ಬೆಂಗಳೂರು:ಸಂಕ್ರಾಂತಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹಬ್ಬದ ತಯಾರಿ ಅಂತ ಜನರು ಹೆಚ್ಚಾಗಿ ಅವರೇ ಬೇಳೆ, ಕಬ್ಬು, ಗೆಣಸು, ಶೇಂಗಾ ಮತ್ತು ಎಳ್ಳು ಬೆಲ್ಲ ಸೇರಿದಂತೆ ಹಬ್ಬಕ್ಕೆ ಬೇಕಾಗುವಂತಹ ಸಾಮಗ್ರಿಗಳನ್ನು ಕೊಳ್ಳಲು ಮಾರುಕಟ್ಟೆಗಳಿಗೆ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ನಗರದ ಸಸ್ಯತೋಟ ಲಾಲ್‌ಬಾಗ್‌ನಲ್ಲಿ ಹಾಪ್‌ಕಾಮ್ಸ್ ನಿಂದ ಸಂಕ್ರಾಂತಿ ಮೇಳ ಆಯೋಜಿಸಲಾಗಿದೆ.
ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮೇಳಕ್ಕೆ ಅಧಿಕೃತವಾಗಿ ಸೋಮವಾರ ಚಾಲನೆ ನೀಡಲಾಗಿದ್ದು, ಇದೇ 14ರವರೆಗೆ ನಿತ್ಯ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೇಳ ನಡೆಯಲಿದೆ. ಸಂಕ್ರಾಂತಿ ಮೇಳದಲ್ಲಿ ಹಬ್ಬಕ್ಕೆ ಬೇಕಾಗುವಂತಹ ಎಲ್ಲ ಸಾಮಗ್ರಿಗಳು ಇಲ್ಲಿ ದೊರೆಯಲಿದೆ. ಕಡಿಮೆ ಮಳಿಗೆಗಳಿದ್ದರೂ ಸಹ ಗ್ರಾಹಕರಿಗೆ ಕೊರತೆಯಾಗದಂತೆ ಎಲ್ಲ ಅತ್ಯಾವಶ್ಯಕ ತರಕಾರಿ, ಹಣ್ಣುಗಳನ್ನ ಮಾರಾಟ ಮಾಡಲಾಗುತ್ತಿದೆ.
ಸಂಕ್ರಾಂತಿಗೆ ವಿಶೇಷವಾಗಿ ಬಳಸುವ ಎಲ್ಲ ಉತ್ಪನ್ನಗಳನ್ನು ಮೇಳದಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗೆಣಸು, ಅವರೆ, ಬಾಳೆ, ಬೆಲ್ಲ, ಕಬ್ಬು, ಕೊಬ್ಬರಿ, ನೆಲಗಡಲೆ, ಗಜ್ಜರಿ, ಏಲಕ್ಕಿ ಬಾಳೆ, ರಸಬಾಳೆ, ಪಚ್ಚಬಾಳೆ, ನೇಂದ್ರ ಬಾಳೆ, ಜೋಳದ ರೊಟ್ಟಿ, ಶೇಂಗಾ ಚಟ್ನಿ ಸೇರಿದಂತೆ ಹಬ್ಬಕ್ಕೆ ಬೇಕಾದ ಎಲ್ಲ ಉತ್ಪನ್ನಗಳ ಖರೀದಿಗೆ ಒಂದೇ ಕಡೆ ಮಳಿಗೆಗಳನ್ನು ತೆರೆಯಲಾಗಿದೆ.
ಈ ಮೇಳದ ವಿಶೇಷತೆ ಏನೆಂದರೆ ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮಾರಾಟ್ಟಕ್ಕಿಡಲಾಗಿದೆ. ಜೊತೆಗೆ ಬರುವ ಗ್ರಾಹಕರಿಗೂ ಇಲ್ಲಿ ವಿಶೇಷ ರಿಯಾಯತಿಗಳನ್ನ ಕೂಡ ನೀಡಲಾಗುತ್ತೆ. ಒಟ್ಟಾರೆ ಈ ಮೇಳ ಜನವರಿ 11ರಿಂದ 14ವರೆಗೆ ಅಂದರೆ 4 ದಿನಗಳ ಕಾಲ ನಡೆಯಲಿದ್ದು, ಮೂರೂ ದಿನಗಳ ಕಾಲ ತಾಜಾ ತರಕಾರಿಗಳನ್ನ ಮಾರಾಟ ಮಾಡಲಾಗುತ್ತದೆ.