ಹೈವ್ ಲಿಂಕ್ ಮೊಬೈಲ್ ಅಪ್ಲಿಕೇಶನ್ ಆವಿಷ್ಕಾರ ಮಾಡಿದ ವಿದ್ಯಾರ್ಥಿ ಬೆಂಗಳೂರು: ವಿಮುಖರಾಗುತ್ತಿರುವ ಕೃಷಿಕರನ್ನು ಜೇನು ಸಾಕಾಣಿಕೆಯತ್ತ ಆಕರ್ಷಿಸಿ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಲಾಭದತ್ತ ಕೊಂಡೊಯ್ಯುವ ಸಲುವಾಗಿ ಮಂಗಳೂರಿನ ವಿದ್ಯಾರ್ಥಿಯೊಬ್ಬರು ಹೈವ್ ಲಿಂಕ್ ಎಂಬ ಮೊಬೈಲ್ ಅಪ್ಲಿಕೇಶನ್ ಕಂಡುಹಿಡಿದಿದ್ದಾರೆ.
ಜೇನು ಸಾಕಾಣಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಸಿಹಿ ಕ್ರಾಂತಿಗೆ (ಮಧು ಕಾಂತ್ರಿ) ಒತ್ತು ಕೊಡುತ್ತಿದೆ. ಇದಕ್ಕಾಗಿ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮಧ್ಯೆ ಮಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನ ಅಂತಿಮ ವರ್ಷದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಅಜ್ವಿನ್ ಡಿಸೋಜಾ ಎಂಬವರು ಸೆನ್ಸಾರ್ ಆಧಾರಿತ ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ.
ಅವೈಜ್ಞಾನಿಕ ಕ್ರಮಗಳಿಂದಾಗಿ ಹಲವು ರೈತರು ಜೇನು ಸಾಕಾಣಿಕೆಗೆ ಕೈ ಹಾಕಿ ನಷ್ಟಕ್ಕೆ ಒಳಗಾಗಿದ್ದಾರೆ. ಜೇನು ಕೃಷಿಯನ್ನು ಯಾವ ರೀತಿ ಮಾಡಬೇಕು ಎಂಬುದರ ಅರಿವಿಲ್ಲದೆ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ, ರೈತರು ಈ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ವೈಜ್ಞಾನಿಕ ಪದ್ಧತಿಯಿಂದ ಜೇನು ಸಾಕಿದರೆ ಲಾಭಗಳಿಸಬಹುದು.
ತುಡುವೆ ಜೇನು ಅಥವಾ ಪೆಟ್ಟಿಗೆ ಜೇನು ಸಾಕಾಣಿಕೆಯಲ್ಲಿರುವ ರೈತರು ಅರಿವಿಲ್ಲದೆ, ಬೇಕಾದ ವಾತಾವರಣ ಕಲ್ಪಿಸದ ಪರಿಣಾಮ ನಿರೀಕ್ಷಿಸಿದಷ್ಟು ಫಲಿತಾಂಶ ಬಾರದೆ ಕಂಗಾಲಾಗಿದ್ದಾರೆ. ಇದೀಗ, ಹೈವ್ ಲಿಂಕ್ ಎಂಬ ಮೊಬೈಲ್ ಅಪ್ಲಿಕೇಷನ್ ನೆರವಿನಿಂದ ಸೂಕ್ತ ಕಾಲಕ್ಕೆ ಏನು ಮಾಡಬೇಕು ಎಂಬುದರ ಮಾಹಿತಿ ಪಡೆಯಬಹುದು.
ಇದನ್ನೂ ಓದಿ:ಮಡಿಕೇರಿಯಲ್ಲಿ ಡಿ. 24 ಮತ್ತು 25 ರಂದು 'ಜೇನು ಹಬ್ಬ'
ಪೆಟ್ಟಿಗೆ ಜೇನಿನಲ್ಲಿ ಗೂಡು ಬಿದ್ದಿರುವುದು, ತಾಪಮಾನ ಏರಿಳಿತ, ನೀರಿನಾಂಶದ ಕೊರತೆ ಹಾಗೂ ಜೇನಿಗೆ ಕೃತಕ ಆಹಾರ ಕಡಿಮೆಯಾದರೆ ಅಥವಾ ಯಾರಾದರೂ ಕಳ್ಳತನ ಮಾಡಲು ಪ್ರಯತ್ನಿಸಿದರೆ ಸಿದ್ಧಪಡಿಸಿರುವ ಮೊಬೈಲ್ ಅಪ್ಲಿಕೇಷನ್ಗೆ ಸಂದೇಶ ಬರುತ್ತದೆ. ರೋಗ-ರುಜಿನಗಳಿಂದ ಜೇನು ನೋಣ ಸತ್ತು ಬಿದ್ದಿರುವುದು ಅಥವಾ ಸ್ಥಳಾಂತರವಾದರೂ ತಿಳಿಯಲಿದೆ.
