ಕರ್ನಾಟಕ

karnataka

ETV Bharat / state

ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಆಡಳಿತ ನೀಡುತ್ತೇವೆ: ಸಲೀಂ ಅಹ್ಮದ್ - ಈಟಿವಿ ಭಾರತ್​ ಕನ್ನಡ ನ್ಯೂಸ್

ರಾಜ್ಯದಲ್ಲಿ ನಾವು ನಿರಂತರ ಹೋರಾಟ ಮಾಡಿಕೊಂಡು ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಸಲೀಂ ಅಹ್ಮದ್ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

By

Published : Jul 12, 2023, 8:09 PM IST

ಬೆಂಗಳೂರು:ವಿಧಾನಸಭಾ ಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ ಎಂದು ಬೀಗುವುದಿಲ್ಲ. ಜನರ ಆಶಯ ಈಡೇರಿಸಲು ಭ್ರಷ್ಟಾಚಾರ ರಹಿತವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಅವರು ಮಾತನಾಡಿದರು.

ಬಿಜೆಪಿ ಸರ್ಕಾರದ ವಿರುದ್ಧ ಜನಾದೇಶ ಲಭಿಸಿದೆ. ಸಾಕಷ್ಟು ಭ್ರಷ್ಟಾಚಾರ ಹೆಚ್ಚಾಗಿದ್ದು, ಇದೇ ಚುನಾವಣೆಯಲ್ಲಿ ಸೋಲಿಗೆ ಕಾರಣ. ಅದರಿಂದ 40 ಪರ್ಸೆಂಟ್ ಕಮೀಷನ್ ಸರ್ಕಾರವನ್ನು ಜನ ಕಿತ್ತು ಹಾಕಿದ್ದಾರೆ. ಇದೀಗ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಕ್ಕೆ ಶಾಂತಿ ಸಿಕ್ಕಿದೆ. ರಾಜ್ಯದಲ್ಲಿ ನಾವು ನಿರಂತರ ಹೋರಾಟ ಮಾಡಿ ಗೆದ್ದಿದ್ದೇವೆ. ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಆಡಳಿತ ನೀಡುತ್ತೇವೆ. ರಾಜ್ಯಪಾಲರ ಭಾಷಣ ಸರ್ಕಾರದ ಅಭಿವೃದ್ಧಿಯ ದಿಕ್ಸೂಚಿ. ಬಿಜೆಪಿ ಸರ್ಕಾರ ಇವನಾರವ ಎಂದು ಕೇಳಿತ್ತು. ನಾವು ಇವ ನಮ್ಮವ ಎಂದು ಹೋದೆವು. ಜನ ಕೈ ಹಿಡಿದಿದ್ದಾರೆ ಎಂದರು.

