ಬೆಂಗಳೂರು:ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ವಿಚಾರದಲ್ಲಿ ವಿಳಂಬ ಮಾಡುತ್ತಿರುವ ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಇಂದು ಮುಖ್ಯನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ನಡೆಸಿದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠ, ನಗರದಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಕೈಗೊಂಡ ಕ್ರಮಗಳ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಲ್ಲಿಸಿದ್ದ ಪ್ರಮಾಣಪತ್ರವನ್ನು ಪಾಲಿಕೆ ಪರ ವಕೀಲರು ನ್ಯಾಯಪೀಠಕ್ಕೆ ನೀಡಿದ್ದರು.
ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ 2009 ರ ಸೆ.29ರಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸುವುದಕ್ಕೂ ಮುನ್ನ ನಗರದಲ್ಲಿ 1,893 ಅನಧಿಕೃತ ಧಾರ್ಮಿಕ ಕಟ್ಟಡಗಳಿದ್ದವು. ಆ ಪೈಕಿ 105 ಕಟ್ಟಡಗಳ ಸ್ಥಳಾಂತರ ಹಾಗೂ 280 ನೆಲಸಮಗೊಳಿಸಬೇಕಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ನಿರ್ಮಾಣಗೊಂಡಿರುವ 277 ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕಿದೆ. ಒಟ್ಟಾರೆ 382ಕಟ್ಟಡಗಳನ್ನು ನೆಲಸಮಗೊಳಿಸಬೇಕಿದೆ ಎಂದು ಪ್ರಮಾಣ ಪತ್ರದಲ್ಲಿ ಹೇಳಿದೆ.
ಪ್ರಮಾಣ ಪತ್ರವನ್ನು ಪರಿಶೀಲಿಸಿದ ನ್ಯಾಯಾಲಯ, ಒಟ್ಟು 382 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಮತ್ತು105 ಕಟ್ಟಡಗಳನ್ನು ಸ್ಥಳಾಂತರಿಸಬೇಕು ಎಂದು ಹೇಳಿರುವ ಬಿಬಿಎಂಪಿ, ಈವರೆಗೂ ಐದು ಕಟ್ಟಡಗಳನ್ನು ಮಾತ್ರ ತೆರವುಗೊಳಿಸಲಾಗಿದೆ. ಇನ್ನೂ ಒಂದೇ ಒಂದು ಕಟ್ಟಡವನ್ನೂ ಸ್ಥಳಾಂತರಿಸಿಲ್ಲ. ಇದು ಆಘಾತಕಾರಿ ವಿಷಯ. ಸುಪ್ರೀಂಕೋರ್ಟ್ ಆದೇಶ ಪ್ರಕಟಗೊಂಡ ನಂತರವೂ 277ಅನಧಿಕೃತ ಕಟ್ಟಡ ತಲೆ ಎತ್ತಿವೆ ಎಂದು ನ್ಯಾಯಪೀಠ ಪ್ರಶ್ನಿಸಿತು.
ಇನ್ನು ಕೇವಲ ಐದು ಕಟ್ಟಡ ಬಿಬಿಎಂಪಿ ತೆರವುಗೊಳಸಿದೆ. ಮಂದಗತಿಯಲ್ಲಿ ನಡೆಯುತ್ತಿರುವ ಕ್ರಮವನ್ನು ನ್ಯಾಯಾಲಯ ಒಪ್ಪಲ್ಲ. ಸ್ಥಳಾಂತರಿಸಲು ಕ್ರಮ ಜರುಗಿಸದೆ ಇರುವುದಕ್ಕೆ ಬಿಬಿಎಂಪಿ ಕಾರಣ ನೀಡಿಲ್ಲ. ತೆರವು ಮತ್ತು ಸ್ಥಳಾಂತರಕ್ಕೆ ಕಾಲಮಿತಿಯನ್ನೂ ನಿಗದಿಪಡಿಸಿಲ್ಲ ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
ಓದಿ: ಶಾಸಕರ ಮನೆ ಕಾರಿಗೆ ಬೆಂಕಿ ಇಟ್ಟ ಪ್ರಕರಣ: ಇಬ್ಬರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ತನಿಖೆ
ನಗರದಲ್ಲಿ ಇರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಮತ್ತು ಸ್ಥಳಾಂತರ ಕುರಿತು ಕಾಲಮಿತಿ ನಿಗದಿಪಡಿಸಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಹಾಗೂ ಸರ್ಕಾರಕ್ಕೆ ಮುರುವಾರದೊಳಗೆ ರಾಜ್ಯದಲ್ಲಿನ ಅನಧಿಕೃತ ಕಟ್ಟಡದ ಬಗ್ಗೆ ಮಾಹಿತಿಯನ್ನ ಪಟ್ಟಿ ರೂಪದಲ್ಲಿ ಸಲ್ಲಿಸಲು ನ್ಯಾಯಾಲಯ ಸೂಚನೆ ನೀಡಿ ವಿಚಾರಣೆ ಮುಂದೂಡಿತು.