ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಂಪುಟದಲ್ಲಿ ಅವಕಾಶ ಕೊಟ್ಟರೆ ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಚಿವ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾಗಲು ಯಾರಿಗೆ ತಾನೇ ಆಸೆ ಇರುವುದಿಲ್ಲ? ನಾನು ಆಕಾಂಕ್ಷೆ ಎನ್ನುವುದಕ್ಕಿಂತ ಹೆಚ್ಚಾಗಿ ಪಕ್ಷ ತೀರ್ಮಾನ ಮಾಡಬೇಕು. ಅದೆಲ್ಲ ಸಿಎಂ ವಿವೇಚನೆಗೆ ಬಿಟ್ಟಿದ್ದು. ನಮ್ಮನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದರು.
ಹಲವು ದಿನಗಳಿಂದ ನನ್ನ ಹೆಸರು ಕ್ಯಾಬಿನೆಟ್ ಸೇರ್ಪಡೆಗೆ ಕೇಳಿ ಬರುತ್ತಿರುವುದು ನಿಜ. ಆದರೆ, ಪಕ್ಷ ವಿರೋಧಿಯಂತಹ ಚಟುವಟಿಕೆಗಳನ್ನು ನಾನು ಮಾಡುವುದಿಲ್ಲ. ಅವಕಾಶ ಕೊಟ್ಟರೆ ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂದು ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದನ್ನು ಒಪ್ಪಿಕೊಂಡರು.
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಇಂದಿನ ಭೇಟಿ ಕಾಕತಾಳೀಯ: ಸಚಿವ ಜಾರಕಿಹೊಳಿ ನಿವಾಸಕ್ಕೆ ನಾನು ಇಂದು ಬಂದಿದ್ದು, ಕೇವಲ ಕಾಕತಾಳಿಯ ಮಾತ್ರ. ನಾನು ಸಚಿವರಿಗೆ ಕರೆ ಮಾಡಿ ನನ್ನ ಕ್ಷೇತ್ರದ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸುವ ಬಗ್ಗೆ ಮಾತುಕತೆ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದ್ದೆ. ಅವರು ನಿವಾಸಕ್ಕೆ ಬರಲು ತಿಳಿಸಿದ್ದರು. ಅದಕ್ಕಾಗಿ ನಾನು ಸಚಿವರ ಬಳಿ ಮಾತುಕತೆ ಮಾಡಲು ಇಲ್ಲಿಗೆ ಬಂದಿದೆ. ಆದರೆ, ಇಲ್ಲಿ ಶಾಸಕರು ಸೇರಿದ್ದರು. ಸಣ್ಣ ಭೋಜನಕೂಟ ಆಯಿತು ಅಷ್ಟೇ, ಬೇರೆ ಯಾವ ಚರ್ಚೆ ಆಗಿಲ್ಲ ಎಂದರು.