ಪಕ್ಷಪಾತ ಧೋರಣೆಯನ್ನು ಬಿಜೆಪಿ ಮಾಡುತ್ತಿದೆ. ಜನರಿಗೆ ಅನುಕೂಲ ಮಾಡಿಕೊಡುವ ಕೆಲಸದಲ್ಲೂ ರಾಜಕೀಯ ಏಕೆ? ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ದು ಯಾಕೆ? ನಾವು ಈಗ ಮತ್ತೆ ಕ್ಯಾಂಟೀನ್​ ತೆರೆಯುತ್ತಿದ್ದೇವೆ. ಅಧಿಕಾರಕ್ಕೆ ಬಂದ ಮೇಲೆ ನಾವು ಈಗಾಗಲೇ ಮೂರು ಭಾಗ್ಯ ನೀಡಿದ್ದೇವೆ ಎಂದು ತಿಳಿಸಿದ ಸಲೀಂ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರು ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ. ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಗೆ ಅಕ್ಕಿ ನಾವು ಕೊಳ್ಳುತ್ತೇವೆ ಎಂದರೂ ಅಕ್ಕಿ ಕೊಡುತ್ತಿಲ್ಲ ಎಂದಾಗ ಸದನದಲ್ಲಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಅಕ್ಕಿಯನ್ನು ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭಕ್ಕಾಗಿ ಸಂಗ್ರಹಿಸಿ ಇಡಲಾಗಿದೆ. ಸುಳ್ಳು ಆರೋಪ ಸರಿಯಲ್ಲ ಎಂದು ದೂರಿದರು. ಸಲೀಂ ಅಹ್ಮದ್ ಆಡಿದ ಪ್ರತಿ ಮಾತಿಗೂ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಕೇಂದ್ರದ ವಿರುದ್ಧ ಸಲೀಂ ಅಹ್ಮದ್ ತಮ್ಮ ಆಕ್ರೋಶ ಹೊರಹಾಕುತ್ತಲೇ ಸಾಗಿದರು. ಜನರಿಗೆ ಮನ್ ಕಿ ಬಾತ್ ಬೇಕಿಲ್ಲ. ಕಾಮ್ ಕಿ ಬಾತ್ ಆಡಿ ಎನ್ನುತ್ತಿದ್ದಾರೆ. ನಾವು ನಮಗೆ ಕೇಂದ್ರದಿಂದ ಆದ ಅನ್ಯಾಯವನ್ನು ನಾವು ಜನರ ಮುಂದೆ ಕೊಂಡೊಯ್ಯುತ್ತೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುತ್ತೇವೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಮುಂದಿನ ಹತ್ತು ವರ್ಷ ನಾವು ದೇಶದಲ್ಲಿ ಬಿಜೆಪಿಯನ್ನು ಪ್ರತಿಪಕ್ಷದಲ್ಲಿ ಕೂರಿಸುತ್ತೇವೆ ಎಂದು ಹೇಳಿದರು.

5 ಭಾಗ್ಯಗಳ ನಡುವೆ ಗಿರಕಿ : ಬಿಜೆಪಿ ಶಾಸಕ ಕೇಶವ್ ಪ್ರಸಾದ್ ಮಾತನಾಡಿ, ರಾಜ್ಯಪಾಲರ ಮೂಲಕ ಭಾಷಣ ಮುಂದಿನ ದಿಕ್ಸೂಚಿ ಆಗಲಿದೆ ಎಂದು ಭಾವಿಸಿದ್ದೆವು. ಆದರೆ, ಅದು ಆಗಿಲ್ಲ. ಎಲ್ಲ ವರ್ಗವನ್ನು ಅಭಿವೃದ್ಧಿ ಯತ್ತ ಕೊಂಡೊಯ್ಯಬೇಕಿತ್ತು. ಕೇವಲ 5 ಭಾಗ್ಯಗಳ ನಡುವೆ ಗಿರಕಿ ಹೊಡೆಯುತ್ತಿದ್ದಾರೆ. 22 ಲಕ್ಷ ಮತ ಅಂತರ ಅವರಿಗೆ ಸಿಕ್ಕಿದೆ. 38 ಸ್ಥಾನಗಳಲ್ಲಿ ನಾವು 10 ಸಾವಿರ ಮತಗಳ ಅಂತರದ ಸೋಲನ್ನು ಅನುಭವಿಸಿದ್ದೇವೆ. ಇದರಿಂದ ಕಾಂಗ್ರೆಸ್ ಸರ್ಕಾರ ಎಚ್ಚರ ವಹಿಸಬೇಕು.

ನಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬರ, ತಕ್ಷಣ ಅತಿವೃಷ್ಟಿ, ಆಮೇಲೆ ಕೊರೋನಾ, ನಂತರ ಓಮಿಕ್ರಾನ್. ಒಂದರ ನಂತರ ಒಂದು ಸಮಸ್ಯೆ ಎದುರಾಯಿತು. 5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಬೇರೆ ರಾಜ್ಯ, ದೇಶಗಳು ಮಾಡಿದ ಅಂದಾಜಿಗೆ‌ ಬಹಳ ಸುಧಾರಣೆ ನಮ್ಮದು. ರಾಷ್ಟ್ರ, ರಾಜ್ಯದ ಹಿತ ಬಂದಾಗ ಎಚ್ಚರಿಕೆಯ ಹೆಜ್ಜೆ ಇಡಬೇಕು. ಜಗತ್ತಿನ ಆರ್ಥಿಕತೆ ಮುಂದುವರಿಯಬೇಕಾದರೆ ಭಾರತದ ಆರ್ಥಿಕತೆ ಮುಂದುವರಿಯಬೇಕು ಎಂದು ಹೇಳಿದರು.

