ಕರ್ನಾಟಕ

karnataka

ETV Bharat / state

ಚುನಾವಣಾ ಅಕ್ರಮ ನಡೆಸಿ ಗೆದ್ದ ಆರೋಪ : ಹೆಚ್​ಡಿ ರೇವಣ್ಣಗೆ ಹೈಕೋರ್ಟ್ ಸಮನ್ಸ್ - ರೇವಣ್ಣ ಚುನಾವಣಾ ಅಕ್ರಮ ಆರೋಪ ಪ್ರಕರಣ

High Court summons to HD Revanna: ಚುನಾವಣಾ ಅಕ್ರಮ ಆರೋಪ ಪ್ರಕರಣ ಸಂಬಂಧ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರಿಗೆ ಹೈಕೋರ್ಟ್ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ.

Etv Bharat
Etv Bharat

By ETV Bharat Karnataka Team

Published : Sep 4, 2023, 4:17 PM IST

ಬೆಂಗಳೂರು :ಚುನಾವಣಾ ಅಕ್ರಮಗಳನ್ನು ನಡೆಸಿ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರು ಆಯ್ಕೆಯಾಗಿದ್ದು, ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ. ಹೊಳೆನರಸೀಪುರದ ಪರಾಜಿತ ಅಭ್ಯರ್ಥಿ ಹಾಗೂ ವಕೀಲ ದೇವರಾಜೇಗೌಡ ಎಂಬುವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠ, ರೇವಣ್ಣಗೆ ಸಮನ್ಸ್ ಜಾರಿ ಮಾಡಿದೆ.

ಈ ಹಿಂದೆ ಕೂಡ ವಿಚಾರಣೆ ನಡೆಸಿದ್ದ ನ್ಯಾಯಪೀಠ ಸಮನ್ಸ್ ಜಾರಿ ಮಾಡಿತ್ತು. ಆದರೆ, ಪ್ರತಿವಾದಿ ರೇವಣ್ಣ ಅವರು ಸಮನ್ಸ್ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿಗಳ ಮೂಲಕ ಮತ್ತೊಂದು ಬಾರಿ ಸಮನ್ಸ್ ಜಾರಿ ಮಾಡಿದ ಹೈಕೋರ್ಟ್ ವಿಚಾರಣೆಯನ್ನು ಸೆಪ್ಟಂಬರ್ 25ಕ್ಕೆ ಮುಂದೂಡಿದೆ.

ಅರ್ಜಿಯಲ್ಲಿನ ಅಂಶಗಳು:ವಕೀಲ ದೇವರಾಜೇಗೌಡ ಅರ್ಜಿ ಸಲ್ಲಿಸಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ ಡಿ ರೇವಣ್ಣ ಭಾರಿ ಅಕ್ರಮಗಳನ್ನು ಎಸಗಿ ಜಯಗಳಿಸಿದ್ದಾರೆ. ಜೊತೆಗೆ, ಮತ ಗಳಿಕೆಯಲ್ಲಿ 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಕೂಡ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಹಾಗಾಗಿ ಇವರಿಬ್ಬರ ಮತಗಳಿಕೆಯನ್ನು ಅಸಿಂಧುಗೊಳಿಸಬೇಕೆಂದು ಕೋರಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಹೆಚ್ ಡಿ ರೇವಣ್ಣ 88,103, ಎರಡನೇ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ 84,951 ಹಾಗೂ ಅರ್ಜಿದಾರರು 4,850 ಮತಗಳನ್ನು ಪಡೆದಿದ್ದಾರೆ. ಇನ್ನುಳಿದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ರೇವಣ್ಣ ವ್ಯಾಪಕ ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆ. ಆ ರೀತಿ ಅಕ್ರಮ ಎಸಗಿ ಗಳಿಸಿದ ಮತಗಳನ್ನು ಸಿಂಧುವೆಂದು ಪರಿಗಣಿಸಲು ಪ್ರಜಾಪ್ರತಿನಿಧಿ ಕಾಯಿದೆ 1951, ನೀತಿ ಸಂಹಿತೆ ಮತ್ತು ನಿಯಮ 1961 ಹಾಗೂ 2006ರ ಮಾರ್ಗಸೂಚಿಯಲ್ಲಿ ಅವಕಾಶವಿಲ್ಲ. ಹಾಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ಅರ್ಜಿದಾರರನ್ನು ಆಯ್ಕೆಯಾಗಿದ್ದಾರೆಂದು ಘೋಷಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ:ಸಂಸದ ಸ್ಥಾನದಿಂದ ಪ್ರಜ್ವಲ್​ ರೇವಣ್ಣ ಅನರ್ಹ: ಹೈಕೋರ್ಟ್​​ ಆದೇಶ

ರೇವಣ್ಣ ಬೆಂಬಲಿಗರಿಂದ ಹಲ್ಲೆ ಆರೋಪ:ಜೊತೆಗೆ, ಪ್ರತಿವಾದಿ ರೇವಣ್ಣ ಅವರು ಪ್ರಜಾಪ್ರತಿನಿಧಿ ಕಾಯಿದೆ 1951ರ ಹಲವು ಸೆಕ್ಷನ್​ಗಳಡಿ ಅಕ್ರಮ ಎಸಗಿದ್ದಾರೆ. ರೇವಣ್ಣ ಅವರ ಬೆಂಬಲಿಗರು ಅಣ್ಣೆಹಳ್ಳಿಯಲ್ಲಿ ಮತದಾರರಿಗೆ 2 ಕೋಳಿ ಮತ್ತು 2000 ರೂ. ನಗದು ಹಂಚಿದ್ದಾರೆ. ಶಾಂತಿಗ್ರಾಮದ ಬಳಿ ಜನರಿಗೆ ಆಮಿಷವೊಡ್ಡುತ್ತಿದ್ದುದನ್ನು ತಡೆಯಲು ಹೋದಾಗ ರೇವಣ್ಣ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಿಥುನ್, ಮೋಹನ್, ಮಂಜು ಮತ್ತು ಶಂಕರ್ ಸೇರಿ 30 ಮಂದಿ ವಿರುದ್ಧ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೇವರಾಜೇಗೌಡರ ಅರ್ಜಿಯಲ್ಲಿ ತಿಳಿಸಲಾಗಿದೆ.

ಆಸ್ತಿಯ ವಿವರಗಳೂ ಸುಳ್ಳು:ಅಲ್ಲದೆ,ರೇವಣ್ಣ ಅವರು ಸಲ್ಲಿಸಿರುವ ನಾಮಪತ್ರವೇ ದೋಷಪೂರಿತವಾಗಿದೆ. ಅವರು ತಮ್ಮ ಆಸ್ತಿ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿಲ್ಲ. ಹಲವು ಮಾಹಿತಿಯನ್ನು ಮರೆಮಾಚಿದ್ದಾರೆ. ಆದರೂ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ಸಿಂಧು ಎಂದು ಘೋಷಿಸಿದ್ದಾರೆ. ರೇವಣ್ಣರ ಪತ್ನಿ ಭವಾನಿ ರೇವಣ್ಣ ಅವರ ಆಸ್ತಿಯ ವಿವರಗಳೂ ಸಹ ಸುಳ್ಳಿನಿಂದ ಕೂಡಿವೆ ಎಂದು ದೇವರಾಜೇಗೌಡ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:'ವಕೀಲರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ': ಪ್ರಜ್ವಲ್ ರೇವಣ್ಣ

ABOUT THE AUTHOR

...view details