ಬೆಂಗಳೂರು :ಪಾಟಿ ಸವಾಲಿಗೆ ಅವಕಾಶ ನೀಡದೇ ಶಿಕ್ಷೆ ವಿಧಿಸುವುದು ನ್ಯಾಯಸಮ್ಮತವಲ್ಲ ಎಂದಿರುವ ಹೈಕೋರ್ಟ್, ಪ್ರಕರಣವನ್ನು ಮತ್ತೊಮ್ಮೆ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.
2016ರಲ್ಲಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಕ್ಸೋ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದ್ದ ನಗರದ 53ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಆರೋಪಿ ಗೋವಿಂದರಾಜು ಅಲಿಯಾಸ್ ಕುಟ್ಟಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ವಿಭಾಗೀಯ ಪೀಠ, ಆರೋಪಿಗೆ ಪಾಟಿ ಸವಾಲಿಗೆ ಅವಕಾಶ ನೀಡದೆ ಶಿಕ್ಷೆ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟು, ಶಿಕ್ಷೆ ರದ್ದುಪಡಿಸಿ ಆದೇಶಿಸಿದೆ. ಹಾಗೆಯೇ ಪ್ರಕರಣವನ್ನು 3 ತಿಂಗಳಲ್ಲಿ ಮರು ವಿಚಾರಣೆ ನಡೆಸಿ ನಿರ್ಧರಿಸುವಂತೆ ನಿರ್ದೇಶಿಸಿದೆ.