ದೇಶದ ತಾಂತ್ರಿಕ ಉತ್ಪಾದನೆಯನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದು, ಒಂದಿಷ್ಟು ಕಾನೂನನ್ನು ಬದಲಿಸುವ ಮಾತನ್ನು ಆಡುವ ಸಂದರ್ಭದಲ್ಲಿ ಕಿತ್ತು ಬಿಸಾಕ್ತೀವಿ ಅನ್ನಲಾಗಿದೆ. ನೀರಾವರಿ ರೈತರ ಬದುಕಿನ ಸುಧಾರಣೆ ಪ್ರಮುಖ. ನೀರಾವರಿ ಯೋಜನೆ ದಡ ಮುಟ್ಟಿಸುವ ಮಾತನ್ನಾಡಬೇಕು. ರೈತರಿಗೆ ಬೇಕಾದ ಕೃಷಿ ವಸ್ತುಗಳನ್ನು ಕಡಿಮೆ‌ ಬೆಲೆಗೆ‌ ಇಂದು ಕೇಂದ್ರ ಸಬ್ಸಿಡಿ ನೀಡುತ್ತಿದೆ. ಇಂದು ರಿಯಾಯಿತಿ ದರದಲ್ಲಿ ಒಂದಿಷ್ಟು ಸವಲತ್ತು ಸಿಗುತ್ತದೆ. ಅದಕ್ಕೆ ನಾವು ಕೇಂದ್ರಕ್ಕೆ ಆಭಾರಿ ಆಗಿರಬೇಕು.

ಎಪಿಎಂಸಿ ದುಃಸ್ಥಿತಿ ಸುಧಾರಣೆಗೆ ಕಾನೂನು ತಂದಿದ್ದೇವೆ. ಚೀನಾಗೆ ನಾವು ಸೆಡ್ಡು ಹೊಡೆಯಬೇಕು ಎಂದರೆ ಪ್ರತಿಪಕ್ಷದ ನಾಯಕರು ವಿದೇಶದಲ್ಲಿ ಚೀನಾ ರಾಷ್ಟ್ರವನ್ನು ಹೊಗಳುತ್ತಾರೆ. ದೇಶವನ್ನು, ಪ್ರಧಾನಿಯನ್ನು ವಿದೇಶದಲ್ಲಿ ಅವಹೇಳನ ಮಾಡುವುದು ಎಷ್ಟು ಸರಿ? ರಾಷ್ಟ್ರೀಯ ನಾಯಕರು ಎನಿಸಿಕೊಂಡವರು ವಿದೇಶಕ್ಕೆ ಹೋದಾಗ ಹೇಗೆ ನಡೆದುಕೊಳ್ಳಬೇಕು ಎಂಬ ಸೌಜನ್ಯ ಇರಬೇಕು ಎಂದು ರಾಹುಲ್ ಗಾಂಧಿ ಹಾಗೂ ಇಂದಿರಾಗಾಂಧಿ ಅವರ ಹೆಸರು ಪ್ರಸ್ತಾಪಿಸದೇ ಕಾಂಗ್ರೆಸ್ ಸರ್ಕಾರವನ್ನು ಕೇಶವ್ ಪ್ರಸಾದ್ ತರಾಟೆಗೆ ತೆಗೆಕೊಂಡಾಗ ಆಕ್ರೋಶ ಗೊಂಡ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ರೋಶ ಹೊರಹಾಕಿದರು.

