅಂತ್ಯಕ್ರಿಯೆ ನಡೆಸುವ ಪ್ರದೇಶವನ್ನು ಆರಂಭದಲ್ಲಿ ಮತ್ತು ನಂತರ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು.
ರೋಗ ನಿರೋಧಕ ಶಕ್ತಿ ಕಡಿಮೆ ಇದ್ರೆ ಅಂತ್ಯಕ್ರಿಯೆ ಸ್ಥಳಕ್ಕೆ ಪ್ರವೇಶವಿಲ್ಲ..!
ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬರುವವರಿಗೆ ನಿರ್ಬಂಧವಿದ್ದು ಆದಷ್ಟೂ ಕಡಿಮೆ ಸಂಖ್ಯೆಯಲ್ಲಿ ಬಂಧು ಮತ್ತು ಸ್ನೇಹಿತರಿರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದನ್ನು ಜಿಲ್ಲಾಡಳಿತ ನಿಯಂತ್ರಿಸಬೇಕು. ಬಂದ ಜನ ಕೂಡ ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಖ್ಯವಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 60 ವರ್ಷ ಮೇಲ್ಪಟ್ಟ ಹಿರಿಯರು ಮತ್ತು ರೋಗ ನಿರೋಧಕ ಸಾಮರ್ಥ್ಯ ಕಡಿಮೆ ಇರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಬರುವಂತಿಲ್ಲ.
ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟ ಬಳಿಕ ಅಂತ್ಯಕ್ರಿಯೆ ನಡೆಸಲು ಸರ್ಕಾರ ಇಷ್ಟೆಲ್ಲ ನಿಯಮಗಳನ್ನು ರೂಪಿಸಿದ್ದು, ಸರ್ಕಾರವೇ ಅಂತ್ಯಕ್ರಿಯೆ ನೆರವೇರಿಸಲಿದೆ. ಸಾವು ಎಂತಹ ನಿರ್ದಯಿಗಳಲ್ಲೂ, ಅಸೂಕ್ಷ್ಮ ವ್ಯಕ್ತಿಗಳ ಹೃದಯದಲ್ಲೂ ಅಂತಃಕರಣವನ್ನು ಕಲಕಿಬಿಡುತ್ತದೆ. ಅದರಲ್ಲೂ ಮೃತಪಟ್ಟ ವ್ಯಕ್ತಿಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲು ಕುಟುಂಬದ ಆಪ್ತರಿಗೇ ಅವಕಾಶವಿಲ್ಲ ಎನ್ನುವುದು ಕಠೋರವಾದರೂ, ಅರಗಿಸಿಕೊಳ್ಳಲೇಬೇಕಾದ ಸತ್ಯ. ಹೀಗಾಗಿ ಕೊರೊನಾ ಬರದಂತೆ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದೊಂದೇ ಈ ಸಂಕಟದಿಂದ ಪಾರಾಗಲು ಇರುವ ಏಕೈಕ ಮಾರ್ಗ.