ಇದನ್ನೂ ಓದಿ:ಸಿಹಿ ಜೇನು ಸಾಮಾನ್ಯ.. ಬಿಳಿಗಿರಿ ಬನದಲ್ಲಿ ಸಿಗುತ್ತಿದೆ ಕಹಿ ಜೇನು
ಸೆನ್ಸಾರ್ ಹೇಗೆ ಕೆಲಸ ಮಾಡುತ್ತದೆ?:ಜಮೀನು ಅಥವಾ ಹೊಲಗಳಲ್ಲಿ ಜೇನು ಸಾಕಾಣಿಕೆ ಮಾಡುವವರು ಜೇನು ಇರುವ ಪೆಟ್ಟಿಗೆಗೆ ಎರಡು ರೀತಿಯ ಸೆನ್ಸಾರ್ ಅಳವಡಿಸಬಹುದು. ಇದಕ್ಕೆ ಬ್ಯಾಟರಿಯಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನ ಬರಲಿದೆ. ಖಾಲಿಯಾದರೆ 12 ವೋಲ್ಟ್ ಸಾಮರ್ಥ್ಯದ ಚಾರ್ಜರ್ ಬಳಸಬಹುದು. ಅಗತ್ಯಬಿದ್ದಲ್ಲಿ ಜಮೀನಿನಿಂದ ನೇರವಾಗಿ ವಿದ್ಯುತ್ ಸಂಪರ್ಕ ಪಡೆಯಬಹುದು. ತಾಪಮಾನ, ನೀರಿನಾಂಶ, ಕೃತಕ ಆಹಾರದ ಬಗ್ಗೆ ತಿಳಿಯಲು ಪೆಟ್ಟಿಗೆಯೊಳಗೆ ಸೆನ್ಸಾರ್ ಕೆಲಸ ಮಾಡಲಿದೆ. ಜೇನು ಕುಟುಂಬದ ತೂಕದ ಪ್ರಮಾಣವನ್ನು ಅರಿಯಲು ಪೆಟ್ಟಿಗೆಯ ಹೊರಗೆ ಮತ್ತೊಂದು ಸೆನ್ಸಾರ್ ಇಟ್ಟು ತಿಳಿದುಕೊಳ್ಳಬಹುದು. ಪೆಟ್ಟಿಗೆಯ ಮೇಲೆ ಸೌರಫಲಕ ಇರಲಿದೆ. ಕೃಷಿ ಬೆಳೆ ಜೊತೆ ಪರ್ಯಾಯವಾಗಿ ಜೇನು ಸಾಕಾಣಿಕೆ ಮಾಡಬಹುದಾಗಿದೆ. ನೆಟ್ವರ್ಕ್ಗಾಗಿ ಡೊಂಗಲ್ ಮೂಲಕ ಸಿಮ್ ಅಳವಡಿಸಿದರೆ ಹೈವ್ ಲಿಂಕ್ ಮೊಬೈಲ್ ಅಪ್ಲಿಕೇಷನ್ಗೆ ಎಲ್ಲಾ ಸಂದೇಶಗಳು ಬರಲಿವೆ. ಈ ಮೂಲಕ ರೈತರು ಎಚ್ಚೆತ್ತುಕೊಂಡು ಪೂರಕ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಅಜ್ವಿನ್ ಡಿಸೋಜಾ 'ಈಟಿವಿ ಭಾರತ'ಕ್ಕೆ ತಿಳಿಸಿದರು.
ಇದನ್ನೂ ಓದಿ:ಕಾಡಾನೆ ಹಾವಳಿ ನಿಯಂತ್ರಿಸಲು ಜೇನು ನೊಣ ಬಳಕೆ : ಸುಳ್ಯದಲ್ಲಿ ಮೊದಲ ಪ್ರಯೋಗ