ಸರ್ಕಾರದ ಆಡಳಿತ ಖಂಡನೆ : ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್​ ಆಳ್ವಿಕೆ ಎಂದಾಗ ಅನುಮಾನ ಆಗುತ್ತಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ 24 ಮಂದಿ ಬಿಜೆಪಿ ಕಾರ್ಯಕರ್ತರ ಕೊಲೆ ಆಗಿತ್ತು. ಈಗ ಅದೇ ಸರಣಿ ಮತ್ತೆ ರಾಜ್ಯದಲ್ಲಿ ಆರಂಭವಾಗಿದೆ. ವಿದ್ಯುತ್ ಮಾಫಿ ಸೇರಿದಂತೆ ಹಲವು ವಿಚಾರ ಪ್ರಸ್ತಾಪಿಸಿ ಸರ್ಕಾರದ ಆಡಳಿತವನ್ನು ಖಂಡಿಸಿದರು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಒತ್ತು ನೀಡಿ : ಇದೇ ವೇಳೆ ಜೆಡಿಎಸ್ ಶಾಸಕ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರದ ಮುಂದೆ ಸವಾಲುಗಳಿವೆ. ಶಿಕ್ಷಣ, ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು. ಗ್ರಾಮೀಣ ಭಾಗದ ಶಿಕ್ಷಣಕ್ಕೆ ಒತ್ತುಕೊಡಬೇಕು. 63 ಸಾವಿರ ಶಿಕ್ಷಕರ ಹುದ್ದೆ ತುಂಬಬೇಕು. ಮೂಲ ಸೌಕರ್ಯ ಕಲ್ಪಿಸಬೇಕು. ವಿದ್ಯಾಭ್ಯಾಸಕ್ಕೆ ಕೊರತೆ ಆಗದ ರೀತಿ‌ ಸರ್ಕಾರ ಕಾರ್ಯನಿರ್ವಹಿಸಬೇಕು. ಕೋಲಾರಕ್ಕೆ ವೈದ್ಯಕೀಯ ಶಿಕ್ಷಣ ಕಾಲೇಜು ಸ್ಥಾಪನೆ ಆಗಬೇಕಿದೆ. 30 ಸಾವಿರ ಜನ ಇದ್ದಾಗ ಇದ್ದ ಸರ್ಕಾರಿ‌ ಆಸ್ಪತ್ರೆ 1.7 ಲಕ್ಷ ಜನಸಂಖ್ಯೆ ತಲುಪಿದಾಗಲೂ ಅದೇ ಅನಿವಾರ್ಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಉನ್ನತಿ ಕಂಡಿಲ್ಲ ಎಂದರು.

ಜನರನ್ನು ಸ್ವಾವಲಂಬಿ ಮಾಡಿ :ಅನ್ನಭಾಗ್ಯ ಯೋಜನೆ ಅಡಿ 10 ಕೆ.ಜಿ ಅಕ್ಕಿ ನೀಡಿದ್ದರೆ ಬೇರೆ ರೀತಿ ಬಳಕೆ ಆಗುತ್ತಿತ್ತು. ಈಗ 5 ಕೆಜಿ ಅಕ್ಕಿ ಬದಲು ಹಣ ಕೊಡುವ ನಿರ್ಧಾರ ಉತ್ತಮ. ಅಕ್ಕಿ ಗುಣಮಟ್ಟದ್ದು ಸಿಗಲ್ಲ. ಅದನ್ನು ರಂಗೋಲಿ ಪುಡಿಗೆ ಬಳಸಿದ್ದನ್ನು ಕಂಡಿದ್ದೇನೆ. ಇಂದು ಜನರಿಗೆ ಅನ್ನಕ್ಕೆ ಕೊರತೆ ಇಲ್ಲ. ಹೀಗಾಗಿ ಜನರನ್ನು ಸ್ವಾವಲಂಬಿ ಆಗಿಸಿ, ಪರಾವಲಂಬಿ ಆಗದಂತೆ ಮಾಡಿ. ಈ ಬಗ್ಗೆ ಸರ್ಕಾರ ಆತ್ಮಾವಲೋಕನ ಮಾಡಬೇಕು. ಜನರನ್ನು ಸ್ವಾವಲಂಬಿ ಆಗಿಸಲು ಸರ್ಕಾರ ಉತ್ತೇಜಿಸಬೇಕು.

ಉಚಿತ ಯೋಜನೆಗಳನ್ನು ಕೊಡುತ್ತಾ ಹೋದರೆ ಜನ ಬೆಳೆಯುವ ಕಾರ್ಯ ಎಲ್ಲಿಂದ ಮಾಡುತ್ತಾರೆ. ಕಾರ್ಮಿಕರು ಸಿಗದಂತೆ ಆಗುತ್ತದೆ. ಅಕ್ಕ-ಪಕ್ಕದ ರಾಜ್ಯದಲ್ಲಿ ಉಚಿತ ನೀಡಿ ಕಾರ್ಮಿಕರು ಸಿಗದಂತೆ ಮಾಡಿಕೊಂಡಿದ್ದಾರೆ. ನಾವು ಹಾಗೆ ಆಗಬಾರದು. ದುಡಿಯುವ ಕೆಲಸ ಮಾಡುವವರಿಗೆ ಕೆಲಸ ಕೊಡದೇ ಉಚಿತ ಸವಲತ್ತು ನೀಡಿದರೆ ಕೆಲಸ ಮಾಡುವವರು ಯಾರು? ಉಚಿತ ಕೊಡುತ್ತಾ ಸಾಗಿದರೆ ಇದೇ ಸರ್ಕಾರಕ್ಕೆ ದೊಡ್ಡ ಸವಾಲು ಆಗುತ್ತಾರೆ ಎಂದು ನಾರಾಯಣಸ್ವಾಮಿ ಉಚಿತ ಯೋಜನೆಗಳನ್ನು ಟೀಕೆ ಮಾಡಿದರು.

ಈ ಬಾರಿ ಮುಂಗಾರು ಆಗದಿರುವುದರಿಂದ ರೈತರ ಬೆಳೆ ಉತ್ತೇಜನ, ಹಾನಿಗೆ ಪರಿಹಾರ ಕುರಿತು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವೇ ಆಗಿಲ್ಲ. ರಾಷ್ಟ್ರೀಯ ಪಕ್ಷಗಳು ಉಚಿತ ನೀಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಸಾಲಕ್ಕೆ ಮಿತಿ ಬೇಡವೇ? ಮಹಿಳೆಯರಿಗೆ ಉಚಿತ ಸಂಚಾರ ಹಾಗೂ 2000 ರೂ. ನೀಡುವ ಸರ್ಕಾರ ಅವರ ತಲೆ ಮೇಲೆ ಮಾಡಿಟ್ಟಿರುವ ಸಾಲದ ಮಾಹಿತಿಯನ್ನೂ ವಿವರಿಸಬೇಕು. ಸಾರಿಗೆ ಸಂಸ್ಥೆಯ ಶೇ.60 ರಷ್ಟು ಬಸ್​ಗಳು ಅವಧಿ ಮೀರಿವೆ. ಉಚಿತ ಭಾಗ್ಯ ನೀಡಿದ ಹಿನ್ನೆಲೆ ನಷ್ಟ ಹೆಚ್ಚಾಗಲಿದೆ. ಜನರ ರಕ್ಷಣೆ ಬಗ್ಗೆ ಸರ್ಕಾರದ ಕಾಳಜಿ ಏನು? ಸಿದ್ಧತೆ ಮಾಡಿಕೊಂಡು ಯೋಜನೆ ಮಾಡಬೇಕು. ಸರ್ಕಾರಕ್ಕೆ ಮುಂದಿನ ದಿನದಲ್ಲಿ ದೊಡ್ಡ ಸವಾಲಿದೆ ಎಂದರು.

ಇದನ್ನೂ ಓದಿ :ನಾಗರಕಟ್ಟೆ ಪೂಜೆಗೆ ಅನುಮತಿ ವಿಚಾರದಲ್ಲಿ ಆಡಳಿತ ಪ್ರತಿ ಪಕ್ಷದ ನಡುವೆ ಜಟಾಪಟಿ: ಸದನದ ಬಾವಿಗಿಳಿದು ಧರಣಿ ನಡೆಸಿದ ಬಿಜೆಪಿ

ABOUT THE AUTHOR

...view details